ಶನಿವಾರ, ಸೆಪ್ಟೆಂಬರ್ 18, 2021
21 °C
ಕಾರವಾರ: 16 ದಿನಗಳಿಂದ ಹೊಸ ಪ್ರಕರಣ ದೃಢಪಟ್ಟಿಲ್ಲ

ಕಾರವಾರ: ಕೊರೊನಾ ವೈರಸ್‌ ಪೀಡಿತ 11 ಮಂದಿಯೂ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಭಟ್ಕಳದ ಕೋವಿಡ್ 19 ಪೀಡಿತ ಎಲ್ಲ 11 ಮಂದಿಯೂ ಗುಣಮುಖರಾಗಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ. 

ನೌಕಾಪಡೆಯ ಕಾರವಾರದ ಐ.ಎನ್‌.ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11ನೇ ಸೋಂಕಿತ ವ್ಯಕ್ತಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಅವರ ಗಂಟಲುದ್ರವದ ಮಾದರಿಯ ಎರಡನೇ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ. 

ಜಿಲ್ಲೆಯಲ್ಲಿ ಕೊನೆಯ ಪ್ರಕರಣವು ಏ. 14ರಂದು ವರದಿಯಾಗಿತ್ತು. ಆ ಬಳಿಕ ಹೊಸ ಪ್ರಕರಣಗಳು ದೃಢಪಟ್ಟಿಲ್ಲ. ಎಲ್ಲ ಸೋಂಕಿತರೂ ಭಟ್ಕಳದವರಾಗಿದ್ದು, ದುಬೈನಿಂದ ವಾಪಸಾದವರು ಹಾಗೂ ಅವರ ಕುಟುಂಬ ಸದಸ್ಯರಾಗಿದ್ದಾರೆ. ಗುರುವಾರ ಬಿಡುಗಡೆಯಾದ ವ್ಯಕ್ತಿಯ ಪತ್ನಿ ಗರ್ಭಿಣಿಯಾಗಿದ್ದು, ಅವರಿಗೂ ಕೋವಿಡ್ 19 ದೃಢಪಟ್ಟಿತ್ತು. ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಸದ್ಯ ಕೋವಿಡ್ 19 ದೃಢಪಟ್ಟ ಪ್ರಕರಣಗಳು ಇಲ್ಲದಿರುವ ಕಾರಣ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆ, ವಾಣಿಜ್ಯ ಚಟುವಟಿಕೆಗಳು, ನಾಗರಿಕರ ಸಂಚಾರಕ್ಕೆ ನಿರ್ಬಂಧ ತೆರವು ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಪ್ರಕಟಿಸಲಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಇನ್ನು ಮುಂದಿನ ಆಡಳಿತಾತ್ಮಕ ಕ್ರಮಗಳ ಬಗ್ಗೆ ಎಲ್ಲ ವಿಭಾಗ, ಇಲಾಖೆಗಳ ಮುಖಂಡರ ಜೊತೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯು ಸಾರ್ವಜನಿಕರ ಚಟುವಟಿಕೆಗಳ ಮೇಲೆ ಸ್ವಯಂ ಸೇವಕರು ಮತ್ತು ಟಾಸ್ಕ್‌ಫೋರ್ಸ್‌ಗಳ ನೆರವಿನೊಂದಿಗೆ ಗಮನವಿಡಲಿದೆ. ನಿಯಮದ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಇರುವ ಮಾದರಿಯಲ್ಲೇ ನಗರ, ಪಟ್ಟಣಗಳ ವಾರ್ಡ್‌ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗುವುದು. ಜಿಲ್ಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ 19 ಸಮರ ಕೊಠಡಿ (ವಾರ್ ರೂಂ) ಆರಂಭಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು