ಶುಕ್ರವಾರ, ಜನವರಿ 24, 2020
28 °C

ಪಿಂಚಣಿ ದುರುಪಯೋಗ ತಡೆಗೆ ಆಧಾರ್ ಜೋಡಣೆ: ಕಂದಾಯ ಸಚಿವ ಆರ್‌.ಅಶೋಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವೃದ್ಧಾಪ್ಯ ಹಾಗೂ ವಿಧವಾ ವೇತನ ದುರುಪಯೋಗ ತಡೆಗೆ ‘ಆಧಾರ್ ಜೋಡಣೆ’ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಉಡುಪಿಯಲ್ಲಿ ಬುಧವಾರ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಮಧ್ಯವರ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಪಿಂಚಣಿ ಪಡೆಯುತ್ತಿರುವ ದೂರುಗಳು ಕೇಳಿಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 800 ರಿಂದ ₹ 900 ಕೋಟಿ ಉಳಿತಾಯವಾಗಲಿದೆ ಎಂದರು.

ಉಡುಪಿಯಲ್ಲಿ ಪೈಲಟ್‌ ಯೋಜನೆ: ವೃದ್ಧಾಪ್ಯ ಹಾಗೂ ವಿಧವಾ ವೇತನಕ್ಕೆ ಬಡವರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆಧಾರ್‌ ಕಾರ್ಡ್‌ನಲ್ಲಿರುವ ವಯಸ್ಸಿನ ಮಾಹಿತಿಯನ್ನು ದಾಖಲೆಯಾಗಿ ಪರಿಗಣಿಸಿ ಹಾಗೂ ಕುಟುಂಬದ ಆದಾಯ ವಿವರ ಪರಿಶೀಲಿಸಿ, ಫಲಾನುಭವಿಗಳ ಮನೆಗಳಿಗೆ ಅಂಚೆಯ ಮೂಲಕ ಪಿಂಚಣಿಗೆ ಅರ್ಹರಾಗಿರುವ ಪತ್ರ ಕಳುಹಿಸಲಾಗುವುದು.

ಉಡುಪಿಯಲ್ಲಿ ಈಗಾಗಲೇ ಪೈಲಟ್‌ ಯೋಜನೆ ಜಾರಿಯಲ್ಲಿದ್ದು, 2000 ಮಂದಿಯ ಮನೆಗೆ ಪಿಂಚಣಿ ಮಂಜೂರಾತಿ ಪತ್ರ ಕಳುಹಿಸಲಾಗುವುದು. ಶೀಘ್ರ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಹಳ್ಳಿಗಳ ಕಡೆಗೆ ಅಧಿಕಾರಿಗಳ ನಡಿಗೆ: ತಿಂಗಳಲ್ಲಿ ಒಂದು ದಿನ ಕಂದಾಯ ಇಲಾಖೆಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಚಿಂತನೆಯಿದೆ. ಹೆಚ್ಚು ಸಮಸ್ಯೆಗಳು ಇರುವ ಹಳ್ಳಿಗಳನ್ನು ಗುರುತಿಸಿ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್‌ ಪ್ರತ್ಯೇಕವಾಗಿ ಹಳ್ಳಿಗಳಿಗೆ ತೆರಳಬೇಕು. ಅಲ್ಲಿ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಉಳಿದು ಜನರ ಅಹವಾಲು ಆಲಿಸಿ, ಸ್ಥಳದಲ್ಲಿಯೇ ಪರಿಹರಿಸಬೇಕು. ಈ ಕಾರ್ಯಕ್ರಮ ಕೂಡ ರಾಜ್ಯದಾದ್ಯಂತ ಅನುಷ್ಠಾನಕ್ಕೆ ಬರಲಿದೆ ಎಂದರು.

94 ‘ಸಿ’ ಹಾಗೂ 94 ‘ಸಿ’ ‘ಸಿ’ ಅಡಿಯಲ್ಲಿ ನಿವೇಶನ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಹಲವು ಜಿಲ್ಲೆಗಳ 15,000 ಫಲಾನುಭವಿಗಳಿಗೆ ಹಕ್ಕುಪತ್ರದ ಬದಲಾಗಿ, ನಿವೇಶನವನ್ನೇ ಅವರ ಹೆಸರಿಗೆ ಸಬ್‌ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಡಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು