ಶನಿವಾರ, ಫೆಬ್ರವರಿ 22, 2020
19 °C
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮತ

ಜಾತಿ–ಧರ್ಮಕ್ಕಂಟಿದವರು ಶರಣರಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಾವುದೇ ಜಾತಿ–ಧರ್ಮಕ್ಕೆ ಅಂಟಿಕೊಂಡವರು ಶರಣ–ಶರಣೆಯರಲ್ಲ. ಜಾತಿ ರಹಿತವಾಗಿ, ವರ್ಗರಹಿತವಾಗಿ ಸಮ ಸಮಾಜ ನಿರ್ಮಾಣದ ಧ್ಯೇಯ ಹೊಂದಿದವರು ಮಾತ್ರ ನಿಜವಾದ ಶರಣರು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

ನಗರದಲ್ಲಿ ಶನಿವಾರ ಹಲವು ಸಾಧಕರಿಗೆ ‘ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಹಿಂದೂಧರ್ಮ ಎನ್ನುವುದು ಶ್ರೇಣೀಕೃತವಾದುದು. ಈ ವ್ಯವಸ್ಥೆಯನ್ನು ಬದಲಾಯಿಸಲು ವಚನಗಳ ಮೂಲಕ ಜಾಗೃತಿ ಮೂಡಿಸಿದ ಅಲ್ಲಮಪ್ರಭು ಸಮ ಸಮಾಜದ ಮೊದಲ ಪ್ರತಿಪಾದಕರು’ ಎಂದರು. 

‘ಶ್ರೇಣೀಕೃತ ವ್ಯವಸ್ಥೆಯಲ್ಲಿ ಬಹುಸಂಖ್ಯಾತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಇದೇ ಅಸಮಾನತೆಗೆ, ಜಾತೀಯತೆಗೆ ಕಾರಣವಾಯಿತು. ಇಂತಹ ಜಡತ್ವ ಹೊಂದಿದ ಸಮಾಜದಲ್ಲಿ ವಚನಕಾರರಂತಹ ದಾರ್ಶನಿಕರ ಮಾತುಗಳು ಹೆಚ್ಚು ಪರಿಣಾಮ ಬೀರಲಿಲ್ಲ. ಯಾವುದೇ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಚಲನಶೀಲವಾಗಿದ್ದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು. 

‘ಈಗಲೂ ನಮ್ಮ ಸಮಾಜ ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದಿಲ್ಲ. ಮೇಲ್ಜಾತಿಯವರು ಕಂಡರೆ ಎದ್ದು ನಿಂತು ಗೌರವ ಕೊಡುವವರು, ದಲಿತರು ಬಂದರೆ ಏಕವಚನದಲ್ಲಿ ಮಾತನಾಡುತ್ತಾರೆ. ಈಗಲೂ, ಜಾತಿ–ಧರ್ಮದ ಆಧಾರದ ಮೇಲೆ ಹೋರಾಟಗಳು ನಡೆಯುತ್ತಿರುವುದು ನೋವಿನ ಸಂಗತಿ’ ಎಂದರು. 

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ದೇಸಿ ಎಂಬ ಅಂಶಗಳು ಈ ಸಂದರ್ಭದಲ್ಲಿ ಅತಿ ಮುಖ್ಯವಾಗಿವೆ. ವಿವಾಹ ಎಂಬ ಸಂಸ್ಥೆಗೆ ವಿರುದ್ಧವಾಗಿ ನಿಂತ ಅಕ್ಕಮಹಾದೇವಿ ಹಕ್ಕಿನ ಸಂಕೇತ. ಅಲ್ಲಮ ಅರಿವಿನ ಸಂಕೇತ. 

ಅಕ್ಕಮಹಾದೇವಿ ಹಕ್ಕಿನ ಸಂಕೇತ‌. ವಿವಾಹ ಅಂತಾ ಸಂಸ್ಥೆಗೆ ಎದುರಾಗಿ ನಿಂತವಳು ಅಕ್ಕಮಹಾದೇವಿ.
ಅಲ್ಲಮ ಅರಿವಿನ ಸಂಕೇತ. ಬಸವಣ್ಞನ ಭಕ್ತಿ ಜ್ಞಾನ, ಧರ್ಮದ ಒಳಗೆ ಒಳ ವಿಮರ್ಶಕರು, ರಾಜಕೀಯದ ಒಳ ವಿಮರ್ಶಕರು ಬೇಕಾಗಿದ್ದಾರೆ. ಇನ್ನು, ದೇಸಿ ಎನ್ನುವುದು ಆಧುನಿಕವಾದ ಮಾನಸಿಕ ಗುಣ’ ಎಂದರು. 

‘ಓದಿದವರೆಲ್ಲ ವಿವೇಕಿಗಳಲ್ಲ. ಓದದವರೆಲ್ಲ ಅವಿವೇಕಿಗಳಲ್ಲ. ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಇಂತಹ ಸಂಸ್ಕೃತಿಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ಮೊಟ್ಟ ಮೊದಲ ಆದ್ಯತೆ ನೀಡುವವನೇ ನಿಜವಾದ ದೇಶಪ್ರೇಮಿ’ ಎಂದರು.

ಅಕ್ಕನಮನೆ ಸಮೂಹ ಸಂಸ್ಥೆ ಸಂಸ್ಥಾಪಕಿ ಸಿ.ಸಿ. ಹೇಮಲತಾ, ಚಿಂತಕಿ ಬಿ.ಟಿ. ಲಲಿತಾ ನಾಯಕ್‌, ಮಧುರಾ ಅಶೋಕ್‌ ಕುಮಾರ್‌, ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್‌, ಎಚ್‌.ಎಂ ರೇಣುಕ ಪ್ರಸನ್ನ, ಲೇಖಕ ಡಾ. ಶಶಿಕಾಂತ ಪಟ್ಟಣ, ಮಾಜಿ ಶಾಸಕ ಅಶೋಕ ಪಟ್ಟಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು