ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸೇನಾ ಭರ್ತಿ ರ‍್ಯಾಲಿ: ಮುಂದಿನ ಹಂತಕ್ಕೆ 200 ಮಂದಿ ಆಯ್ಕೆ

Last Updated 4 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿಯೇ ಮೊದಲ ಬಾರಿಗೆ ಇಲ್ಲಿ ನಡೆದ ಮಹಿಳಾ ಸೇನಾ ಪೊಲೀಸ್ ಭರ್ತಿ ರ‍್ಯಾಲಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಅ. 27ರಂದು ಬೆಳಗಾವಿಯಲ್ಲಿಯೇ ನಡೆಯಲಿರುವ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು’ ಎಂದು ಸೇನಾ ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕ ದಿಪೇಂದ್ರ ರಾವತ್‌ ತಿಳಿಸಿದರು.

ಇಲ್ಲಿಯ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದ ಶಿವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರ‍್ಯಾಲಿ ವೇಳೆ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಇಲ್ಲಿ ನಡೆದ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳು ಬಹುತೇಕ ಪೂರ್ಣಗೊಂಡಿವೆ. ಈವರೆಗೆ ಸಾವಿರ ಅಭ್ಯರ್ಥಿಗಳ ಪೈಕಿ 200 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ 3ಸಾವಿರ ಜನರನ್ನು ಆಹ್ವಾನಿಸಲಾಗಿತ್ತು. ಈ ಪೈಕಿ ಸಾವಿರ ಮಂದಿ ಬಂದಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಅಭ್ಯರ್ಥಿಗಳ ಪರೀಕ್ಷೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಂತ ಹಂತವಾಗಿ ದೇಶದ ವಿವಿಧೆಡೆ ರ‍್ಯಾಲಿ ನಡೆಯಲಿದೆ. ಒಟ್ಟು 100 ಮಂದಿಯನ್ನು ಆಯ್ಕೆ ಮಾಡಲಾಗುವುದು. ಬೆಳಗಾವಿ ಕೇಂದ್ರದಲ್ಲಿ ಎಷ್ಟು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎನ್ನುವುದು ಪ್ರಕ್ರಿಯೆ ಪೂರ್ಣಗೊಂಡ ನಂತರ ಗೊತ್ತಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದೇ ಅನೇಕ ಅಭ್ಯರ್ಥಿಗಳು ನೇಮಕಾತಿಗಾಗಿ ಬಂದಿದ್ದರು. ಆದರೆ, ಮೊದಲು ಅರ್ಜಿ ಸಲ್ಲಿಸಿ ಪ್ರವೇಶಪತ್ರಗಳನ್ನು ಪಡೆದವರಿಗೆ ಮಾತ್ರ ಅವಕಾಶ ಇತ್ತು. ಯಾರೂ ನಿರಾಸೆಗೆ ಒಳಗಾಗುವುದು ಬೇಡ. ಮತ್ತೆ ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸಿದಾಗ ಸಲ್ಲಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT