ಗುರುವಾರ , ನವೆಂಬರ್ 14, 2019
22 °C

ಭವಿಷ್ಯದಲ್ಲೂ ನಾವು ಮೋದಿ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ: ನಿತೀಶ್‌ ಕುಮಾರ್‌

Published:
Updated:
Prajavani

ಪಟ್ನಾ: ‘ಭವಿಷ್ಯದಲ್ಲೂ ನಾವು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ’ ಎಂದು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಪುನರುಚ್ಚರಿಸಿದ್ದಾರೆ. ಆ ಮೂಲಕ ಎನ್‌ಡಿಎ ಸರ್ಕಾರದಲ್ಲಿ ಆರಂಭದಲ್ಲೇ ಒಡಕಿನ ಸಣ್ಣ ಧ್ವನಿ ಮೂಡಿದಂತಾಗಿದೆ.

ಕೇಂದ್ರದ ಸಚಿವ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ನಿತೀಶ್‌ ಅವರು ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದರು. ಈ ಬಗ್ಗೆ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಮಿತ್ರಪಕ್ಷಗಳಿಗೆ ‘ಸಾಂಕೇತಿಕ ಪ್ರಾತಿನಿಧ್ಯ’ ನೀಡುವ ತೀರ್ಮಾನದಿಂದ ಬಿಜೆಪಿ ಹಿಂದೆ ಸರಿಯಲಿಲ್ಲ.

‘ಮುಂದಿನ ದಿನಗಳಲ್ಲಿ ನಾವು ಸಂಪುಟದಲ್ಲಿ ಸೇರಿಕೊಂಡರೆ ‘ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ನಾವು ಪಟ್ಟು ಹಿಡಿದಿದ್ದೆವು’ ಎಂಬ ಸಂದೇಶ ರವಾನೆಯಾಗುತ್ತದೆ. ಅದನ್ನು ನಾವು ಬಯಸುವುದಿಲ್ಲ. ನಾವು ‘ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ’ವನ್ನು ಬಯಸುತ್ತೇವೆಯೇ ವಿನಾ ‘ಸಾಂಕೇತಿಕ ಪ್ರಾತಿನಿಧ್ಯ’ವನ್ನಲ್ಲ. ವಾಜಪೇಯಿ ಅವರ ಕಾಲದಲ್ಲಿ ಪ್ರಮಾಣಕ್ಕೆ ಅನುಸಾರ ಪ್ರಾತಿನಿಧ್ಯ ಇರುತ್ತಿತ್ತು ಮತ್ತು ಅದು ಸರ್ಕಾರ ರಚನೆಗೂ ಮೊದಲೇ ತೀರ್ಮಾನವಾಗುತ್ತಿತ್ತು. ಆಗ ಸಮ್ಮಿಶ್ರ ಸರ್ಕಾರ ಇತ್ತು. ಆದರೆ ಈಗ ಒಂದೇ ಪಕ್ಷಕ್ಕೆ ಬಹುಮತ ಇದೆ’ ಎಂದು ನಿತೀಶ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ‘ಮುಂದೆಯೂ ಜೆಡಿಯು ಎನ್‌ಡಿಎಯ ಭಾಗವಾಗಿರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಬಿಹಾರದ 40ರಲ್ಲಿ 39 ಕ್ಷೇತ್ರಗಳನ್ನು ಎನ್‌ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಗೆಲುವ ರಾಜ್ಯದ ಜನರದ್ದೇ ವಿನಾ ಒಬ್ಬ ವ್ಯಕ್ತಿಗೆ ಲಭಿಸಿದ ಗೆಲುವು ಎಂಬ ಭ್ರಮೆಯಲ್ಲಿ ಯಾರೂ ಇರಬಾರದು’ ಎಂದು ಮೋದಿಯ ಹೆಸರನ್ನು ಉಲ್ಲೇಖಿಸದೆಯೇ ನಿತೀಶ್‌ ಕುಮಾರ್‌ ಟೀಕಿಸಿದ್ದಾರೆ.

‘ನಮಗೆ ಅಸಮಾಧಾನ ಇಲ್ಲ. ಆದರೆ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿರುವ ಆರ್‌ಪಿಐ ಮತ್ತು ಲೋಕಸಭೆಯಲ್ಲಿ 16 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ ಆರು ಸದಸ್ಯರನ್ನು ಹೊಂದಿರುವ ಜೆಡಿಯು ಪಕ್ಷವನ್ನು ಸಮಾನವಾಗಿ ಕಾಣುವುದು ನಮಗೆ ಒಪ್ಪಿಗೆಯಾಗಲಿಲ್ಲ’ ಎಂದು ಜೆಡಿಯು ಬಿಹಾರ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)