ಭೂಮಿ ಒತ್ತುವರಿ: ಬಡವರ ಮೇಲಷ್ಟೇ ಪ್ರಹಾರ...

7

ಭೂಮಿ ಒತ್ತುವರಿ: ಬಡವರ ಮೇಲಷ್ಟೇ ಪ್ರಹಾರ...

Published:
Updated:

ಬಳ್ಳಾರಿ: ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರದಿಂದ ಆಗಾಗ ಒಂದು ಬಸ್ಸೇ ಹೊರಡುತ್ತದೆ. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಸುಮಾರು 120 ಮಂದಿ ಆ ಬಸ್ಸಿನಲ್ಲಿ ಒಟ್ಟಿಗೇ ಪ್ರಯಾಣಿಸುತ್ತಾರೆ. ಅವರೆಲ್ಲರೂ ಒಂದೆರಡು ಎಕರೆಗಳನ್ನು ಒತ್ತುವರಿ ಮಾಡಿದವರು.

ಅದೇ ರೀತಿ ಚಿತ್ರದುರ್ಗದ ರಾಮಗಿರಿಯಲ್ಲೂ ನೂರಾರು ಮಂದಿ ವಿರುದ್ಧ ಒತ್ತುವರಿ ಪ್ರಕರಣ ದಾಖಲಾಗಿದೆ. ಅರಸೀಕೆರೆಯಲ್ಲಿ ಸುಮಾರು 60 ಮಂದಿ ವಿರುದ್ಧ ಪ್ರಕರಣವಿದೆ. ತುಮಕೂರು ಜಿಲ್ಲೆಯ ತಿಪಟೂರಿನ ಆರೇಳು ಮಂದಿಯೂ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ.

‘ಈ ಒತ್ತುವರಿದಾರರೆಲ್ಲರೂ ಸಣ್ಣ–ಪುಟ್ಟವರು. ಚಿಕ್ಕ ಚಿಕ್ಕ ಜಾಗಗಳನ್ನು ಒತ್ತುವರಿ ಮಾಡಿದವರು. ಆದರೆ ದೊಡ್ಡ ಮಟ್ಟದಲ್ಲಿ ಒತ್ತುವರಿ ಮಾಡಿದವರು ಇದ್ದರೂ ಅವರ ವಿರುದ್ಧ ಪ್ರಕರಣ ದಾಖಲಾಗದ ಉದಾಹರಣೆಗಳಿಲ್ಲ’ ಎನ್ನುತ್ತಾರೆ ರಾಜ್ಯದ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಬಗೆಹರಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲನೆಗಾಗಿ ರಚನೆಯಾಗಿರುವ ಉನ್ನತಮಟ್ಟದ ಮೇಲುಸ್ತುವಾರಿ ಸಮಿತಿಯ ಸದಸ್ಯ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಕುಮಾರ ಸಮತಳ. ಅಭಿವೃದ್ಧಿ ಆಯುಕ್ತರು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಎಂಟು ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳೂ ಇದ್ದಾರೆ.

* ಇದನ್ನೂ ಓದಿ: ಭೂಗಳ್ಳರಿಗೆ ಫಸಲು!

‘ರಾಜ್ಯದ ಸುಮಾರು 9.60 ಲಕ್ಷ ಎಕರೆಗೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಡುವೆ ಇರುವ ಮಾಲಿಕತ್ವದ ತಕರಾರರು ಕೂಡ ಈ ಒತ್ತುವರಿದಾರ ಕಷ್ಟವನ್ನು ಹೆಚ್ಚಿಸಿದೆ’ ಎನ್ನುತ್ತಾರೆ ಅವರು.

‘1994ರಲ್ಲಿ ಖರಾಬು ಭೂಮಿಯನ್ನು ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ನಿರ್ವಹಣೆ ಸಲುವಾಗಿ ಹಸ್ತಾಂತರಿಸಿತ್ತು. ಆದರೆ ಈಗ ಅರಣ್ಯ ಇಲಾಖೆಯು ಅಷ್ಟೂ ಭೂಮಿ ತನ್ನದಾಗಿರುವುದರಿಂದ ಒತ್ತುವರಿ ತೆರವು ಮಾಡಿ ಎನ್ನುತ್ತಿದೆ. ಹೀಗಾಗಿಯೇ ಜನರಿಗೆ ಭೂಮಿ ಸಿಗುತ್ತಿಲ್ಲ. ಈ ಸಂಬಂಧ ಸಮಿತಿಯ ಮೂರು ಸಭೆಗಳು ನಡೆದರೂ ಸಮಸ್ಯೆ ಇತ್ಯರ್ಥವಾಗಿಲ್ಲ’ ಎಂಬುದು ಅವರ ಅಸಮಾಧಾನ.

ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರು ಸಕ್ರಮಕ್ಕಾಗಿ ಬಗರ್‌ಹುಕುಂ ಸಮಿತಿಗಳ ಮುಂದೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಮಾರ್ಚ್‌ 16ರವರೆಗೂ ಗಡುವು ನೀಡಿದೆ. ರೈತರಿಗೆ ತಲಾ ಗರಿಷ್ಠ 2 ಹೆಕ್ಟೇರ್‌ವರೆಗೆ ಭೂಮಿ ಮಂಜೂರು ಮಾಡಲು ಅವಕಾಶವಿದೆ.

‘ಆದರೆ ಆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿಲ್ಲ. ಕೆಲವು ವರ್ಷಗಳ ಹಿಂದೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಕ್ಕೆ ನೋಟಿಸು ಪಡೆದವರು ಸುಮ್ಮನಾಗಿದ್ದಾರೆ. ಹೀಗಾಗಿ ನಾವೇ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ’ ಎಂದು ಹೋರಾಟ ಸಮಿತಿಯ ಜಿಲ್ಲಾ ಘಟಕದ ಮುಖಂಡ ಕರಿಯಪ್ಪ ಗುಡಿಮನಿ ತಿಳಿಸಿದರು.

* ಇದನ್ನೂ ಓದಿ: ಗುಂಟೆ ಭೂಮಿಗೆ ನೂರಾರು ಮೈಲು ಅಲೆದಾಟ!

‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಡವರ ಮೇಲಷ್ಟೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಒತ್ತುವರಿ ಮಾಡಿರುವ ದೊಡ್ಡವರ ಬಗ್ಗೆ ಅಧಿಕಾರಿಶಾಹಿಯ ಮೃದುಧೋರಣೆಯೂ ಬಡ ರೈತರನ್ನು ಕಷ್ಟಕ್ಕೆ ಸಿಲುಕಿಸಿದೆ. ಹೀಗೆ ಮಾಡಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದರಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬರದೇ ಇರುತ್ತದೆಯೇ’ ಎಂಬುದು ಕುಮಾರ ಸಮತಳ ಅವರ ಆಕ್ಷೇಪ.

 * ಉಪ ಜೀವನಕ್ಕಾಗಿ ಭೂರಹಿತರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡರೆ ಸರ್ಕಾರ ಸಕ್ರಮಗೊಳಿಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. 18 ವರ್ಷಗಳ ಹಿಂದೆ ಅಕ್ರಮ ಸಕ್ರಮಕ್ಕಾಗಿ ಪಟ್ಟಾ ನೀಡಲು ಫಾರಂ ನಂ.53 ಭರ್ತಿ ಮಾಡಿದರೂ ಅರ್ಜಿಗಳು ಪೂರ್ಣಪ್ರಮಾಣದಲ್ಲಿ ವಿಲೇವಾರಿಯಾಗಿಲ್ಲ. ಜತೆಗೆ ನಿವೇಶನ ರಹಿತರು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡರೂ ಅವುಗಳಿಗೆ ಖಾತಾ ನೀಡುತ್ತಿಲ್ಲ. ಕೃಷಿಗಾಗಿ ಅಕ್ರಮ ಜಮೀನು ಸಕ್ರಮಗೊಳಿಸಬೇಕು. ಮನೆ ನಿರ್ಮಿಸಿಕೊಂಡ ಬಡವರಿಗೂ ಮನೆಯ ಖಾತಾ ನೀಡಬೇಕು.
–ಗೌರಿಶಂಕರ ಕಿಣ್ಣಿ, ರೈತ ಮುಖಂಡ, ರಟಕಲ್, ಚಿಂಚೋಳಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !