ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಾಗಲು ಸ್ನಾತಕೋತ್ತರ ಪದವಿ ಕಡ್ಡಾಯ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ: ನಾಮನಿರ್ದೇಶನಕ್ಕೆ ಮಾರ್ಗಸೂಚಿ
Last Updated 20 ಜೂನ್ 2020, 19:09 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ವಿಜ್ಞಾನ ಅಥವಾ ಪರಿಸರ ಎಂಜಿನಿಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಪರಿಸರ ಸಂರಕ್ಷಣೆ ವಿಷಯದಲ್ಲಿ ಜ್ಞಾನ ಮತ್ತು ಅನುಭವ ಹೊಂದಿದ ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿಷಯ ವ್ಯವಹರಿಸುವ ಇಲಾಖೆ, ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದವರು ಮಾತ್ರ ಇನ್ನು ಮುಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಸಾಧ್ಯ.

ಸುಪ್ರೀಂಕೋರ್ಟ್ ಆದೇಶದಂತೆ, ಮಂಡಳಿಗೆ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ಮತ್ತು ಸದಸ್ಯ ಕಾರ್ಯದರ್ಶಿ ನೇಮಕಾತಿ ಸಂಬಂಧಿಸಿದ ಮಾರ್ಗಸೂಚಿಯ ಗೆಜೆಟ್‌ ಅಧಿಸೂಚನೆ ಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಅಧ್ಯಕ್ಷ ಸ್ಥಾನಕ್ಕೆ ಗರಿಷ್ಠ ವಯೋಮಿತಿ 56 ವರ್ಷ. ನಾಮನಿರ್ದೇಶನಗೊಂಡ ದಿನದಿಂದ ಮೂರು ವರ್ಷ ಅಧಿಕಾರಾವಧಿ ಇರಲಿದೆ.

ಮುಖ್ಯಮಂತ್ರಿ ಅಧ್ಯಕ್ಷರಾಗಿ ರುವ ಅರಣ್ಯ ಸಚಿವ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಯನ್ನೊಳಗೊಂಡ ಶೋಧನಾ ಹಾಗೂ ಆಯ್ಕೆ ಸಮಿತಿ ಅರ್ಹರನ್ನು ಆಯ್ಕೆ ಮಾಡಲಿದೆ.

ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಮೂರು ತಿಂಗಳ ಮೊದಲೇ ಪತ್ರಿಕೆಗಳಲ್ಲಿ ಜಾಹೀರಾತು ಮತ್ತು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಣೆ ನೀಡಿ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ಕೇಂದ್ರ ಸೇವೆಯ ಹಿರಿಯ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ರಾಜ್ಯ ಸರ್ಕಾರ ನಿಯೋಜಿಸಬಹುದು.

ಕೃಷಿ, ಮೀನುಗಾರಿಕೆ, ಅರಣ್ಯ ವಿಷಯದಲ್ಲಿ ವಿಶೇಷ ಜ್ಞಾನ ಇರುವವರು ಅಥವಾ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಪ್ರಾಯೋಗಿಕ ಅನುಭವ ಹೊಂದಿರುವವರನ್ನು ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಬಹುದು.

ಯಾವುದಾದರೂ ಕಾರಣಕ್ಕೆ ಅಧ್ಯಕ್ಷ ಸ್ಥಾನ ತೆರವಾದರೆ ಹೊಸತಾಗಿ ನಾಮನಿರ್ದೇಶನ ಮಾಡಬೇಕು. ಅಲ್ಲಿಯವರೆಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು.

ಅಧಿಕಾರೇತರ ಸದಸ್ಯರ ಸ್ಥಾನ ತೆರವಾದರೆ ಮತ್ತು ಆರು ತಿಂಗಳಿಗೂ ಹೆಚ್ಚು ಅವಧಿ ಬಾಕಿ ಉಳಿದಿದ್ದರೆ, ಹೊಸಬರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT