ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಎಂ. ಪ್ರಸಾದ್‌ ನೂತನ ಪೊಲೀಸ್‌ ಮಹಾನಿರ್ದೇಶಕ?

Last Updated 30 ಜನವರಿ 2020, 3:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕ (ಡಿಜಿ–ಐಜಿಪಿ) ಹುದ್ದೆಗೆ ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿರುವ ಆಶಿತ್ ಮೋಹನ್‌ ಪ್ರಸಾದ್‌ (ಎ.ಎಂ. ಪ್ರಸಾದ್‌) ಮತ್ತು ಸಿಐಡಿಯ ಡಿಜಿಪಿ ಪ್ರವೀಣ್ ಸೂದ್‌ ನಡುವೆ ಪೈಪೋಟಿ ಏರ್ಪಟ್ಟಿದ್ದು, ಎ.ಎಂ. ಪ್ರಸಾದ್‌ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ಹಾಲಿ ಡಿಜಿ-ಐಜಿ ನೀಲಮಣಿ ಎನ್. ರಾಜು ಅವರು ಶುಕ್ರವಾರ (ಜ. 31) ನಿವೃತ್ತಿಯಾಗಲಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಬಿಹಾರದವರಾದ ಎ.ಎಂ. ಪ್ರಸಾದ್‌ ಸೇವಾ ಹಿರಿತನದಲ್ಲಿ ಮೊದಲಿಗರಾಗಿದ್ದಾರೆ. ಅವರನ್ನೇ ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ 31ರಂದು ಆದೇಶ ಹೊರಬೀಳಲಿದ್ದು, ಅದೇ ದಿನ ಸಂಜೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೇವಾಹಿರಿತನ ಪರಿಗಣಿಸಿ ಪ್ರಸಾದ್‌ ಅವರನ್ನೇ ನೇಮಕ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದೂ ಗೊತ್ತಾಗಿದೆ.

1985ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಎ.ಎಂ. ಪ್ರಸಾದ್‌, 1986ನೇ ಬ್ಯಾಚ್‌ನ ಅಧಿಕಾರಿಗಳಾಗಿರುವ ಪ್ರವೀಣ್‌ ಸೂದ್‌ ಮತ್ತು ತರಬೇತಿ ವಿಭಾಗದ ಡಿಜಿಪಿ ಪಿ.ಕೆ. ಗರ್ಗ್ ಅವರುಡಿಜಿ– ಐಜಿಪಿ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ಈ ಪೈಕಿ, ಪ್ರಸಾದ್‌ ಅವರಿಗೆ ಒಂಬತ್ತು ತಿಂಗಳು ಹಾಗೂ ಸೂದ್‌ ಅವರಿಗೆ ನಾಲ್ಕು ವರ್ಷಗಳ ಸೇವಾ ಅವಧಿ ಬಾಕಿ ಇದೆ. ಡಿಜಿ– ಐಜಿಪಿ ಹುದ್ದೆಯ ಪೈಪೋಟಿಯಿಂದ ಗರ್ಗ್‌ ಅವರು ಈಗಾಗಲೇ ಹಿಂದೆ ಸರಿದಿದ್ದಾರೆ. ಹೀಗಾಗಿ, ಪ್ರಸಾದ್‌ ಮತ್ತು ಸೂದ್‌ ಹೆಸರು ಮುಂಚೂಣಿಯಲ್ಲಿದೆ.

ಒಂದೇ ದಿನ ನಾಲ್ವರು ಐಪಿಎಸ್‌ ಅಧಿಕಾರಿಗಳು ನಿವೃತ್ತಿ: ನೀಲಮಣಿ ರಾಜು ಜೊತೆ ಡಿಜಿಪಿಗಳಾದ ಎಂ.ಎನ್‌. ರೆಡ್ಡಿ (ಅಗ್ನಿಶಾಮಕ ದಳ) ಮತ್ತು ರಾಘವೇಂದ್ರ ಎಚ್‌. ಔರಾದಕರ (ಪೊಲೀಸ್ ಗೃಹ ಮಂಡಳಿ) ಕೂಡಾ ಇದೇ 31ರಂದು ನಿವೃತ್ತಿಯಾಗುತ್ತಿದ್ದಾರೆ. ಅಲ್ಲದೆ, ಗುಪ್ತದಳದ ಉಪ ಪೊಲೀಸ್‌ ಮಹಾನಿರೀಕ್ಷಕ (ಡಿಐಜಿಪಿ) ರಾಜೇಂದ್ರ ಪ್ರಸಾದ್‌ ಅವರೂ ನಿವೃತ್ತಿಯಾಗುವುದ
ರಿಂದ ಒಂದೇ ದಿನ ನಾಲ್ವರುಐಪಿಎಸ್‌ ಅಧಿಕಾರಿಗಳು ನಿವೃತ್ತರಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT