ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಕೈಬಿಡಲು ಹೆಚ್ಚಿದ ಒತ್ತಡ

7
ರೈಲು ಅಪಘಾತಗಳಿಂದ ಸಾವಿನ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ l ವನ್ಯಜೀವಿ ಕಾರ್ಯಕರ್ತರ ಕಳವಳ

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಕೈಬಿಡಲು ಹೆಚ್ಚಿದ ಒತ್ತಡ

Published:
Updated:

ಬೆಂಗಳೂರು: ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಐದು ವರ್ಷಗಳಲ್ಲಿ ರೈಲ್ವೆ ಅಪಘಾತಗಳಲ್ಲಿ ಮೃತಪಟ್ಟ ವನ್ಯಜೀವಿಗಳ ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಹಾಗಾಗಿ ಪಶ್ಚಿಮಘಟ್ಟದ ದಟ್ಟ ಕಾಡುಗಳ ನಡುವೆ ಹಾದುಹೋಗುವ ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಮೂರು ಜಿಲ್ಲೆಗಳ ಮೂಲಕ ಹಾದುಹೋಗುವ ಹೊಸಪೇಟೆ-ಅಳ್ನಾವರ್-ಲೋಂಡಾ-ವಾಸ್ಕೊ ಹಾಗೂ ಲೋಂಡಾ- ಖಾನಾಪುರ-ಬೆಳಗಾವಿ ರೈಲು ಮಾರ್ಗಗಳಲ್ಲಿ  ಕಾಟಿ (ಕಾಡುಕೋಣ ಅಥವಾ ಕಾಡೆಮ್ಮೆ), ಕಾಡಾನೆ, ಕೆನ್ನಾಯಿ, ಕರಡಿ, ಕಡವೆ ಸೇರಿದಂತೆ ಒಟ್ಟೂ 28 ದೊಡ್ಡ ಸಸ್ತನಿಗಳು ಚಲಿಸುವ ರೈಲು ಡಿಕ್ಕಿ ಹೊಡೆದು  ಮೃತಪಟ್ಟಿವೆ. ಇನ್ನು ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗವೂ ನಿರ್ಮಾಣಗೊಂಡರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿ ಹಕ್ಕು ಕಾಯಿದೆ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಅವರು ಹಂಚಿಕೊಂಡರು.

‘ಬೆಳಗಾವಿ ವಿಭಾಗದರಲ್ಲೇ 20 ಕಾಟಿಗಳು, 2 ಕಾಡಾನೆಗಳು ಹಾಗೂ ತಲಾ ಒಂದು ಕೆನ್ನಾಯಿ, ಕರಡಿ ಹಾಗೂ ಕಡವೆ ರೈಲಿಗೆ ಸಿಲುಕಿ ಸತ್ತಿದೆ. ಧಾರವಾಡ ವಿಭಾಗದಲ್ಲಿ ಒಂದು ಕಾಟಿ ಹಾಗೂ ದಾಂಡೇಲಿ ಅಭಯಾರಣ್ಯ ಹಾಗೂ ಹಳಿಯಾಳ ವಿಭಾಗದಲ್ಲಿ ತಲಾ ಒಂದು ಕಾಟಿಗಳು ಮೃತಪಟ್ಟಿವೆ. ಚಿಕ್ಕಪುಟ್ಟ ಸಸ್ತನಿಗಳು, ಸರೀಸೃಪಗಳೂ ಕೂಡ ರೈಲುಗಳಡಿ ಸಿಲುಕಿ ಸಾಯುವುದು ಸಾಮಾನ್ಯ ವಿದ್ಯಮಾನ ಎಂಬಂತಾಗಿದೆ. ಇಂತಹ ಘಟನೆಗಳು ಬೆಳಕಿಗೇ ಬರುವುದಿಲ್ಲ’ ಎಂದು ತಿಳಿಸಿದರು.

‘ಹಾಸನ- ಮಂಗಳೂರು ರೈಲು ಮಾರ್ಗದ ಸಕಲೇಶಪುರದ ಬಳಿ 5 ತಿಂಗಳಲ್ಲಿ 3 ಕಾಡಾನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಆನೆಯಂತಹ ಭಾರಿ ಸಸ್ತನಿಗಳ ಪಾಲಿಗೂ ರೈಲು ಮಾರ್ಗ ಎಷ್ಟು ಅಪಾಯ ತಂದೊಡ್ಡಬಲ್ಲದು ಎಂಬುದಕ್ಕೆ ಇದು ಉದಾಹರಣೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದರು.

ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ದಕ್ಷಿಣ ವಲಯ, ಅರಣ್ಯ ಸಲಹಾ ಸಮಿತಿ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ, ಕೇಂದ್ರೀಯ ಉನ್ನತಾಧಿಕಾರ ಸಮಿತಿಗಳು ತಿರಸ್ಕರಿಸಿವೆ. ಇಷ್ಟಾದರೂ ಹಟ ಬಿಡದ ರಾಜ್ಯ ಸರ್ಕಾರ 2016 ರಲ್ಲಿ ರೈಲ್ವೆ ಇಲಾಖೆ ಸಲ್ಲಿಸಿದ ಮರುಪ್ರಸ್ತಾವನೆಗೆ ಶಿಫಾರಸ್ಸು ಮಾಡಿ ಯೋಜನೆ ಜಾರಿಯಾಗಲೇಬೇಕೆಂದು ಪಟ್ಟು ಹಿಡಿದಿದೆ. ಆದರೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಈ ಯೋಜನೆಯನ್ನು ತಿರಸ್ಕರಿಸಬೇಕೆಂದು ಖಡಾಖಂಡಿತವಾಗಿ ಹೇಳಿದೆ.

ಉದ್ದೇಶಿತ ರೈಲು ಮಾರ್ಗಕ್ಕೆ ಹೊಂದಿಕೊಂಡೇ ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಇದೆ. ಈಗಾಗಲೇ ಗಣಿ ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗಲು ಹುಬ್ಬಳ್ಳಿ- ಲೋಂಡಾ-ವಾಸ್ಕೊ ಮಾರ್ಗವಿದ್ದು ಇದರ ದ್ವಿಪಥ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದಕ್ಕೆ ಹೊಂದಿಕೊಂಡಂತೆ ಲೋಂಡಾ- ಪಣಜಿ ರಾಷ್ಟ್ರೀಯ ಹೆದ್ದಾರಿ ಇದ್ದು ಇದರ ದುರಸ್ತಿ ಕಾಮಗಾರಿಯೂ ಆರಂಭವಾಗಿದೆ.

ಇಷ್ಟೆಲ್ಲ ಬದಲಿ ಮಾರ್ಗಗಳಿದ್ದರೂ ಮತ್ತೆ ಕಾಡು ಕಡಿದು ರೈಲು ಮಾರ್ಗ ನಿರ್ಮಿಸುವ ಅಗತ್ಯ ಏನು ಎಂಬುದು ವನ್ಯಜೀವಿ ಕಾರ್ಯಕರ್ತರ ಪ್ರಶ್ನೆ.

**

ವನ್ಯಜೀವಿ ಮಂಡಳಿ ಸಭೆ ಇಂದು

ರಾಜ್ಯ ವನ್ಯಜೀವಿ ಮಂಡಳಿಯ 11ನೇ ಸಭೆಯು ನಗರದಲ್ಲಿ ಬುಧವಾರ ನಡೆಯಲಿದ್ದು, ಇದರಲ್ಲಿ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಪ್ರಸ್ತಾವನೆ ಚರ್ಚೆಗೆ ಬರಲಿದೆ.

‘ಈ ಯೋಜನೆ ಅನುಷ್ಠಾನವಾದರೆ ಅಭಿವೃದ್ಧಿ ಹೆಸರಿನಲ್ಲಿ ನಲುಗಿ ಹೋಗಿರುವ ಉತ್ತರ ಕನ್ನಡ ಜಿಲ್ಲೆಯ ಅಳಿದುಳಿದ ಅರಣ್ಯ ಪ್ರದೇಶಗಳು ಹಾಗೂ ವನ್ಯಜೀವಿ ಆವಾಸಸ್ಥಾನಗಳು ಮತ್ತಷ್ಟು ಛಿದ್ರವಾಗಲಿವೆ. ಮಂಡಳಿಯ ಅಧ್ಯಕ್ಷ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಾಗೂ ಮಂಡಳಿಯ ಸದಸ್ಯ ಕಾರ್ಯದರ್ಶಿಯಾದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸವಿಸ್ತಾರವಾದ ಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ. ಅದನ್ನು ಮಂಡಳಿ ಪರಿಗಣಿಸುತ್ತದೆ’ ಎಂಬ ಆಶಾವಾದವನ್ನು ಗಿರಿಧರ ಕುಲಕರ್ಣಿ ವ್ಯಕ್ತಪಡಿಸಿದರು.

**

ರೈಲ್ವೆ ಸಚಿವರಿಗಿಲ್ಲದ ಆಸಕ್ತಿ ರಾಜ್ಯ ಸರ್ಕಾರಕ್ಕೆ ಏಕೆ?

ಈಗಾಗಲೇ ಈ ಯೋಜನೆಗೆ ಹಲವಾರು ಕಾನೂನು ತೊಡಕುಗಳು ಉಂಟಾಗಿದೆ. ಯೋಜನೆಗೆ ವನ್ಯಜೀವಿ ರಾಜ್ಯ ಮಂಡಳಿ ಅನುಮತಿ ನೀಡಿದರೂ ವನ್ಯಜೀವಿ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗುವುದು ನಿಶ್ಚಿತ. ತಾಂತ್ರಿಕವಾಗಿಯೂ ಯೋಜನೆಯ ಅನುಷ್ಠಾನ ಕಷ್ಟಸಾಧ್ಯ ಎಂಬ ಕಾರಣಕ್ಕೆ ಸ್ವತಃ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರೇ ಇ ಯೋಜನೆ ಕೈಬಿಡುವುದಾಗಿ ಹೇಳಿಕೆ ನೀಡಿದ್ದರು.

ಇಷ್ಟಾದರೂ ರಾಜ್ಯ ಸರ್ಕಾರ ಈ ಯೋಜನೆಗೆ ದುಂಬಾಲು ಬಿದ್ದಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಅಚ್ಚರಿ ವ್ಯಕ್ತಪಡಿಸಿದರು.

**

ಯಾವ ವರ್ಷ ಎಷ್ಟು ವನ್ಯಜೀವಿ ಸಾವು?

2014; 2 ಕಾಟಿ

2015; 1 ಕಾಡನೆ, 2 ಕಾಟಿ

2016; 5 ಕಾಟಿ

2017; 1 ಕಾಡಾನೆ, 9 ಕಾಟಿ, 1 ಕರಡಿ, 1 ಕೆನ್ನಾಯಿ

2018; 5 ಕಾಟಿ, 1 ಕಡವೆ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !