ಮಂಗಳವಾರ, ಮಾರ್ಚ್ 9, 2021
18 °C

ರಾಯಚೂರಲ್ಲಿ ಸಿಡಿಲಿಗೆ ಮಹಿಳೆ ಬಲಿ; ಅಫಜಲಪುರದಲ್ಲಿ ಶೆಡ್ ಬಿದ್ದು ಪೊಲೀಸರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲಬುರ್ಗಿ ಸೇರಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ. ರಾಯಚೂರಿನಲ್ಲಿ ಸಿಡಿಲು ಬಡಿದು ಮಹಿಳೆ ಸತ್ತಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಅಫಜಲಪುರದಲ್ಲಿ ತಾಲ್ಲೂಕಿನಲ್ಲಿ ಚೆಕ್‌ಪೋಸ್ಟ್‌ ಶೆಡ್ ಬಿದ್ದು, ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡರು. 

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧೆಡೆ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಹೊತ್ತು ಧಾರಾಕಾರ ಮಳೆಯಾಯಿತು.

ಕೊಪ್ಪಳ ಜಿಲ್ಲೆಯ ಲಕಮಾಪುರ ಗ್ರಾಮದಲ್ಲಿ ಭಾರಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ವಿವಿಧೆಡೆ ಪಪ್ಪಾಯ, ದಾಳಿಂಬೆ ಗಿಡಗಳು ನೆಲಕ್ಕುರುಳಿವೆ.

ಮಹಿಳೆ, ಜಾನುವಾರು ಸಾವು: ರಾಯಚೂರು ಜಿಲ್ಲೆಯ  ಕಾಟಗಲ್‌ ದೊಡ್ಡಿಯಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ನಾಗಮ್ಮ ಅಮರಪ್ಪ (55) ಮೃತಪಟ್ಟರು. ಯಾದಗಿರಿ ಜಿಲ್ಲೆಯಲ್ಲಿ, ಬೀದರ್ ಜಿಲ್ಲೆಯಲ್ಲಿ ಮೇಕೆ, ಆಕಳು ಸತ್ತಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯಿತು. ಹಿರಿಯೂರು ತಾಲ್ಲೂಕಿನ ಬೇಟೆಮರದಟ್ಟಿಯಲ್ಲಿ ಹೆಂಚಿನ ಮನೆಯೊಂದು ಬಿರುಗಾಳಿಗೆ ಕುಸಿದುಬಿದ್ದಿದೆ.

ಕಾಪು ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವದಲ್ಲಿ ಗಾಳಿ ಸಹಿತ ಸುರಿದ ಮಳೆಗೆ ಅಪಾರ ನಷ್ಟ ಉಂಟಾಗಿದೆ.  ಬ್ರಹ್ಮಾವರ, ಮಂಗಳೂರು ನಗರದಲ್ಲೂ ಬೆಳಗಿನ ಜಾವ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಮಳೆಯಾಗಿದೆ. ವಿರಾಜಪೇಟೆ ಬಳಿ ಕೆದಮುಳ್ಳೂರು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು