ಸೋಮವಾರ, ನವೆಂಬರ್ 18, 2019
25 °C

ಅಲಯನ್ಸ್​ ವಿ.ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

Published:
Updated:
Prajavani

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ (52) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್‌.ಟಿ.ನಗರದ ಎಚ್ಎಂಟಿ ಮೈದಾನದಲ್ಲಿ ಮಂಗಳವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.

ಪ್ರತಿ ದಿನದಂತೆ ಮಂಗಳವಾರ ರಾತ್ರಿ ಅವರು ಊಟ ಮುಗಿಸಿ ಮನೆಯಿಂದ ಕೂಗಳತೆ ದೂರದಲ್ಲಿರುವ ಮೈದಾನದಲ್ಲಿ ವಾಯು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು, ಅವರ ಭುಜ, ಕುತ್ತಿಗೆ, ತಲೆ ಹಾಗೂ ಎದೆ ಭಾಗದ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಎಚ್‍ಎಂಟಿ ಮೈದಾನದ ಮುಂಭಾಗದಲ್ಲಿರುವ ಸ್ವಂತ ಮನೆಯಲ್ಲಿ ಪತ್ನಿ ಪಾವನಾ ದಿಬ್ಬೂರು, ಇಬ್ಬರು ಪುತ್ರಿಯರು ಮತ್ತು ಪುತ್ರನ ಜತೆ ಅಯ್ಯಪ್ಪ ವಾಸವಾಗಿದ್ದರು.

‘ಒಂದೂವರೆ ವರ್ಷದಿಂದ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಅಯ್ಯಪ್ಪ ನೋಡಿಕೊಳ್ಳುತ್ತಿದ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೂ ಅವರು ಮನೆಯಲ್ಲೇ ಇದ್ದರು. ಬಳಿಕ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಅತ್ತೆ ಮನೆಗೆ ತೆರಳಿ ಪತ್ನಿಯನ್ನು ಮನೆಗೆ ಕರೆಕೊಂಡು ಬಂದಿದ್ದರು. ರಾತ್ರಿ ಊಟ ಮಾಡಿದ ಬಳಿಕ 11ರಿಂದ 11.30ರ ನಡುವೆ ಮನೆಯಿಂದ ಹೊರಗೆ ಬಂದಿದ್ದರು. ಬೀಗದ ಕೀಲಿಯನ್ನು ಕಿಟಕಿಯಲ್ಲಿಟ್ಟುಹೊರಗೆ ಹೋಗಿದ್ದರು. ವಾಪಸು
ಬಂದು ಮಲಗುತ್ತಾರೆ ಎಂದು ಪತ್ನಿ ಪಾವನಾ ಭಾವಿಸಿದ್ದರು. ಆದರೆ, ಬೆಳಿಗ್ಗೆ ಪತಿ ಇಲ್ಲದಿರುವುದನ್ನು ಗಮನಿಸಿ ಗಾಬರಿಯಾಗಿ ಹುಡುಕಾಡಿದರು.

* ಇದನ್ನೂ ಓದಿ: ಅಲಯನ್ಸ್ ವಿ.ವಿ ವ್ಯಾಜ್ಯ ಅಯ್ಯಪ್ಪ ದೊರೆ ಹತ್ಯೆಗೆ ಕಾರಣ?

ಅವರ ಕಾರು ಮನೆಯಲ್ಲಿಯೇ ಇತ್ತು. ಹೀಗಾಗಿ, ವಾಯುವಿಹಾರಕ್ಕೆ ಹೋಗಿರಬಹುದು ಎಂದು ಮೈದಾನದಲ್ಲಿ ಹುಡುಕಾಟ ನಡೆಸುವ ವೇಳೆ ಶವ ಪತ್ತೆಯಾಯಿತು. ಆನಂತರ ಅವರು ಪೊಲೀಸರಿಗೆ ವಿಷಯ ತಿಳಿಸಿದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರು ಗ್ರಾಮದವರಾದ ಅಯ್ಯಪ್ಪ, 17 ವರ್ಷ
ಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಏಳನೇ ತರಗತಿಯವರೆಗೆ ಸರೂರದಲ್ಲಿ ಶಿಕ್ಷಣ, ನಂತರ ಎಸ್ಸೆಸ್ಸೆಲ್ಸಿವರೆಗೆ ಬಾಗಲಕೋಟೆ ಜಿಲ್ಲೆಯ ಹಳ್ಳೂರ ಗ್ರಾಮದಲ್ಲಿ ಓದಿದರು. ಬಳಿಕ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದ್ದರು.

ಆನೇಕಲ್‌ ಬಳಿಯಿರುವ ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿಯಾಗಿ 2012–13ರಲ್ಲಿ ಅಯ್ಯಪ್ಪ ಕಾರ್ಯನಿರ್ವಹಿಸಿದ್ದು, ಬಳಿಕ ಅವರ ಪತ್ನಿ 2016–17ರವರೆಗೆ ಆ ಹುದ್ದೆಯಲ್ಲಿದ್ದರು. ವಿ.ವಿಯ ಆಡಳಿತಾತ್ಮಕ ವಿಷಯದಲ್ಲಿ ವಿಶ್ವವಿದ್ಯಾಲಯದ ಸ್ಥಾ‍ಪಕರಾದ ಮಧುಕರ್‌ ಅಂಗೂರ್‌ ಹಾಗೂ ಅವರ ಸಹೋದರ ಸುಧೀರ್‌ ಅಂಗೂರ್‌ ನಡುವೆ ಕಿತ್ತಾಟವಿದ್ದು, ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಇತ್ತೀಚೆಗೆ ಸರ್ಕಾರ ಮಧ್ಯಪ್ರವೇಶಿಸಿ, ವಿ.ವಿಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಯ್ಯಪ್ಪ ದೊರೆ, ಯಡಿಯೂರಪ್ಪ ಅವರ ವಿರುದ್ಧ ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್ ಕುರಿತು ಎಸಿಬಿಗೆ ದೂರು ಸಲ್ಲಿಸಿದ್ದರು. 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಳಸಾ ಬಂಡೂರಿ ಹೋರಾಟಗಾರನ್ನು ಸೇರಿಸಿ 'ಜನ ಸಾಮಾನ್ಯ ಪಕ್ಷ’ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಅಲ್ಲದೆ, ಮುದ್ದೇಬಿಹಾಳ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್‌: ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಗ್ರಾಮೀಣಾಭಿವೃದ್ಧಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕಾರ್ಯದರ್ಶಿ ಮತ್ತು ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಸುಪಾರಿ ಹಂತಕರಿಂದ ಕೃತ್ಯ?

‘ಕೃತ್ಯದ ಮಾದರಿ ಗಮನಿಸಿದರೆ ಹತ್ಯೆಗೆ ಸುಪಾರಿ ಕೊಟ್ಟಿರುವ ಶಂಕೆಯಿದೆ. ನಾಲ್ಕೈದು ಮಂದಿ ಭಾಗಿಯಾಗಿರುವ ಅನುಮಾನವೂ ಇದೆ. ಅಲಯನ್ಸ್‌ ವಿ.ವಿಯಿಂದ ದೂರ ಉಳಿದ ಬಳಿಕ ರಿಯಲ್ ಎಸ್ಟೇಟ್, ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿ ಅವರು ಗುರುತಿಸಿಕೊಂಡಿದ್ದರು. ಈ ವೇಳೆ, ಕೆಲವರು ಅವರ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಅಂಥ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಹತ್ಯೆಗೆ ಕಾರಣ ಇನ್ನೂ ನಿಗೂಢ

ಅಯ್ಯಪ್ಪ ದೊರೆ ಹತ್ಯೆ ಬಗ್ಗೆ ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ತೀವ್ರಗೊಳಿಸಿರುವ ಪೊಲೀಸರು, ಅಯ್ಯಪ್ಪ ಅವರ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಆದರೆ, ಕೆಲವು ದೃಶ್ಯಗಳು ಅಸ್ಪಷ್ಟವಾಗಿವೆ. ಹೀಗಾಗಿ, ಮೈದಾನ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಅಯ್ಯಪ್ಪ ದೊರೆ ಮತ್ತು ಪತ್ನಿ ಪಾವನಾ ಅವರ ಮೊಬೈಲ್‍ಗೆ ಇತ್ತೀಚೆಗೆ ಬಂದಿರುವ ಒಳ ಮತ್ತು ಹೊರ ಕರೆಗಳ ಬಗ್ಗೆ ಸಿಡಿಆರ್ ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದರು.

‘ಹತ್ಯೆ ಕಾರಣ ಇನ್ನೂ ನಿಗೂಢವಾಗಿದೆ. ಅಲಯನ್ಸ್ ವಿ.ವಿಗೆ ಸಂಬಂಧಿಸಿದ ವ್ಯಾಜ್ಯ, ಆಸ್ತಿ ಖರೀದಿ, ಹಣಕಾಸು ವ್ಯವಹಾರ ಕೊಲೆಗೆ ಕಾರಣ ಇರಬಹುದು ಎಂಬ ಶಂಕೆ ಇದೆ. ಹೀಗಾಗಿ ವಿ.ವಿಯ ಸಿಬ್ಬಂದಿ, ಕುಟುಂಬಸ್ಥರು ಮತ್ತು ಪರಿಚಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದೂ ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು.

ಸರೂರ ಗ್ರಾಮದವರು

ವಿಜಯಪುರ ವರದಿ: ಬೆಂಗಳೂರು ನಲ್ಲಿ ಹತ್ಯೆಯಾಗಿರುವ ಡಾ.ಅಯ್ಯಪ್ಪ ದೊರೆ ಅವರು ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದವರು.

7ನೇ ತರಗತಿಯವರೆಗೆ ಸರೂರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಎಸ್ಸೆಸ್ಸೆಲ್ಸಿವರೆಗೆ ಬಾಗಲಕೋಟೆ ಜಿಲ್ಲೆಯ ಹಳ್ಳೂರ ಗ್ರಾಮದಲ್ಲಿ, ನಂತರ ಬೆಂಗಳೂರಿನಲ್ಲಿ ನೆಲೆಸಿ ಶಿಕ್ಷಣ ಪಡೆದಿದ್ದರು. ಶಿಕ್ಷಣ ರಂಗದಲ್ಲಿ, ಉದ್ಯಮದಲ್ಲಿ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅವರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನಸಾಮಾನ್ಯರ ಪಕ್ಷವನ್ನು ತಾವೇ ಸ್ಥಾಪಿಸಿದ್ದರು. ನಂತರ, ತಮ್ಮ ಪಕ್ಷದಿಂದ ಮುದ್ದೇಬಿಹಾಳ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರತಿಕ್ರಿಯಿಸಿ (+)