ಶನಿವಾರ, ಆಗಸ್ಟ್ 24, 2019
27 °C

ಅಂತರರಾಜ್ಯ ಪ್ರವಾಹ; ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್‌ ಶಾ, ಬಿಎಸ್‌ವೈ

Published:
Updated:
Prajavani

ಬೆಳಗಾವಿ: ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆ, ಕೊಯ್ನಾ ಜಲಾಶಯ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಕೈಗೊಂಡರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ ಏರಿದ ಅವರು, 2 ತಾಸು 10 ನಿಮಿಷಗಳ ಸುದೀರ್ಘ ಸಮೀಕ್ಷೆ ನಡೆಸಿದರು. ಅವರ ಜೊತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕೂಡ ಉಪಸ್ಥಿತರಿದ್ದರು.

ಸಮೀಕ್ಷೆಯ ನಂತರ ರಾಜ್ಯದ ಪರಿಸ್ಥಿತಿ ಕುರಿತು ನಿಲ್ದಾಣದ ಸಭಾಂಗಣದಲ್ಲಿಯೇ ಸಭೆ ನಡೆಸಿದರು. ಆದ್ಯತೆಯ ಮೇರೆಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಜೆ ನವದೆಹಲಿಗೆ ಮರಳಿದರು.

₹ 3,000 ಕೋಟಿ ಭರವಸೆ: ‘ಪ್ರಾಥಮಿಕ ವರದಿಗಳ ಪ್ರಕಾರ, ರಾಜ್ಯದಲ್ಲಿ ಪ್ರವಾಹದಿಂದಾಗಿ ₹ 10,000 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ತಕ್ಷಣ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ₹ 3,000 ಕೋಟಿ ಹಣ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದೇನೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ವಿಸ್ತೃತವಾಗಿ ಸಮೀಕ್ಷೆ ನಡೆಸಿದ ನಂತರ ನಷ್ಟದ ಮೊತ್ತವು ₹ 30,000ದಿಂದ ₹ 40,000 ಕೋಟಿಯವರೆಗೆ ತಲುಪಬಹುದು. ಇವೆಲ್ಲ ಪರಿಸ್ಥಿತಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೂ ತಂದಿದ್ದೇನೆ’ ಎಂದು ಹೇಳಿದರು.

ನೌಕರರಿಂದ ₹ 200 ಕೋಟಿ: ‘ನೆರೆ ಸಂತ್ರಸ್ತರ ಪುನರ್ವಸತಿಗಾಗಿ ₹ 200 ಕೋಟಿ ನೆರವು ನೀಡುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ತಿಳಿಸಿದೆ. ನೌಕರರು ತಮ್ಮ ಒಂದು ದಿನದ ಸಂಬಳವನ್ನು ನೀಡಲಿದ್ದಾರೆ. ಅದೇ ರೀತಿ ರಾಜ್ಯದ ಉದ್ಯಮಿಗಳು ಮುಕ್ತ ಹಸ್ತದಿಂದ ನೆರವು ನೀಡಬೇಕು’ ಎಂದು ಯಡಿಯೂರಪ್ಪ ಮನವಿ ಮಾಡಿದರು.

Post Comments (+)