ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಚಿನ್ನ ಖರೀದಿಗೆ ಮಹಿಳೆಯರ ಲಗ್ಗೆ!

ಮತದಾನದ ಬೆನ್ನಲ್ಲೇ ವ್ಯಾಪಾರಿಗಳಿಗೆ ‘ಶುಕ್ರದೆಸೆ’
Last Updated 6 ಡಿಸೆಂಬರ್ 2019, 19:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಶುಕ್ರವಾರ ನಗರದ ಚಿನ್ನದ ಮಳಿಗೆಗಳಲ್ಲಿ ವಹಿವಾಟು ದಿಢೀರ್‌ ಹೆಚ್ಚಳಗೊಂಡಿತ್ತು. ಅನಿರೀಕ್ಷಿತವಾಗಿ ಬಂದ ಈ ‘ಶುಕ್ರದೆಸೆ’ ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದೆ.

ಆಡಳಿತಾರೂಢ ಬಿಜೆಪಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಉಪ ಚುನಾವಣೆಯನ್ನು ಬಿಜೆಪಿ ಸೇರಿದಂತೆ ಹಿಂದಿನ ಮೈತ್ರಿ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್‌, ಜೆಡಿಎಸ್‌ನವರು ಕೂಡ ‘ಪ್ರತಿಷ್ಠೆ’ಯಾಗಿ ತೆಗೆದುಕೊಂಡಿದ್ದರು. ಪರಿಣಾಮ, ಅಕಾಲಿಕವಾಗಿ ಬಂದ ಈ ಚುನಾವಣೆಯಲ್ಲಿ ಹಿಂದೆಂದೂ ಕಾಣದಷ್ಟು ಹಣದ ಹೊಳೆ ಹರಿದಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ರಾತ್ರೋರಾತ್ರಿ ಕ್ಷೇತ್ರದಾದ್ಯಂತ ಹರಿದ ಕಾಂಚಾಣವನ್ನು ಕಾಪಿಟ್ಟುಕೊಂಡ ಹೆಣ್ಣು ಮಕ್ಕಳು, ಅದನ್ನು ಚಿಕ್ಕಪುಟ್ಟ ಆಭರಣಗಳು, ಗೃಹ ಬಳಕೆ ವಸ್ತುಗಳ ಖರೀದಿಗೆ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

‘ಮೂರು ಪಕ್ಷಗಳ ಅಭ್ಯರ್ಥಿಗಳು ಹಣ ಹಂಚಿದ್ದಾರೆ. ಅದರಲ್ಲೂ ಅಳಿವು, ಉಳಿವಿನ ಪ್ರಶ್ನೆಯಾದ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚಿನ ಹಣ ಹಂಚಿದ್ದಾರೆ ಎಂದು ಮತದಾರರೇ ಹೇಳಿಕೊಳ್ಳುತ್ತಿದ್ದಾರೆ. ಗುರುವಾರ ರಾತ್ರಿ ಕ್ಷೇತ್ರದಲ್ಲಿ ಕೋಟಿಗಟ್ಟಲೇ ಹಣದ ಹಂಚಿಕೆಯಾಗಿದೆ. ನಾಲ್ಕಾರು ಮತದಾರರು ಇರುವ ಮನೆಗೆ ಸುಮಾರು ₹ 20 ಸಾವಿರದಷ್ಟು ಹಣ ಸಂದಾಯವಾಗಿದೆ ಎನ್ನಲಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎ.ಟಿ.ಕೃಷ್ಣನ್.

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ನಗರ ಪ್ರದೇಶದಲ್ಲಿ ಪ್ರತಿ ಮತಕ್ಕೆ ₹3,000, ಗ್ರಾಮೀಣ ಪ್ರದೇಶದಲ್ಲಿ ₹2,000 ಮತ್ತು ಜೆಡಿಎಸ್‌ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರು ಮತಕ್ಕೆ ತಲಾ ₹1,000, ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಅವರು ತಲಾ ₹500 ಹಣ ಹಂಚಿಕೆ ಮಾಡಿದ್ದಾರೆ ಎಂಬ ವದಂತಿ ಕ್ಷೇತ್ರದಲ್ಲಿ ದಟ್ಟವಾಗಿದೆ. ಈ ಕುರಿತು ಪ್ರಶ್ನಿಸಿದರೆ, ಎಲ್ಲ ಪಕ್ಷದವರೂ ಹಣ ಹಂಚಿಕೆ ಆರೋಪ ಅಲ್ಲಗಳೆಯುತ್ತಾರೆ. ಆದರೆ, ಒಂದೇ ದಿನದಲ್ಲಿ ಬದಲಾದ ನಗರದ ಮಾರುಕಟ್ಟೆಯ ಸ್ವರೂಪ ಮಾತ್ರ ವದಂತಿಗೆ ಪುಷ್ಟಿ ನೀಡುವಂತಿದೆ.

‘ಹೆಣ್ಣು ಮಕ್ಕಳು ಚುನಾವಣೆಯಲ್ಲಿ ಅಭ್ಯರ್ಥಿಗಳು ಕೊಟ್ಟ ಹಣದ ಜತೆಗೆ ತಮ್ಮಲ್ಲಿ ಕೂಡಿಟ್ಟ ಹಣ ಸೇರಿಸಿ ಆಭರಣ ಗಳನ್ನು ಖರೀದಿಸುತ್ತಿದ್ದಾರೆ’ ಎಂದು ಸ್ವರೂಪ್ ಜ್ಯುವೆಲರ್ಸ್‌ ಮಾಲೀಕ ಪ್ರಭಾಕರ್ ಹೇಳಿದರು.

‘ಈ ಉಪಚುನಾವಣೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ದುರುಪಯೋಗಪಡಿಸಿಕೊಂಡು ಭಯಂಕರವಾಗಿ ಹಣ ಖರ್ಚು ಮಾಡಲಾಗಿದೆ’ ಎಂದು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ.

***

ಚುನಾವಣೆ ಆಯೋಗದ ಮಾರ್ಗಸೂಚಿಗಳು, ಪ್ರಜಾಪ್ರತಿನಿಧಿ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ತರುವ ಗಂಭೀರ ಪ್ರಯತ್ನ ಮಾಡಲೇಬೇಕಾಗಿದೆ

-ಎನ್.ಚಂದ್ರಶೇಖರ್, ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT