ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸಂಪುಟ: 10 ಮಂದಿಗಷ್ಟೇ ಮಂತ್ರಿ ಭಾಗ್ಯ?

ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿಯಲ್ಲಿ ಭಾರಿ ವಿರೋಧ
Last Updated 5 ಫೆಬ್ರುವರಿ 2020, 11:11 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಎಷ್ಟು ಮಂದಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. 13 ರ ಬದಲಿಗೆ 10 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ವದಂತಿ ರಾಜಧಾನಿಯಲ್ಲಿ ದಟ್ಟವಾಗಿ ಹರಡಿದೆ.

ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ವಿರೋಧ ಮುಂದುವರಿದಿದೆ. ಕೆಲವು ಶಾಸಕರು ಪ್ರತ್ಯೇಕ ಸಭೆ ನಡೆಸಿರುವುದು ಮಾತ್ರವಲ್ಲದೆ ಟ್ವಿಟ್‌ಗಳ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. ಮಂಗಳವಾರ ಸವದತ್ತಿ ಶಾಸಕ ಆನಂದ ಮಾಮನಿ ಟ್ವಿಟ್‌ ಮೂಲಕ ಸಿಟ್ಟು ಹೊರ ಹಾಕಿದ್ದರು. ಬುಧವಾರ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಟ್ವಿಟ್‌ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಶಾಸಕರಾದ ಉಮೇಶ್‌ ಕತ್ತಿ, ನೆಹರೂ ಓಲೆಕಾರ್‌, ಅರವಿಂದ ಲಿಂಬಾವಳಿ, ಡಾ.ಸುಧಾಕರ್‌ ಅವರು ಬೆಳಿಗ್ಗೆಯೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ನೆಹರೂ ಓಲೆಕಾರ್‌ ಅವರು ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿಯವರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಪರಿಶಿಷ್ಟ ಜನಾಂಗದ ಬಲಗೈಯವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.

ರೇಣುಕಾಚಾರ್ಯ ಟ್ವೀಟ್‌

ಬಿಎಸ್‌ವೈ ನಮ್ಮ ನಾಯಕರು. ನಾಯಕತ್ವ, ಪಕ್ಷ ಮತ್ತು ಸರ್ಕಾರದ ವಿರುದ್ಧ ಯಾರೂ ಧ್ವನಿ ಎತ್ತಿಲ್ಲ ಮತ್ತು ಎತ್ತುವುದೂ ಇಲ್ಲ. ಆದರೆ, ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದವರಿಗೆ ಅವಕಾಸ ನೀಡಿ, ಪ್ರಾದೇಶಿಕ ಸಮತೋಲನ ಕಾಪಾಡಬೇಕಾಗಿದೆ ಎಂದು ರೇಣುಕಾಚಾರ್ಯ ಟ್ವೀಟ್‌ ಮಾಡಿದ್ದಾರೆ.

ವರಿಷ್ಠರ ಅಂಗಳದಲ್ಲಿ ಚೆಂಡು

ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ಆದೇಶವನ್ನು ನಾವು ಪಾಲಿಸುತ್ತೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬ ತಾರತಮ್ಯವಿಲ್ಲ. ಒಮ್ಮೆ ಬಿಜೆಪಿ ಸೇರಿದ ಬಳಿಕ ಬಿಜೆಪಿಯವರೇ ಆಗುತ್ತಾರೆ. ಹೊರಗಿನಿಂದ ಬಂದವರು, ಇಲ್ಲೇ ಇದ್ದವರು ಎಂಬ ಅರ್ಥದಲ್ಲಿ ನೋಡುವುದೂ ಇಲ್ಲ ಎಂದವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT