ಶನಿವಾರ, ಜನವರಿ 18, 2020
20 °C
ಪೌರತ್ವ ಕಾಯ್ದೆ ವಿರೋಧಿ ವಿಚಾರ ಸಂಕಿರಣದಲ್ಲಿ ದೇವನೂರ ಆಶಯ

ಯುವಜನತೆ ಎಚ್ಚೆತ್ತಿದೆ, ಇನ್ನು ದೇಶ ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ, ಹೆಗ್ಗಣಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಸ್ಫೋಟಿಸಿದೆ, ಈ ಯುವ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಅನ್ನಿಸುತ್ತಿದೆ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಬುಧವಾರ ಇಲ್ಲಿ ಪೌರತ್ವ ಕಾಯ್ದೆ ವಿರೋಧಿ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಇಂದು ಸಂಘರ್ಷ ನಡೆಯುತ್ತಿರುವುದು ಶೇ 99ರಷ್ಟಿರುವ ವಿ ದಿ ಪೀಪಲ್‌ ಆಫ್‌ ಇಂಡಿಯಾ ಮತ್ತು ಶೇ 1ರಷ್ಟಿರುವ ಕೋಮುವಾದಿ ಗ್ಯಾಂಗ್‌ ನಡುವೆ. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರನ್ನು ಎತ್ತಿ ಕಟ್ಟಿದವರೆಲ್ಲ ಮಣ್ಣು ಮುಕ್ಕಿದ್ದಾರೆ, ಅಶಾಂತಿ ಮುಂದುವರಿದಿದೆ. ಭಾರತಕ್ಕೂ ಇದೇ ಬೇಕಾಗಿದೆಯೇ?’ ಎಂದು ಪ್ರಶ್ನಿಸಿದರು.

‘ಅತಿ ದೊಡ್ಡ ಪಕ್ಷ ಅನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಉಳಿದಿಲ್ಲ. ಜೀವ ಇಲ್ಲದ ಸತ್ತ ದೇಹದಂತೆ ಇದೆ. ಬಿಜೆಪಿ ಹೆಸರಲ್ಲಿ ಮೋದಿ, ಶಾ ಗ್ಯಾಂಗ್‌ ಆಡಳಿತ ನಡೆಸುತ್ತಿದೆ. ಸಂವಿಧಾನ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕಮರುವಂತೆ ಮಾಡುತ್ತಿರುವವರ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯುವ ಸಮಯ ಸಮೀಪಿಸಿದೆ’ ಎಂದು ಅವರು
ಅಭಿಪ್ರಾಯಪಟ್ಟರು.

‘ನಿಮ್ಮ ಕಣ್ಣಿನ ಕೆಳಗೇ ಜೆಎನ್‌ಯು ಘಟನೆ ನಡೆದಿದೆ. ಗುಂಪು ಥಳಿತ ನೋಡಿದಾಗಲೂ ಈ ದೇಶದಲ್ಲಿ ರಾಜನಿಲ್ಲ (ರೂಲರ್‌), ಅರಾಜಕತೆ ಇದೆ ಅನ್ನಿಸುತ್ತದೆ. ರಾಜನೊಬ್ಬ ನಕಾರಾತ್ಮಕ ಧೋರಣೆ ತಳೆದಾಗ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಹೆಯಲ್ಲಿ ಮಾಡಿದ್ದ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗಿ, ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು’ ಎಂದು ಅವರು ಮಾರ್ಮಿಕವಾಗಿ ನುಡಿದರು.

‘ಸಿಎಎ ಹೋರಾಟ ಕೇವಲ ಮುಸ್ಲಿಮರ ಹೋರಾಟ ಅಲ್ಲ, ಇದು ದಲಿತರ ಹೋರಾಟ, ಇದೇ 12ರಂದು ದಲಿತ ಸಂಘಟನೆಗಳ ಸಭೆ ಕರೆದು ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಮುನ್ನಡೆಯುವ ಕುರಿತು ಚರ್ಚಿಸಲಾಗುವುದು. ಮೇಲಿಂದ ಮೇಲೆ ಸುಳ್ಳನ್ನು ಹೇಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕ ಅಸಹಕಾರ ಆರಂಭವಾಗಿದ್ದು, ಇದನ್ನು ಬಲಪಡಿಸಬೇಕಾಗಿದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಪ್ರೇಕ್ಷಕರ ಸಾಲಿನಲ್ಲಿ ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ. ಆದರೆ ಶಾಸಕ ಜಮೀರ್ ಅಹ್ಮದ್‌ ಖಾನ್‌, ಮಾಜಿ ಸಚಿವ ಎಚ್‌.ಆಂಜನೇಯ ಜತೆಗೆ ಬಂದ ಅವರು ಸುಮಾರು ಒಂದೂವರೆ ಗಂಟೆ ಸಭಿಕರ ನಡುವೆಯೇ ಕುಳಿತು ಭಾಷಣಗಳನ್ನು ಆಲಿಸಿದರು. ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಬಂದಿದ್ದರು. ವಿವಿಧ ದಲಿತ ಸಂಘಟನೆಗಳ ಮುಖಂಡರು ಮತ್ತೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

‘ಹಿಂದೂ–ಮುಸ್ಲಿಂ ಒಗ್ಗಟ್ಟು ಛಿದ್ರವಾಗಲು ಬಿಡಬೇಡಿ’

ಹಿಂದೂಗಳು ಮತ್ತು ಮುಸ್ಲಿಮರ ಒಗ್ಗಟ್ಟನ್ನು ಛಿದ್ರಗೊಳಿಸುವುದೇ ಆರ್‌ಎಸ್‌ಎಸ್‌ ಕಾರ್ಯತಂತ್ರದಂತೆ ನಡೆಯುವ ಬಿಜೆಪಿಯ ಕಾರ್ಯಸೂಚಿ. ಮುಂದಿನ 50 ವರ್ಷಗಳ ವರೆಗೂ ಅಧಿಕಾರ ಹಿಡಿಯುವ ಚಿಂತನೆಯಲ್ಲೇ ಸಿಎಎ, ಎನ್‌ಆರ್‌ಸಿಯಂತಹ ವಿಷಯವನ್ನು ಮುಂದಕ್ಕೆ ತರಲಾಗಿದೆ. ತಳಹಂತದಲ್ಲಿ ಹಿಂದೂ–ಮುಸ್ಲಿಂ ಬಾಂಧವ್ಯ ವೃದ್ಧಿಸಿದಂತೆಲ್ಲ ಬಿಜೆಪಿ ಆತಂಕಪಡುತ್ತದೆ, ಅದನ್ನು ಒಡೆಯಲು ಪ್ರಯತ್ನಿಸುತ್ತದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಎರಡೂ ಸಮುದಾಯಗಳ ನಡುವಣ ಒಗ್ಗಟ್ಟು ಛಿದ್ರವಾಗದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ವಿಚಾರ ಸಂಕಿರಣದಲ್ಲಿ ಮೂಡಿಬಂತು.

***

ಜನಗಣತಿಗೆ ಮಾತ್ರ ಸಹಕರಿಸಿ, ಎನ್‌ಪಿಆರ್‌ಗೆ ಮಾಹಿತಿ ಕೇಳಲು ಬಂದರೆ ಅವರನ್ನು ಗೌರವದಿಂದಲೇ ಕಳುಹಿಸಿಕೊಡಿ, ಈಗಲ್ಲ, ಇನ್ನು 20 ವರ್ಷವಾದರೂ ಎನ್‌ಆರ್‌ಸಿ ಇಲ್ಲಿ ಜಾರಿಗೆ ಬರದು
-ಸಸಿಕಾಂತ್‌ ಸೆಂಥಿಲ್‌, ನಿವೃತ್ತ ಐಎಎಸ್‌ ಅಧಿಕಾರಿ

ಬಹುಮತವೇ ಸರ್ವಾನುಮತವಲ್ಲ ಎಂದು ತೋರಿಸಿಕೊಡಲೇಬೇಕು. ಕೆಟ್ಟವರ ಕೈಗೆ ಸಿಕ್ಕಿದ ಒಳ್ಳೆಯ ಸಂವಿಧಾನವೂ ಕೆಟ್ಟದಾಗುತ್ತದೆ ಎಂಬ ಅಂಬೇಡ್ಕರ್‌ ಮಾತು ಇಂದು ನಿಜವಾಗುತ್ತಿದೆ
-ಬರಗೂರು ರಾಮಚಂದ್ರಪ್ಪ, ಹಿರಿಯ ಚಿಂತಕ

ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಮುಸ್ಲಿಮರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಬಾರದು, ಇದರಿಂದ ಸಿಎಎ ಪರ ಪ್ರಚಾರ ನಡೆಸುವವರಿಗೆ ತುಂಬ ಅನುಕೂಲವಾಗುತ್ತದೆ
-ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಪತ್ರಕರ್ತ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು