ಶುಕ್ರವಾರ, ಜುಲೈ 30, 2021
26 °C
ಆಗ್ರಾ: ಕೋವಿಡ್‌–19ಗೆ ಸಂಭವಿಸಿದ ಸಾವುಗಳ ಕುರಿತ ಟ್ವೀಟ್‌

ಕೋವಿಡ್‌ ಕುರಿತ ಹೇಳಿಕೆ ಹಿಂಪಡೆಯಲು ಪ್ರಿಯಾಂಕಾಗೆ ಆಗ್ರಾ ಜಿಲ್ಲಾಡಳಿತ ಗಡುವು

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಕೋವಿಡ್‌–19ಕ್ಕೆ ಸಂಬಂಧಿತ ಸಾವುಗಳ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನೀಡಿರುವ ಹೇಳಿಕೆ ಸುಳ್ಳಿನಿಂದ ಕೂಡಿದ್ದು, ದಾರಿತಪ್ಪಿಸುವಂತಿದೆ ಎಂದಿರುವ ಆಗ್ರಾ ಜಿಲ್ಲಾಡಳಿತವು, ‘24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಪ್ರಿಯಾಂಕಾ ಅವರಿಗೆ ತಾಕೀತು ಮಾಡಿದೆ.

ಆಗ್ರಾದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಯೊಳಗೆ 28 ಕೋವಿಡ್‌–19 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮದ ವರದಿಯನ್ನು ಟ್ಯಾಗ್‌ ಮಾಡಿ ಪ್ರಿಯಾಂಕಾ ಸೋಮವಾರ ಟ್ವೀಟ್‌ ಮಾಡಿದ್ದರು. ಉತ್ತರ ಪ್ರದೇಶ ಸರ್ಕಾರವು ಸತ್ಯವನ್ನು ಮುಚ್ಚಿಟ್ಟಿದ್ದು, ಇದು ಅವಮಾನಕರ ಸಂಗತಿ ಎಂದು ಹೇಳಿದ್ದರು. 

ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಪ್ರಭು ನಾರಾಯಣ್‌‌ ಸಿಂಗ್‌ ಅವರು ಪ್ರಿಯಾಂಕಾ ಅವರಿಗೆ ಇ–ಮೇಲ್‌ ಮೂಲಕ ಪತ್ರ ಬರೆದು, 24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ತಿಳಿಸಿದ್ದಾರೆ. ತಾವು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂಥದ್ದಾಗಿವೆ ಎಂದು ಹೇಳಿದ್ದಾರೆ. 

ಇಂಥ ಆರೋಪಗಳು ಕೊರೊನಾ ವಾರಿಯರ್ಸ್‌ ಹಾಗೂ ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ ಎಂದೂ ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ.

ಕಳೆದ 109 ದಿನಗಳಲ್ಲಿ ಆಗ್ರಾದಲ್ಲಿ 1,139 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 79 ಮಂದಿ ಸಾವನ್ನಪ್ಪಿದ್ದಾರೆ. 48 ಗಂಟೆಗಳಲ್ಲಿ 28 ಸಾವುಗಳು ಸಂಭವಿಸಿವೆ ಎಂಬ ವರದಿ ಸಂಪೂರ್ಣ ಸುಳ್ಳು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು