ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಗೊಂದಲಗಳು ವಾರದಲ್ಲಿ ಪರಿಹಾರ

ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಕರೀಗೌಡ ಭರವಸೆ
Last Updated 15 ಜೂನ್ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರಿಂದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಒಳಗೆ ಅಥವಾ ಚಿಲ್ಲರೆಯಾಗಿ ಖರೀದಿ ಮಾಡುವವರಿಗೆ ಸಮಾನ ಮಾರುಕಟ್ಟೆ ಶುಲ್ಕ(ಸೆಸ್) ನಿಗದಿ ಮಾಡುವ ಬಗ್ಗೆ ಸರ್ಕಾರ ಆಲೋಚನೆ ನಡೆಸುತ್ತಿದೆ’ ಎಂದು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಕರೀಗೌಡ ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಎಫ್‌ಕೆಸಿಸಿಐ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಎಪಿಎಂಸಿ ವರ್ತಕರ ಸಮಸ್ಯೆಗಳು ಮುಖ್ಯಮಂತ್ರಿ ಅವರಿಗೆ ಅರ್ಥವಾಗಿವೆ. ಎಲ್ಲಾ ಗೊಂದಲಗಳಿಗೆಒಂದು ವಾರದಲ್ಲಿ ತೆರೆ ಬೀಳಲಿದೆ’ ಎಂದು ಭರವಸೆ ನೀಡಿದರು.

‘ಎಪಿಎಂಸಿ ವರ್ತಕರಿಂದ ಮಾತ್ರ ಮಾರುಕಟ್ಟೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ರೈತರ ಜಮೀನಿನ ಬಳಿಯೇ ಹೋಗಿ ಖರೀದಿ ಮಾಡುವ ಕಂಪನಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂಬುದು ತಪ್ಪು ಅಭಿಪ್ರಾಯ. ಹಾಗೆ ಮಾಡಿದರೆ ಅದು ಅರಾಜಕತೆ ಆಗಲಿದೆ. ಹೊಸ ಕಾಯ್ದೆ ಪ್ರಕಾರ ನಿಯಮಗಳನ್ನು ರೂಪಿಸಲಾಗುತ್ತಿದೆ. ಅದು ಜಾರಿಗೆ ಬಂದ ನಂತರ ಎಲ್ಲರಿಗೂ ಅರ್ಥವಾಗಲಿದೆ’ ಎಂದರು.

‘ಕಳೆದ ವರ್ಷ ಮಾರುಕಟ್ಟೆ ಶುಲ್ಕದಿಂದ ₹600 ಕೋಟಿ ವರಮಾನ ಸರ್ಕಾರಕ್ಕೆ ಬಂದಿದೆ. ಮಾರುಕಟ್ಟೆ ಶುಲ್ಕದಿಂದಲೇ ಎಪಿಎಂಸಿ ನೌಕರರಿಗೆ ವೇತನ ಸಂದಾಯವಾಗುತ್ತಿದೆ. ಶುಲ್ಕವನ್ನೇ ತೆಗೆದು ಹಾಕುವುದು ಕಷ್ಟವಾಗಲಿದೆ. ರೈಲ್ವೆ ಮತ್ತು ವಕ್ಫ್ ಮಂಡಳಿ ಬಿಟ್ಟರೆ ಅತೀ ಹೆಚ್ಚು ಆಸ್ತಿ ಹೊಂದಿರುವ ಸಂಸ್ಥೆ ಎಂದರೆ ಎಪಿಎಂಸಿ. ಶುಲ್ಕ ಸಂಗ್ರಹಿಸದಿದ್ದರೆ ನಿರ್ವಹಣೆ ಕಷ್ಟವಾಗಲಿದೆ’ ಎಂದು ಹೇಳಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಮಾತನಾಡಿ, ‘ಎಪಿಎಂಸಿ ಪ್ರಾಂಗಣದಲ್ಲಿ ವಿಧಿಸಲಾಗುತ್ತಿರುವ ಮಾರುಕಟ್ಟೆ ಶುಲ್ಕವನ್ನು ರದ್ದುಪಡಿಸಬೇಕು ಅಥವಾ ಸರಳ ನಿರ್ವಹಣೆಗೆ ಶೇ 0.20ರಷ್ಟು ಶುಲ್ಕ ವಿಧಿಸಬೇಕು. ಮಾರುಕಟ್ಟೆಯೊಳಗೆ ಮತ್ತು ಹೊರಗೆ ನಡೆಯುವ ವಹಿವಾಟಿಗೆ ಸಮಾನ ಶುಲ್ಕ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಎಪಿಎಂಸಿಗಳು ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಗೆ ಮಣೆ ಹಾಕಿ ಎಪಿಎಂಸಿ ವರ್ತಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದು ಸಂವಾದದಲ್ಲಿ ಭಾಗವಹಿಸಿದ್ದ ವರ್ತಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT