ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ತಿಂಗಳಲ್ಲಿ 612 ರೈತರ ಆತ್ಮಹತ್ಯೆ; ಬೆಳಗಾವಿ ಜಿಲ್ಲೆಯಲ್ಲಿ 59 ಪ್ರಕರಣ ವರದಿ

Last Updated 13 ಡಿಸೆಂಬರ್ 2019, 12:13 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ವಲಯದ ಬಿಕ್ಕಟ್ಟಿನ ಪರಿಣಾಮ ಈ ವರ್ಷವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಕಳೆದ ಹನ್ನೊಂದು ತಿಂಗಳ (2019ರ ಜನವರಿಯಿಂದ ನವೆಂಬರ್‌ವರೆಗೆ) ಅವಧಿಯಲ್ಲಿ ರಾಜ್ಯದಲ್ಲಿ ನಡೆದ 612 ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ಕೃಷಿ ವಲಯದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತಿವೆ.

ಈ ವರ್ಷ ವರದಿಯಾದ 612 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 110 ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಪರಿಹಾರ ನೀಡಲು ನಿರಾಕರಿಸಲಾಗಿದೆ. 379 ಪ್ರಕರಣಗಳಿಗೆ ಪರಿಹಾರ ನೀಡಲು ಒಪ್ಪಿಗೆ ಸೂಚಿಸಲಾಗಿದ್ದು, ಅವುಗಳ ಪೈಕಿ 359 ಪ್ರಕರಣಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. 124 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಕೈಸೇರದಿರುವ ಕಾರಣಕ್ಕೆ 21 ಪ್ರಕರಣಗಳು ಬಾಕಿ ಉಳಿದಿವೆ. ಆತ್ಮಹತ್ಯೆ ಮಾಡಿಕೊಂಡ ರೈತರ ವಾರಸುದಾರರಿಗೆ, ಅಗತ್ಯ ದಾಖಲೆಗಳ ಪರಿಶೀಲನೆ ಬಳಿಕ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಗಳ ಪೈಕಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದು, 59 ರೈತರು ಸಾವಿಗೆ ಶರಣಾಗಿದ್ದಾರೆ. 37 ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, 18 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ.

ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ತಲಾ 51 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಮೂರು ಹಾಗೂ ಧಾರವಾಡದಲ್ಲಿ 19 ಪ್ರಕರಣಗಳಲ್ಲಿ ಪರಿಹಾರ ನೀಡಲು ನಿರಾಕರಿಸಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ 48 ಪ್ರಕರಣಗಳು (1 ತಿರಸ್ಕೃತ), ಮಂಡ್ಯ ಜಿಲ್ಲೆಯಲ್ಲಿ 39 (3 ತಿರಸ್ಕೃತ), ವಿಜಯಪುರ (1 ತಿರಸ್ಕೃತ) ಹಾಗೂ ಚಿತ್ರದುರ್ಗ (7 ತಿರಸ್ಕೃತ) ಜಿಲ್ಲೆಗಳಲ್ಲಿ ತಲಾ 33 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 28 ಪ್ರಕರಣಗಳು (3 ತಿರಸ್ಕೃತ), ದಾವಣಗೆರೆ (11 ತಿರಸ್ಕೃತ) ಹಾಗೂ ಚಿಕ್ಕಮಗಳೂರು (2 ತಿರಸ್ಕೃತ) ಜಿಲ್ಲೆಗಳಲ್ಲಿ ತಲಾ 26 ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ ಜಿಲ್ಲೆ (2 ತಿರಸ್ಕೃತ) ಹಾಗೂ ಯಾದಗಿರಿ ಜಿಲ್ಲೆಯಲ್ಲಿ (9 ತಿರಸ್ಕೃತ) ತಲಾ 25 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದ್ದು, ಈ ಸಾಮಾಜಿಕ ಸಮಸ್ಯೆ ಕ್ರಮೇಣ ಮಲೆನಾಡು ಪ್ರದೇಶಗಳನ್ನೂ ಕಾಡತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT