ಶನಿವಾರ, ಜೂಲೈ 4, 2020
24 °C
ವರ್ಷದಲ್ಲಿ 15 ದಿನಗಳ ಆಯ್ಕೆ: ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯ

ಮನೆಯಿಂದ ಕೆಲಸ: ಮಾರ್ಗಸೂಚಿ ಪ್ರಕಟಿಸಿದ ಸಿಬ್ಬಂದಿ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕವೂ ಮನೆಯಿಂದಲೇ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಅರ್ಹ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವರ್ಷದಲ್ಲಿ 15 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡುವ ಸಾಧ್ಯತೆಗಳ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಕಚೇರಿಗಳಲ್ಲಿಯೂ ಅಂತರ ಕಾಪಾಡುವುದು ಅನಿವಾರ್ಯ. ಈಗಾಗಲೇ  ಹಲವು ಸಚಿವಾಲಯಗಳು ಮತ್ತು ಇಲಾಖೆಗಳು ಕಂಪ್ಯೂಟರ್‌ ವ್ಯವಸ್ಥೆ ಹೊಂದಿರುವ ‘ಇ–ಕಚೇರಿ’ ಮತ್ತು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಕಾರ್ಯನಿರ್ವಹಿಸಿವೆ. ಭವಿಷ್ಯದಲ್ಲೂ ಕಚೇರಿಗಳಲ್ಲಿ ಕಡಿಮೆ ಸಿಬ್ಬಂದಿ ಹಾಜರಾತಿ ಮತ್ತು ಪಾಳಿ ಪ್ರಕಾರ ಕಾರ್ಯನಿರ್ವಹಿಸಬೇಕಾಗಿದೆ. ಉಳಿದವರು ಮನೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ನೌಕರರಿಗೆ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ಗಳನ್ನು ಆಯಾ ಇಲಾಖೆಗಳು ಒದಗಿಸಲಿವೆ. ಮನೆಯಿಂದ ಕೆಲಸ ಮಾಡುವ ಇಂಟರ್‌ನೆಟ್‌ ಬಿಲ್‌ ಅನ್ನು ಮರುಪಾವತಿ ಮಾಡಿಕೊಳ್ಳುವ ಅವಕಾಶವಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸದ್ಯಕ್ಕೆ 75 ಇಲಾಖೆಗಳು ‘ಇ–ಕಚೇರಿ’ ವ್ಯವಸ್ಥೆಯನ್ನು ಬಳಸುತ್ತಿವೆ. ಇವುಗಳಲ್ಲಿ 57 ಇಲಾಖೆಗಳು ಶೇಕಡ 80ರಷ್ಟು ಪ್ರಗತಿ ಸಾಧಿಸಿವೆ. ಆದರೆ, ಸರ್ಕಾರಿ ಇಲಾಖೆಗಳಲ್ಲಿನ ಮಾಹಿತಿಯ ಸುರಕ್ಷತೆ ಮತ್ತು ಭದ್ರತೆಯೂ ಮುಖ್ಯವಾಗಿದೆ. ವರ್ಗೀಕೃತ ದಾಖಲೆಗಳು ಅಥವಾ ಕಡತಗಳಿಗೆ ಸಂಬಂಧಿಸಿದ ಕಾರ್ಯವನ್ನು ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ವರ್ಗೀಕೃತ ಮಾಹಿತಿಗೆ ಸಂಬಂಧಿಸಿದ ಕಾರ್ಯಗಳನ್ನು ‘ಇ–ಕಚೇರಿ’ ವ್ಯವಸ್ಥೆಯ ಮೂಲಕ ಕೈಗೊಳ್ಳಬಾರದು ಎಂದು ಗೃಹ ಸಚಿವಾಲಯವೂ ಸೂಚಿಸಿದೆ. ಹೀಗಾಗಿ, ಇಂತಹ ಕಾರ್ಯಗಳಿಗೆ ಅವಕಾಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವರ್ಗೀಕೃತ ಕಡತಗಳು ಅಥವಾ ಮಾಹಿತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ‘ಇ–ಕಚೇರಿ’ ವ್ಯವಸ್ಥೆ ಬಗ್ಗೆ ಸೂಕ್ತ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ತಿಳಿಸಿದೆ.

ಇಲಾಖೆಗಳು ನೀಡುವ ಲ್ಯಾಪ್‌ಟಾಪ್‌ನಲ್ಲೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅನಧಿಕೃತ ವೆಬ್‌ಸೈಟ್‌ಗಳು ಮತ್ತು ವೈರಸ್‌ಗಳಿಂದ ರಕ್ಷಣೆ ದೊರೆಯುವಂತೆ ಎನ್‌ಐಸಿ ಕ್ರಮಕೈಗೊಳ್ಳಲಿದೆ. ಅಧಿಕಾರಿಗಳು ಸಹ ಯಾವುದೇ ಮಾಹಿತಿ ಕಳ್ಳತನವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳು ಮೇ 21ರೊಳಗೆ ಈ ವ್ಯವಸ್ಥೆ ಬಗ್ಗೆ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು