ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬ್ಯಾಂಕ್‌: 18 ಸಾವಿರ ಹುದ್ದೆಯಲ್ಲಿ ಕನ್ನಡಿಗರಿಗೆ ದಕ್ಕಿದ್ದು 1,060!

ಕನ್ನಡ ಕಡ್ಡಾಯ ನಿಯಮ ರದ್ದು
Last Updated 28 ಜೂನ್ 2019, 20:01 IST
ಅಕ್ಷರ ಗಾತ್ರ

ಧಾರವಾಡ: ಗ್ರಾಮೀಣ ಬ್ಯಾಂಕುಗಳ ವಿವಿಧ ಹುದ್ದೆಗಳ ನೇಮಕಕ್ಕೆ 10ನೇ ತರಗತಿವರೆಗೂ ಆಯಾ ರಾಜ್ಯ ಭಾಷೆಗಳ (ಕನ್ನಡ) ಕಲಿಕೆ ಕಡ್ಡಾಯ ಎನ್ನುವ ನಿಯಮ ಕೈಬಿಟ್ಟಿದ್ದರಿಂದಾಗಿ, ಹೆಚ್ಚಿನ ಹುದ್ದೆಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ.

ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭವಾದ ಗ್ರಾಮೀಣ ಬ್ಯಾಂಕಿಂಗ್ ಸೇವೆಗೆ ಈಗ 43 ವರ್ಷ. ಇದರ ಉದ್ಯೋಗಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಉದ್ಯೋಗಿಗಳಿಗೆ ಸರಿಸಮಾನವಾದ ವೇತನ ಪಡೆಯುತ್ತಿದ್ದಾರೆ.

ಮುಂಬೈನಲ್ಲಿರುವ ಭಾರತೀಯ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಮಂಡಳಿ (ಐಬಿಪಿಎಸ್‌), ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. ಕ್ಲರಿಕಲ್ ಮತ್ತು ಗ್ರೇಡ್‌–1 ಅಧಿಕಾರಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿವರೆಗೂ ರಾಜ್ಯ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿತಿರಬೇಕು ಎಂಬ ನಿಯಮ ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಆಯಾ ರಾಜ್ಯ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದು ಹೇಳಿತು. ನೇಮಕಗೊಂಡ 6 ತಿಂಗಳ
ಒಳಗಾಗಿ ಆ ಪ್ರದೇಶದ ಭಾಷೆ ಕಲಿಯಬೇಕು ಎಂದೂ ನಿಯಮ ಬದಲಿಸಿತು. ಇದು ಅನ್ಯ ಭಾಷಿಕರಿಗೆ ವರವಾಯಿತು. ನಾಲ್ಕು ವರ್ಷಗಳಲ್ಲಿ 18 ಸಾವಿರ ಸಿಬ್ಬಂದಿ ನೇಮಕವಾಗಿದ್ದು, ಇದರಲ್ಲಿ ಕನ್ನಡಿಗರ ಸಂಖ್ಯೆ 1,060 ಮಾತ್ರ. ಆಯ್ಕೆಯಾದವರಲ್ಲಿ ಆಂಧ್ರಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚು.

‘ಖಾಸಗಿ ಸಾಲ ನೀಡುವವರಿಂದ ರೈತರನ್ನು ರಕ್ಷಿಸುವ ಸಲುವಾಗಿ ಸರ್ಕಾರ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. ಸಾಲಕ್ಕೆ ಅರ್ಜಿ ಸಲ್ಲಿಸುವ ಬಹುತೇಕ ರೈತರು ಕನ್ನಡದಲ್ಲಿ ಭರ್ತಿ ಮಾಡುತ್ತಾರೆ. ಜತೆಗೆ ಪಹಣಿಯೂ ಕನ್ನಡದಲ್ಲೇ ಇರುತ್ತದೆ. ಇದನ್ನು ಓದಲು ಸಾಧ್ಯವಾಗದ ಅನ್ಯಭಾಷಿಕ ಸಿಬ್ಬಂದಿಯಿಂದ ವಿಳಂಬವಾಗುತ್ತಿದೆ. ಹಾವೇರಿ, ಚಿಕ್ಕೋಡಿಯಲ್ಲಿ ರೈತರು ಬ್ಯಾಂಕಿಗೆ ಬೀಗ ಹಾಕಿದ ಉದಾಹರಣೆಗಳೂ ಇವೆ’ ಎಂದು ಬ್ಯಾಂಕಿನ ಸಿಬ್ಬಂದಿಯೊಬ್ಬರು ಹೇಳಿದರು.

‘ಒಂದೊಮ್ಮೆ 7ನೇ ತರಗತಿ ಅಥವಾ 10ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯವೆಂಬ ನಿಯಮ ಇದ್ದಲ್ಲಿ, ಎಲ್ಲ ಹುದ್ದೆಗಳು ಕನ್ನಡಿಗರಿಗೇ ಸಿಗುತ್ತಿದ್ದವು’ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ವೈದ್ಯ ಅಭಿಪ್ರಾಯಪಟ್ಟರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ, ನೇಮಕಾತಿಗೂ ಮೊದಲು ಭಾಷಾ ಸಾಮರ್ಥ್ಯ ಅಳೆಯಲು ಪರೀಕ್ಷೆ ನಡೆಸಲಾಗುತ್ತದೆ. ಹಾಗೆಯೇ ಕರ್ಣಾಟಕ ಬ್ಯಾಂಕ್‌, ಸೌಥ್ ಇಂಡಿಯಾ ಬ್ಯಾಂಕ್‌ಗಳು ಕನ್ನಡ ಕಲಿಕೆ ಕಡ್ಡಾಯಗೊಳಿಸಿವೆ. ಈ ನಿಟ್ಟಿನಲ್ಲಿ 2014ರಲ್ಲಿ ತಂದ ತಿದ್ದುಪಡಿಯನ್ನು ರದ್ದುಪಡಿಸಿ, ಮೊದಲಿನಂತೆಯೇ ನಿಯಮ ರೂಪಿಸಿದರೆ ಕನ್ನಡಿಗರಿಗೂ ಉದ್ಯೋಗ ಸಿಗಲಿದೆ’ ಎಂದು ಹೇಳಿದರು.

**

ಹೊಸ ನಿಯಮದಿಂದಾಗಿ ಅನ್ಯ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಳ್ಳುತ್ತಿದ್ದಾರೆ.
- ಜಿ.ಎಂ.ವೈದ್ಯ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT