ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ವಿರುದ್ಧ ಪ್ರತಿಭಟನೆ: ಮನೆ ಖಾಲಿ ಮಾಡಿಸಿದ ಮಾಲೀಕ

ಸತತ ಏಳು ಗಂಟೆ ಮನೆಯಲ್ಲಿ ಬಂದಿಯಾಗಿದ್ದ ಮಹಿಳೆಯರು
Last Updated 9 ಜನವರಿ 2020, 19:05 IST
ಅಕ್ಷರ ಗಾತ್ರ

ನವದೆಹಲಿ: ಐದು ದಿನಗಳ ಹಿಂದೆ ದಕ್ಷಿಣ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರವಾಗಿ ಮನೆಮನೆ ಪ್ರಚಾರದಲ್ಲಿ ತೊಡಗಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ಪ್ರತಿಭ ಟನೆ ನಡೆಸಿದ್ದ ಕೇರಳ ಮೂಲದ ವಕೀಲೆ ಹಾಗೂ ಅವರ ಗೆಳತಿಯನ್ನು ಬಾಡಿಗೆ ಮನೆಯಿಂದ ಹೊರಹಾಕಲಾಗಿದೆ.

ದೆಹಲಿ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಸೂರ್ಯಾ ರಾಜಪ್ಪನ್ ಮತ್ತು ಅವರ ಸ್ನೇಹಿತೆಯು ಮಾಲೀಕನ ಸೂಚನೆ ಮೇರೆಗೆ ಮನೆ ಖಾಲಿ ಮಾಡಿದ್ದಾರೆ. ಭಾನುವಾರ ಸಿಸಿಎ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಶಾ ಅವರ ಜೊತೆಗಿದ್ದ ಸುಮಾರು 150 ಬೆಂಬಲಿಗರು ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆ ಕೂಗಿದ್ದರು.

ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸೂರ್ಯಾ, ‘ಸಿಎಎ ಪರ ಜಾಗೃತಿ ಮೂಡಿಸಲು ಶಾ ಅವರು ನಾವಿರುವ ಪ್ರದೇಶಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ನಮ್ಮ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಹಕ್ಕು ಚಲಾಯಿಸಲು ನಿರ್ಧರಿಸಿದ್ದೆವು. ಗೃಹಸಚಿವರ ಎದುರು ಕಾಯ್ದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ನಮಗಿದು ಉತ್ತಮ ಸಂದರ್ಭ ಎಂದು ನಾನು ಭಾವಿಸಿದ್ದೆ’ ಎಂದು ಹೇಳಿದ್ದಾರೆ.

‘ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಮಗೆ ಶಾ ಬೆಂಬಲಿಗರ ಗುಂಪು ಬೆದರಿಕೆ ಒಡ್ಡಿತು. ಅಪಾರ್ಟ್‌ಮೆಂಟ್ ಕೆಳಗಿನ ಬೀದಿಯಲ್ಲಿ ಸಾಗುತ್ತಿದ್ದ ಕೆಲವರು ಮಹಡಿ ಹತ್ತಿಬಂದರು. ಜೀವಭಯದಿಂದ ಬಾಗಿಲು ಬಂದ್‌ ಮಾಡಿ ಮನೆಯೊಳಗೆ ಇರಬೇಕಾಯಿತು. ಪೊಲೀಸರು ಬರುವವರೆಗೂ ಬಾಗಿಲ ಹೊರಗಡೆ ಅವರು ಕಿರುಚಾಡುತ್ತಿದ್ದರು’ ಎಂದು ಸೂರ್ಯಾ ಹೇಳಿದ್ದಾರೆ.

‘ನಮ್ಮ ಮನೆಯ ಪ್ರವೇಶದ್ವಾರವನ್ನು ಮನೆ ಮಾಲೀಕ ಬಂದ್ ಮಾಡಿದ್ದರಿಂದ ಏಳು ಗಂಟೆ ಕಾಲ ಮನೆಯಲ್ಲಿ ಬಂದಿಯಾಗಿದ್ದೆವು. ಸಹಾಯಕ್ಕೆ ಸ್ನೇಹಿತರಿಗೆ ಕರೆ ಮಾಡಿದೆ. ಆದರೆ ಆಕ್ರೋಶಭರಿತ ಗುಂಪು ಅವರ ಮೇಲೆ ಹಲ್ಲೆ ಮಾಡಿ, ಮನೆಯತ್ತ ಬರಲು ಅವಕಾಶ ಮಾಡಿಕೊಡಲಿಲ್ಲ’ ಎಂದು ಸೂರ್ಯಾ ವಿವರಿಸಿದ್ದಾರೆ.

ಬೆಂಬಲಿಗರಲ್ಲಿ ಒಬ್ಬರಾಗಿದ್ದ ಮನೆ ಮಾಲೀಕ, ಹೊರಹಾಕುತ್ತೇನೆ ಎಂದಿದ್ದ. ಪೊಲೀಸರು ಬಂದ ನಂತರ ಹೊರಬಂದೆವು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT