ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಸುಳ್ಯದಲ್ಲಿ ‘ಅರೆಭಾಷೆ ಸಂಸ್ಕೃತಿ ಗ್ರಾಮ’

ಉತ್ತರ ಕೊಡಗಿನ ಸಂಗಯ್ಯಪುರದಲ್ಲಿಅರೆಭಾಷೆ ಸಾಹಿತ್ಯ ಸಮ್ಮೇಳನದ ಸಂಭ್ರಮ, ಸಾಹಿತ್ಯಾಸಕ್ತರ ಕಲರವ
Last Updated 23 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸಂಗಯ್ಯನಪುರ (ಸೋಮವಾರಪೇಟೆ ತಾಲ್ಲೂಕು): ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಆಲೂರು ಸಿದ್ದಾಪುರದ ಅರೆಭಾಷೆ ಗೌಡ ಸಮಾಜದ ಆಶ್ರಯದಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಂಗಯಯ್ಯನಪುರದಲ್ಲಿ ಭಾನುವಾರ ನಡೆದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವು ಅರೆಭಾಷೆ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಇಡೀ ಗ್ರಾಮದಲ್ಲಿ ಸಮ್ಮೇಳನದ ಸಂಭ್ರಮ ಮನೆ ಮಾಡಿತ್ತು.

ಸಮ್ಮೇಳನದಲ್ಲಿ ಗಣ್ಯರು, ಭಾಷೆ ಹಾಗೂ ಸಂಸ್ಕೃತಿ ಉಳಿಸುವಂತೆ ಪ್ರತಿಪಾದಿಸಿದರು. ನಿರೀಕ್ಷೆಗೂ ಮೀರಿ ಸೇರಿದ್ದ ಸಮಾಜ ಬಾಂಧವರು ಭಾಷೆ ಹಾಗೂ ಸಂಸ್ಕೃತಿ ಉಳಿಸುವ ವಾಗ್ದಾನ ಮಾಡಿದರು. ಜಿಲ್ಲಾ ಕೇಂದ್ರದಿಂದ ಬಹುದೂರದ ಗ್ರಾಮೀಣ ಪರಿಸರದಲ್ಲಿ ಆಯೋಜಿಸಿದ್ದ ಸಮ್ಮೇಳನವು ಯಶಸ್ವಿಯಾಯಿತು.

ಸಮ್ಮೇಳನಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಅರೆಭಾಷೆಯ ಸಂಸ್ಕೃತಿ ಹಾಗೂ ಭಾಷೆ ನಶಿಸುವ ಆತಂಕವಿದ್ದು, ಭಾಷೆ, ಸಂಸ್ಕೃತಿ ಉಳಿಸಲು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದ 65 ಎಕರೆ ಪ್ರದೇಶದಲ್ಲಿ ‘ಅರೆಭಾಷೆ ಸಂಸ್ಕೃತಿ ಗ್ರಾಮ’ ನಿರ್ಮಾಣ ಮಾಡಲಾಗುವುದು. ಸಮಾಜದ ನಡೆದು ಬಂದ ಹಾದಿಯನ್ನು ಬಿಂಬಿಸಲಾಗುವುದು’ ಎಂದು ಹೇಳಿದರು.

‘₹ 100 ಕೋಟಿ ವೆಚ್ಚವಾಗಲಿದೆ. ನಾಲ್ಕೈದು ವರ್ಷದಲ್ಲಿ ಸಂಸ್ಕೃತಿ ಗ್ರಾಮದ ನಿರ್ಮಾಣ ಪೂರ್ಣವಾಗಲಿದೆ. ಜಾಗ ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆಚಾರ– ವಿಚಾರ, ಸಂಸ್ಕೃತಿ, ನಡವಳಿಕೆ ಹಾಗೂ ಸಮಾಜದ ಕೊಡುಗೆಯನ್ನು ಅರೆಭಾಷೆ ಸಂಸ್ಕೃತಿ ಗ್ರಾಮದಲ್ಲಿ ಪರಿಚಯಿಸುವ ಕೆಲಸ ಮಾಡುತ್ತೇವೆ’ ಎಂದು ಕೇಂದ್ರ ಸಚಿವರು ಹೇಳಿದರು.

ಭಾಷೆ ಸಮಾಜದ ಅಡಿಗಲ್ಲು

‘ಭಾಷೆ ಸಮಾಜದ ಅಡಿಗಲ್ಲು. ಭಾಷೆ ಉಳಿದರೆ ಆ ಜನಾಂಗದ ಸಂಸ್ಕೃತಿ, ಆಚಾರ, ವಿಚಾರ ಉಳಿಯಲಿದೆ. ಇಲ್ಲದಿದ್ದರೆ ಭಾಷೆಯೇ ನಶಿಸಿ ಹೋಗಲಿದೆ. ತಮ್ಮ ಭಾಷೆಗೆ ಒತ್ತುಕೊಡುವುದು ಆ ಸಮಾಜದ ಜವಾಬ್ದಾರಿ’ ಎಂದು ಎಚ್ಚರಿಸಿದರು.

‘ಸ್ಮಾರ್ಟ್‌ಸಿಟಿ’ ಕಲ್ಪನೆ ಕೆಂಪೇಗೌಡರದ್ದು

‘ಗೌಡ ಸಮಾಜದಷ್ಟು ಕೊಡುಗೆ ನೀಡಿದ ಸಮಾಜ ಬೇರೊಂದಿಲ್ಲ. ಕೆಂಪೇಗೌಡ ಅವರು 500 ವರ್ಷದ ಹಿಂದೆಯೇ ಆಡಳಿತ ಸೂತ್ರ ತೋರಿಸಿಕೊಟ್ಟಿದ್ದರು. ‘ಸ್ಮಾರ್ಟ್‌ಸಿಟಿ’ಯನ್ನು ಕಲ್ಪನೆಯನ್ನು ಅಂದೇ ನಾಡಿಗೆ ಕೆಂಪೇಗೌಡರು ಪರಿಚಯಿಸಿದ್ದರು. ಇದು ರಾಷ್ಟ್ರದಲ್ಲಿ ಅದು ಅನುಷ್ಠಾನಕ್ಕೆ ಬರುತ್ತಿದೆ’ ಎಂದು ಡಿವಿಎಸ್‌ ಹೇಳಿದರು.

‘ವಿಶ್ವಮಾನವ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ್ದು ಕುವೆಂಪು. ಅವರು ನಮ್ಮ ಸಮಾಜದವರು ಎನ್ನುವ ಹೆಮ್ಮೆಯೂ ಇರಲಿ’ ಎಂದು ಡಿವಿಎಸ್‌ ಕರೆ ನೀಡಿದರು.

ಮೂರೇ ದಿನದಲ್ಲಿ ಅಕಾಡೆಮಿ

‘ರಾಜ್ಯದಲ್ಲಿ ಹಲವು ಅಕಾಡೆಮಿಗಳಿದ್ದವು. ಆದರೆ, ಅರೆಭಾಷೆಗೆ ಅಕಾಡೆಮಿ ಇರಲಿಲ್ಲ. ಮೂರು ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಪ್ರತ್ಯೇಕ ಅಕಾಡೆಮಿ ಬೇಡ ಎನ್ನುವ ವಾದವೂ ಇತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕಾಡೆಮಿ ಅಸ್ತಿತ್ವಕ್ಕೆ ತರಲಾಯಿತು. ಮೂರೇ ದಿನದಲ್ಲಿ ಅಕಾಡೆಮಿ ರಚಿಸಿ ಆದೇಶ ನೀಡಲಾಯಿತು’ ಎಂದು ಕೇಂದ್ರ ಸಚಿವರು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಸಂಗಯ್ಯಪುರದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಅಪಾರ ಸಂಖ್ಯೆಯಲ್ಲಿ ಜನಾಂಗದವರು ಪಾಲ್ಗೊಂಡಿದ್ದು ಭಾಷೆ ಹಾಗೂ ಜನಾಂಗದ ಮೇಲಿನ ಪ್ರೀತಿಗೆ ಕಾರಣವಾಗಿದೆ. ಬರೀ ಕಾರ್ಯಕ್ರಮಕ್ಕೆ ಸೀಮಿತವಾಗದೆ ಭಾಷೆ ಉಳಿಸಲು ಶ್ರಮಿಸೋಣ’ ಎಂದು ಕರೆ ನೀಡಿದರು.

‘ಜಾತಿ ತಿರಸ್ಕಾರ ಮಾಡದೆ ಜನಿಸಿದ ಜಾತಿಯ ಬಗ್ಗೆಯೂ ಅಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಭಾಷೆಯಲ್ಲಿ ಮಾತನಾಡಲು ಹಿಂಜರಿಕೆ ಮಾಡಿಕೊಳ್ಳಬಾರದು’ ಎಂದು ಬೋಪ್ಪಯ್ಯ ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ಅಕಾಡೆಮಿ ಸ್ಥಾಪನೆಗೆ ಡಿ.ವಿ.ಸದಾನಂದಗೌಡ ಅವರು ಕಾರಣರ್ಕತರು. ದೇಶದಲ್ಲಿ ನೂರಾರು ಭಾಷೆಗಳಿವೆ. ಕೆಲವು ನಶಿಸಿ ಹೋಗುತ್ತಿವೆ. ಸಂಸ್ಕೃತಿ, ಭಾಷೆ ಉಳಿಯದಿದ್ದರೆ ಜನಾಂಗವೂ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಭವಾನಿಶಂಕರ ಹೊದ್ದೆಟ್ಟಿ,ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್‌ ಹಾಗೂ ಪಿ.ಸಿ.ಜಯರಾಮ್‌, ರಿಜಿಸ್ಟ್ರಾರ್ ಚಿನ್ನಸ್ವಾಮಿ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT