ಗುರುವಾರ , ಆಗಸ್ಟ್ 18, 2022
23 °C

ಬಬ್ಲು ಭಯ್ಯಾ ಕ್ಷಮಿಸುತ್ತೀಯಾ ನಮ್ಮನ್ನು?

ಎ.ಆರ್‌. ವಾಸವಿ Updated:

ಅಕ್ಷರ ಗಾತ್ರ : | |

prajavani

ದೇಶ ವಿಭಜನೆ ಆದಾಗಲೂ ನಡೆದಿರದಷ್ಟು ಮಹಾ ವಲಸೆಯು ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನಡೆಯುತ್ತಿದೆ. ಊರು ತಲುಪಲು ವಲಸಿಗರಿಗೆ ಎಷ್ಟೊಂದು ಧಾವಂತವೆಂದರೆ, ಲಕ್ಷಾಂತರ ಮಂದಿ ನೂರಾರು ಕಿ.ಮೀ. ದೂರವನ್ನು ನಡೆದೇ ಕ್ರಮಿಸಿದರು. ಸಾವಿರಾರು ಕಿ.ಮೀ. ದೂರದ ಮನೆಗೆ ಹೋಗಲು ಸೈಕಲ್‌ ಏರಿದವರೆಷ್ಟೊ? ಅಪಾಯ ಲೆಕ್ಕಿಸದೆ ಸಿಕ್ಕ, ಸಿಕ್ಕ ಲಾರಿ, ಟ್ಯಾಂಕರ್‌ ಹತ್ತಿದವರು ಹಲವರು. ಉಳಿದವರು ವಲಸೆ ಸ್ಥಳದಲ್ಲೇ ಕಣ್ಣೀರಾದರು. ಶ್ರಮಿಕ ರೈಲಿಗಾಗಿ ಕಾದು ಕುಳಿತರು. ಇದು ದೇಶದ ಪ್ರಸಕ್ತ ಶತಮಾನದ ಅತ್ಯಂತ ದೊಡ್ಡ ಮಾನವೀಯ ದುರಂತ ಕಥನ. ಈ ದುರಂತದ ನಾನಾ ಆಯಾಮಗಳ ಮೇಲೆ ಇಂದಿನಿಂದ ಶುರುವಾಗಿರುವ ಈ ಲೇಖನಮಾಲೆ ಬೆಳಕು ಚೆಲ್ಲಲಿದೆ. ಇಂದಿನ ಲೇಖನದ ಬಬ್ಲು ಇಲ್ಲಿ ನೆಪಮಾತ್ರ. ಇದು ಪ್ರತಿಯೊಬ್ಬ ವಲಸೆ ಕಾರ್ಮಿಕನ ದುರಂತ ಕಥನವೂ ಹೌದು...

ಬಬ್ಲು ಭಯ್ಯಾ, ರೈಲು ನಿಲ್ದಾಣಕ್ಕೆ ನಿನ್ನನ್ನು ಕರೆದೊಯ್ಯಲಿರುವ ಬಸ್‌ ಏರಲು ನೀನು ತುದಿಗಾಲ ಮೇಲೆ ನಿಂತಿದ್ದೆ. ಅರಣ್ಯಗಳ ನಾಡು, ಜಲಪಾತಗಳ ಬೀಡಾದ ನಿನ್ನ ತವರು ರಾಜ್ಯ ಜಾರ್ಖಂಡ್‌ಗೆ ಕರೆದೊಯ್ಯುವ ರೈಲನ್ನು ಏರಿ, ಕುಟುಂಬವನ್ನು ಮರು ಸೇರುವ ಧಾವಂತ ನಿನ್ನಲ್ಲಿತ್ತು. ವಾಸ್ತವವಾಗಿ ನಿನ್ನ ಮುಖದಲ್ಲಿ ಸಿಟ್ಟು, ದ್ವೇಷ ಎದ್ದು ಕಾಣಬೇಕಿತ್ತು. ಆದರೆ, ಅಲ್ಲಿದ್ದುದು ನಿರಾಳಭಾವ ಮಾತ್ರ. ಸರಿಸುಮಾರು ಎರಡು ವರ್ಷಗಳ ಬಳಿಕ ನೀನು ಮತ್ತೆ ತವರಿಗೆ ಹೊರಟಿದ್ದೆ. ನಿನ್ನ ಸ್ಥಿತಿಯೇನೂ ಕಠಿಣ ಪರಿಶ್ರಮಪಡುತ್ತಿದ್ದ ಮಗ, ಕೆಲವು ವಾರಗಳ ಮಟ್ಟಿಗೆ, ವಿಶ್ರಾಂತಿಗಾಗಿ ಊರಿಗೆ ಮರಳುತ್ತಿರುವಂತೆ ಇರಲಿಲ್ಲ. ಬದಲು ನಿನ್ನ ದೇಶದಲ್ಲಿಯೇ ನೀನೊಬ್ಬ ನಿರಾಶ್ರಿತನಂತೆ ಹೋಗುತ್ತಿದ್ದೆ.

ಬೆಂಗಳೂರಿನ ಈ ಪೊಲೀಸ್‌ ಠಾಣೆಯಲ್ಲಿ ನಿನ್ನ ಸುತ್ತ ಸೇರಿದ್ದ ನೂರಾರು ಕಾರ್ಮಿಕರು ಆ ವಿಶೇಷ ಟೋಕನ್‌ಗಾಗಿ ಕಾದಿದ್ದವರೇ. ಏಕೆಂದರೆ, ಊರಿನ ರೈಲು ಏರಲು ಆ ಟೋಕನ್‌ ಬೇಕೇಬೇಕಿತ್ತು. ‘ಪ್ರಕ್ರಿಯೆ’ ಮುಗಿಸಲು ಕಾದಿದ್ದ ಯುವಕರ ಗುಂಪು, ಸಾಲು–ಸಾಲಾಗಿ ನಿಂತಿದ್ದ ಬಸ್‌ಗಳು, ದಾಖಲೆಗಳು ಹಾಗೂ ಟೋಕನ್‌ಗಳ ಮಧ್ಯೆ ಹುದುಗಿಹೋಗಿದ್ದ ಪೊಲೀಸರು, ಫಾರ್ಮ್‌ಗಳನ್ನು ಭರ್ತಿ ಮಾಡಿಕೊಡುತ್ತಿದ್ದ ಸ್ವಯಂಸೇವಕರು... ಅಲ್ಲಿನ ಆ ದೃಶ್ಯಗಳು ಯುರೋಪಿನ ಮಹಾಯುದ್ಧದ ಕುರಿತಾದ ಚಿತ್ರವನ್ನು ನೋಡಿದಂತಿತ್ತು. ಹೌದು, ನಿನ್ನ ಪಾಲಿಗೆ ಇದು ವಾಸ್ತವವಾಗಿತ್ತು. ದುಡಿಯುವ ಜನರ ಮೇಲೆ ಇದು ಹೊಸ ರೀತಿಯ ಯುದ್ಧವಲ್ಲವೇ?

ನೀನು ಮೊದಲು ಪಾತ್ರೆ ತೊಳೆಯುವವನಾಗಿ ಸೇರಿಕೊಂಡು, ಈಗ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಂಚತಾರಾ ಹೋಟೆಲ್‌, ಲಾಕ್‌ಡೌನ್‌ ಕಾರಣದಿಂದ ಬಂದ್‌ ಆಯಿತು. ಮರುಕ್ಷಣವೇ ನಿನ್ನನ್ನು ಅಲ್ಲಿಂದ ಹೊರದಬ್ಬಲಾಯಿತು. ಏಳು ವಾರಗಳಿಂದ ನಿನ್ನ ರೂಮ್‌ನಲ್ಲಿಯೇ ನೀನು ಬಂದಿಯಾಗಿದ್ದೆ. ಮೊದಲು ಮೂವರಿದ್ದ ಆ ಪುಟ್ಟ ರೂಮ್‌ನ ವಾಸಿಗಳ ಸಂಖ್ಯೆ ಕೊನೆಗೆ ಎಂಟಕ್ಕೆ ಏರಿತ್ತು. ಎಲ್ಲಿಯೂ ಉಳಿಯಲು ಜಾಗ ಇಲ್ಲದವರಿಗೆ ನಿಮ್ಮಂಥವರೇ ತಾನೇ ಕರೆದು ಜಾಗ ನೀಡುವುದು? ಅವರೊಂದಿಗೆ ನಿನ್ನ ಕಾಸೂ ಸೇರಿಸಿ ಊಟದ ವ್ಯವಸ್ಥೆ ಮಾಡಿಕೊಂಡಿದ್ದೆ. ಕಾಸು ಖಾಲಿಯಾದ ಬಳಿಕ ಬೀದಿಯಲ್ಲಿ ಹಂಚುತ್ತಿದ್ದ ಆಹಾರ ಪೊಟ್ಟಣಗಳಿಗಾಗಿ ನೀನೂ ಕೈಯೊಡ್ಡಬೇಕಾಯಿತು.

ಪಂಚತಾರಾ ಹೋಟೆಲ್‌ನಲ್ಲಿ ಉಳ್ಳವರು ಎಂಜಲು ಮಾಡಿ, ಚೆಲ್ಲಿ ಹೋಗುತ್ತಿದ್ದ ಆಹಾರದ ನೆನಪೂ ನಿನಗೆ ಬಂತು. ಆ ಆಹಾರವನ್ನು ತಿನ್ನಲು ನೀನೆಂದೂ ಮನಸ್ಸು ಮಾಡಿದವನಲ್ಲ. ರೂಮ್‌ನಲ್ಲಿ ದಾಲ್‌, ರೋಟಿ, ಸಬ್ಜಿ ಮಾಡಿಕೊಂಡು ಊಟ ಮಾಡಿದವನು ನೀನು. ಹೋಟೆಲ್‌ನಲ್ಲಿ ಮಾಡುತ್ತಿದ್ದ ನೂರಕ್ಕೂ ಅಧಿಕ ತಿನಿಸುಗಳನ್ನು ನೆನಪು ಮಾಡಿಕೊಂಡೆ. ಜನ್ಮದಿನದ ಸಮಾರಂಭಕ್ಕೋ, ಕಾರ್ಪೊರೇಟ್‌ ಪಾರ್ಟಿಗೋ, ವಿವಾಹದ ಕಾರ್ಯಕ್ರಮಕ್ಕೋ, ವಿಶೇಷ ಭೋಜನವನ್ನು ತಯಾರಿಸುತ್ತಿದ್ದುದೂ ನಿನಗೆ ನೆನಪಿದೆ. ಬಫೆ ಎಂದು ಕರೆಯಿಸಿಕೊಳ್ಳುವ ಆ ಒಂದ್ಹೊತ್ತಿನ ಊಟಕ್ಕೆ 60ಕ್ಕೂ ಹೆಚ್ಚು ತರಾವರಿ ತಿನಿಸುಗಳು. ನೀನು ಎರಡು ವಾರಗಳ ದುಡಿಮೆಗೆ ಪಡೆಯುವ ಸಂಬಳಕ್ಕಿಂತ ಆ ಒಂದು ಊಟದ ಬೆಲೆಯೇ ಹೆಚ್ಚಿತ್ತು, ಅಲ್ಲವೇ?

ಕನ್ನಡವನ್ನು ಕಲಿಯುತ್ತಾ, ಕನ್ನಡದ ಗೀತೆಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದ ನೀನು, ಕೆಲವೊಮ್ಮೆ ಜತೆಗಾರರೊಂದಿಗೆ ಕನ್ನಡ ಅಥವಾ ತಮಿಳು ಸಿನಿಮಾವನ್ನೂ ನೋಡುತ್ತಿದ್ದೆ. ಹೌದು, ನಿನಗೆ ಸಿಗುತ್ತಿದ್ದುದಾದರೂ ಎಷ್ಟು ವೇತನ? ಇದ್ದ 12,000 ರೂಪಾಯಿ ವೇತನದಲ್ಲಿ ಸ್ವಲ್ಪ ಭಾಗವನ್ನು ಉಳಿಸಿ, ಊರಿಗೂ ಕಳಿಸುತ್ತಿದ್ದೆ. 

ನೀನು ಕಂಡಿದ್ದ ಕನಸುಗಳು ತುಂಬಾ ಸರಳವಾಗಿದ್ದವು. ಆದರೆ, ನನಸಾಗಿಸುವುದು ಅಷ್ಟೇ ಕಠಿಣವಾಗಿತ್ತು. ಬೆಂಗಳೂರು ಎಂಬ ಈ ದೊಡ್ಡ ನಗರದಲ್ಲಿ ನೀನು ದುಡಿಯಲು ಬಂದೆ. ಏಕೆಂದರೆ, ನಿನ್ನನ್ನು ಇಲ್ಲಿ ಕರೆತಂದಾತ ಕೈತುಂಬಾ ಕಾಸು ಮಾಡಬಹುದು ಎಂಬ ಕನಸನ್ನು ನಿನ್ನಲ್ಲಿ ಬಿತ್ತಿದ್ದ. ಗಗನಚುಂಬಿ ಕಟ್ಟಡಗಳ ಈ ಊರಿನಲ್ಲಿ ಹೆಲಿಕಾಪ್ಟರ್‌ಗಳಲ್ಲಿ ಓಡಾಡುವ ಜನರೂ ಇದ್ದಾರೆ. ಕೆಲಸಕ್ಕೆ ಮೋಸವಿಲ್ಲ ಎಂದು ಗುತ್ತಿಗೆದಾರ ನಿನ್ನನ್ನು ಪುಸಲಾಯಿಸಿ ಇಲ್ಲಿಗೆ ಕರೆತಂದಿದ್ದ.

ಊರಿನಿಂದ ನೀನು ದೂರ, ಬಹುದೂರ ಇದ್ದುದರಿಂದ ನಿನಗೆ ಬೇಕೆಂದಾಗ ಮನೆಗೆ ಹೋಗಲು ಆಗಲಿಲ್ಲ. ಹಬ್ಬಗಳಿರಲಿ, ಮನೆಯ ಸಂಪ್ರದಾಯಗಳಿರಲಿ, ಜ್ವರದಿಂದ ಬಳಲುತ್ತಿರಲಿ ನೀನು ಊರಿಗೆ ಹೋಗಲು ಮನಸ್ಸು ಮಾಡಲಿಲ್ಲ. ವೇತನದಲ್ಲಿ ಸಣ್ಣ ಏರಿಕೆಯಾದರೂ ನಿನಗೆ ಎಷ್ಟೊಂದು ಸಂತೋಷ ಆಗುತ್ತಿತ್ತು.

ನಿನ್ನ ಸುತ್ತಲೂ ಎಷ್ಟೊಂದು ಕಾರ್ಮಿಕರು! ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುವ ಕುಕ್‌ಗಳು, ವೇಟರ್‌ಗಳು, ಕ್ಲೀನರ್‌ಗಳು, ಮೆಟ್ರೊ ಮತ್ತು ಅಂತಹದ್ದೇ ದೊಡ್ಡ ನಿರ್ಮಾಣ ಯೋಜನೆಗಳಲ್ಲಿ ದುಡಿಯುವವರು, ಪೌರ ಕಾರ್ಮಿಕರು, ಧೋಬಿಗಳು, ಬೀದಿ ವ್ಯಾಪಾರಿಗಳು, ಸೆಕ್ಯೂರಿಟಿ ಗಾರ್ಡ್‌ಗಳು, ಕೂಲಿಗಳು, ಮಾಲಿಗಳು... ಇಂತಹ ಹತ್ತಾರು ವೃತ್ತಿಗಳಲ್ಲಿ ತೊಡಗಿದವರು ಅವರಾಗಿದ್ದರು. ಅವರಲ್ಲಿ ಲಕ್ಷಾಂತರ ಮಂದಿ ರಾಜ್ಯದ ವಿವಿಧ ಭಾಗಗಳಿಂದ ಬಂದು ಸೇರಿದವರಾದರೆ, ಉಳಿದವರು ನಿನ್ನಂತೆ ದೇಶದ ಬೇರೆ ರಾಜ್ಯಗಳಿಂದ ಬಂದವರು.

ಸದಾ ಗಡಿಬಿಡಿಯಲ್ಲಿರುವ ಮಹಿಳಾ ಕಾರ್ಮಿಕರನ್ನೂ ನೀನು ನೋಡಿದ್ದೆ. ಅವರೆಲ್ಲ ಗಾರ್ಮೆಂಟ್‌ ಘಟಕಗಳಲ್ಲಿ ದುಡಿಯುವವರಾಗಿದ್ದರು. ಫ್ಯಾಕ್ಟರಿ ಬಸ್‌ಗಳಿಂದ ಇಳಿದಕೂಡಲೇ ತರಕಾರಿ ಖರೀದಿಸುವ ಧಾವಂತ ಕಾಣುತ್ತಿತ್ತಲ್ಲವೇ ಅವರಲ್ಲಿ? ಮನೆಗೆ ಹೋಗಿ ಮಕ್ಕಳ ಹೊಟ್ಟೆ ತುಂಬಿಸುವ ಹೊಣೆಯೂ ಅವರದಾಗಿತ್ತು. ಮನೆಗೆಲಸದ ಮಹಿಳೆಯರೂ ಎಷ್ಟೊಂದು ಸಂಖ್ಯೆಯಲ್ಲಿದ್ದರು. ಅವರಲ್ಲಿ ಎಲ್ಲ ವಯೋಮಾನದವರೂ ಇದ್ದರು. ಮನೆ–ಮನೆಗಳಲ್ಲಿ, ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಅವರು ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಯುವತಿಯರನ್ನು ನೋಡಿ ನೀನು ಮಂದಹಾಸ ಬೀರಿದ್ದೆ. ಅವರೆಲ್ಲ ಬ್ಯೂಟಿ ಪಾರ್ಲರ್‌ಗಳಲ್ಲೋ, ಸಲೂನ್‌ಗಳಲ್ಲೋ ಕೆಲಸ ಮಾಡುತ್ತಿದ್ದವರಾಗಿದ್ದರು.

ದಿಲ್ಲಿ ಸರ್ಕಾರವು ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಘೋಷಣೆ ಹೊರಡಿಸಿದ್ದನ್ನು ನೀನೂ ಕೇಳಿಸಿಕೊಂಡಿದ್ದೆ. ನನ್ನ ಊರು, ನನ್ನ ಪ್ರದೇಶ, ನನ್ನ ಜನರೇನು ಇದರಿಂದ ವಂಚಿತವಾಗಿ ಹೊರಗೆ ಉಳಿಯುವುದಿಲ್ಲ ಎಂದು ನೀನು ಅಂದುಕೊಂಡಿದ್ದೆ. ಕೆಲಸಕ್ಕಾಗಿ ನೀನು ಈ ದೊಡ್ಡ ನಗರಕ್ಕೆ ಬಂದಿದ್ದೆಯಲ್ಲ; ಅದೇ ನಿನ್ನ ವಿಕಾಸ! ಹಕ್ಕುಗಳ ಕುರಿತು ಕೆಲವರು ಮಾತನಾಡುವುದುಂಟು. ಹೌದು, ಈ ಹಕ್ಕುಗಳು ಅಂದರೆ ಏನು?

ನ್ಯಾಯೋಚಿತ ವೇತನ ಪಡೆಯುವ ನಿನ್ನ ಹಕ್ಕನ್ನು ಚಲಾಯಿಸಲು ನಿನಗೆ ಸಾಧ್ಯವಾಗಲಿಲ್ಲ. ಮಾರ್ಚ್‌ ತಿಂಗಳ ವೇತನವೇನೋ ನಿನಗೆ ಸಿಕ್ಕಿದೆ. ಆ ತಿಂಗಳು ನೀನು ಐದು ದಿನ ಕೆಲಸ ಮಾಡದಿದ್ದರೂ ನಿನಗೆ ಪೂರ್ಣ ವೇತನ ನೀಡಲಾಗಿದೆ! ಆದರೆ, ಭವಿಷ್ಯ ನಿಧಿ, ಬೋನಸ್‌ ಸೇರಿದಂತೆ ಉಳಿದ ಸೌಲಭ್ಯಗಳ ಕುರಿತು ಯಾವುದೇ ಭರವಸೆ ಇಲ್ಲ. ಏಪ್ರಿಲ್‌ ತಿಂಗಳು ಪೂರ್ತಿ ಹಾಗೂ ಮೇ ತಿಂಗಳಿನಲ್ಲಿ ಊರಿಗೆ ಹೋಗುವವರೆಗೆ ನೀನು ರೂಮ್‌ನಲ್ಲೇ ಇದ್ದೆ. ನಿನ್ನ ಬಳಿಯಿದ್ದ ಕಾಸನ್ನೇ ಖರ್ಚು ಮಾಡಿದ್ದೆ. ನಿನ್ನ ಜತೆಗಿದ್ದ ಕೆಲವರಂತೂ ಊರಿನಲ್ಲಿರುವ ಸಂಬಂಧಿಗಳಿಗೆ ಕರೆ ಮಾಡಿ, ಖಾತೆಗೆ ಸ್ವಲ್ಪ ಹಣ ವರ್ಗಾಯಿಸುವಂತೆ ವಿನಂತಿಸಿದ್ದೂ ಉಂಟು. ಏಪ್ರಿಲ್‌ ಮಧ್ಯದಲ್ಲಿ ಹೋಟೆಲ್‌ ವ್ಯವಸ್ಥಾಪಕನನ್ನು ನೀನು ವೇತನ ಕೇಳಿದಾಗ ‘ನೋಡೋಣ’ ಎಂದಿದ್ದ. ಊರಿಗೆ ಹೊರಟು ನಿಂತಾಗ ಆತನಿಗೆ ಕರೆ ಮಾಡಿದರೆ ಆತನ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು.

ಜಾರ್ಖಂಡ್‌ ಹಾಗೂ ಬಿಹಾರದ ನಿನ್ನ ಸುಮಾರು 20 ಗೆಳೆಯರೊಂದಿಗೆ ನಿನಗೂ ‘ಸೇವಾ ಸಿಂಧು’ ಕುರಿತು ತಿಳಿಯಿತು. ಡಿಟಿಪಿ ಅಂಗಡಿಯಲ್ಲಿ ನೀನು ಫಾರ್ಮ್‌ ಭರ್ತಿ ಮಾಡಿಸಲು 200 ರೂಪಾಯಿ, ಅದರ ಪ್ರಿಂಟ್‌ ತೆಗೆಸಲು 100 ರೂಪಾಯಿ ಕೊಟ್ಟೆ. ಯಾರಿಗೆ ಗೊತ್ತು ಬಬ್ಲು ಭಯ್ಯಾ, ಬಿಕ್ಕಟ್ಟಿನ ಆರ್ಥಿಕತೆ ಹೀಗೆ ನಿನ್ನ ಬೆನ್ನೇರಿ ಬರುತ್ತದೆ ಎಂದು? ಫಾರ್ಮ್‌ ಅನ್ನು ನೀನು ಠಾಣೆಯಲ್ಲಿ ಕೊಟ್ಟೆ. ಹತ್ತು ದಿನಗಳಾದರೂ ನಿನ್ನ ಪಾಳಿ ಬರಲಿಲ್ಲ. ಪ್ರತೀಸಲ ಹೋದಾಗ ‘ಕಾಯಬೇಕು’ ಎನ್ನುವುದೇ ಪೊಲೀಸರ ಉತ್ತರವಾಗಿತ್ತು.

ಪೊಲೀಸ್‌ ಠಾಣೆ ಮುಂದೆ ಯುವಕರು ಹಾಗೂ ಮಹಿಳೆಯರ ಗುಂಪು ಜಮಾವಣೆಗೊಂಡಿದ್ದನ್ನು ನೋಡಿ, ನೀನೂ ಹೋಗಿದ್ದಾಯಿತು. ಬೆಂಗಳೂರಿನ ಅರ್ಥಿಕ ವ್ಯವಸ್ಥೆ ಕುಸಿಯಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರದವರು ಹಾಗೂ ಬಿಲ್ಡರ್‌ಗಳು ನಿಮ್ಮನ್ನು ಇಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದರಿಂದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತು. ನಿನ್ನ ಕುಟುಂಬದ ಸದಸ್ಯರಿಗೋ ನಿನ್ನನ್ನು ನೋಡುವ ಆತುರ. ಮನೆಗೆ ಹೋಗಲೇಬೇಕು ಎನ್ನುವ ನಿರ್ಧಾರದಿಂದ ರೂಮ್‌ ಖಾಲಿ ಮಾಡಿ, ನೀನು ಪೊಲೀಸ್‌ ಠಾಣೆಗೆ ಬಂದೆ. ಆದರೆ, ಅಲ್ಲಿ ಬಂದಾಗ ರೈಲು ರದ್ದಾದ ಸುದ್ದಿ ಸಿಗಬೇಕೇ? ಠಾಣೆಯ ಮುಂಭಾಗದಲ್ಲೇ ನೀನು ಮಲಗಿ ನಿದ್ರಿಸಿದೆ. ಯಾರೋ ಹಂಚಿದ ಆಹಾರ ಪೊಟ್ಟಣ ಪಡೆದು, ಊಟ ಮಾಡಿದೆ. ಸಾರ್ವಜನಿಕ ಶೌಚಾಲಯವನ್ನೇ ಬಳಸಿದೆ.

ಬಬ್ಲು ಭಯ್ಯಾ, ಬೆಂಗಳೂರಿನ ಹುಡುಗನಾಗುತ್ತಾ, ಕನ್ನಡದಲ್ಲೇ ಕನಸು ಕಾಣುತ್ತಾ ಅಷ್ಟೂ ವರ್ಷಗಳನ್ನು ಕಳೆದೆ. ಈ ನಡುವೆ ಎಷ್ಟೊಂದು ನೋವು ಅನುಭವಿಸಿದೆ. ಕರ್ನಾಟಕದ ಈ ನೆಲದಲ್ಲಿ ನೀನು ಹಾಲು ಜೇನನ್ನೇ ಸವಿಯಬಹುದು ಎಂಬ ಭರವಸೆಯನ್ನು ನಿನ್ನಲ್ಲಿ ಬಿತ್ತಿದ್ದರಲ್ಲವೇ? ಇದೇ ನೆಲದವರೇ ಆದ ರಾಷ್ಟ್ರಕವಿ ಕುವೆಂಪು ಅವರ ‘ವಿಶ್ವ ಮಾನವ’ ಸಂದೇಶ ನಿಜಕ್ಕೂ ಇಲ್ಲಿ ಕೃತಿಗಿಳಿದಿದೆಯೇ? ಸಾಂಸ್ಕೃತಿಕ ಹೀರೊ ರಾಜ್‌ಕುಮಾರ್‌ ಅವರು ಹೆಜ್ಜೆ ಹಾಕಿದ್ದ ಹಾಡುಗಳಲ್ಲಿ ವ್ಯಕ್ತವಾಗಿದ್ದ ಕಠಿಣ ಶ್ರಮ, ಪ್ರಾಮಾಣಿಕತೆ, ಮಾನವೀಯತೆ ಎಂಬೆಲ್ಲ ಮೌಲ್ಯಗಳು ಏನಾದವು? ಭಯ್ಯಾ, ನಿನ್ನ ಕನಸುಗಳು ನನಸಾಗಲು ಅವಕಾಶ ನೀಡದಿರುವುದಕ್ಕೆ, ಶ್ರಮ–ಪ್ರಾಮಾಣಿಕತೆ ಎಂಬ ಮೌಲ್ಯಗಳಿಗೆ ಬೆಲೆ ನೀಡದಿರುವುದಕ್ಕೆ ನಮ್ಮನ್ನು ಕ್ಷಮಿಸುವೆ ಅಲ್ಲವೇ?

ಆರ್ಥಿಕ ಮುಗ್ಗಟ್ಟಿನ ಈ ಸನ್ನಿವೇಶದಲ್ಲಿ ನಿನ್ನ ಕಠಿಣ ಶ್ರಮ ಮತ್ತು ಕಾಣಿಕೆಯನ್ನು ಹೇಗೆ ನೆನಪು ಮಾಡಿಕೊಳ್ಳುವುದು? ಆದ್ದರಿಂದಲೇ ಪೊಲೀಸರನ್ನು ನಿಮ್ಮಂಥವರ ಮೇಲೆ ಹರಿಹಾಯಲು ಬಿಟ್ಟೆವು. ಊರಿಗೆ ನಡೆಯುತ್ತಾ ಹೊರಟವರ ಮೇಲೆ ಲಾಠಿ ಬೀಸುವಂತೆಯೂ ಮಾಡಿದೆವು. ನಿನಗೆ ಊಟ ಮಾತ್ರವಲ್ಲ; ಆತ್ಮಗೌರವ, ಘನತೆ ಮತ್ತು ಭರವಸೆಯೂ ಬೇಕಿತ್ತು ಎಂಬುದನ್ನು ನಾವು ಮರೆತುಬಿಟ್ಟೆವು. ಬೆಂಗಳೂರು ದಿನದ 24 ಗಂಟೆಯೂ ಕ್ರಿಯಾಶೀಲವಾಗಿರುವ ಕಾಸ್ಮೊಪಾಲಿಟನ್‌ ನಗರವಾಗಿದ್ದು, ಕಣ್ಣು ಕುಕ್ಕುವಂತಹ ಸೌಕರ್ಯಗಳು ಇಲ್ಲಿ ನಿರ್ಮಾಣವಾಗಿದ್ದು, ಗಗನಚುಂಬಿ ಕಟ್ಟಡಗಳು ಎದ್ದಿದ್ದು, ಈ ವೈಭವ ಮನೆಮಾಡಿದ್ದು ನಿಮ್ಮಂತಹ ಲಕ್ಷಾಂತರ ಕಾರ್ಮಿಕರಿಂದಲೇ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಲೇ ಇಲ್ಲ.

ಬಬ್ಲು ಭಯ್ಯಾ, ಎಷ್ಟೊಂದು ಹಿಂಸೆಯನ್ನು ನಾವು ಕೊಟ್ಟರೂ ರೈಲು ನಿಲ್ದಾಣಕ್ಕೆ ಹೋಗಲು ಸ್ವಯಂಸೇವಕರ ನೆರವಿನಿಂದ ನೀನು ಬಸ್‌ ಏರುವಾಗ ಅದೇಕೆ ನೀನು ಸಿಟ್ಟು ಮಾಡಿಕೊಳ್ಳಲಿಲ್ಲ, ದ್ವೇಷ ಸಾಧಿಸಲಿಲ್ಲ? ಬಸ್‌ ಹೊರಡುತ್ತಿದ್ದಂತೆ ದಾರಿಯಲ್ಲಿ ಸಿಕ್ಕ ದೊಡ್ಡ ಕಟ್ಟಡಗಳು, ಫ್ಲೈಓವರ್‌ಗಳು, ಪಾರ್ಕ್‌ಗಳು, ಮನರಂಜನಾ ಕೇಂದ್ರಗಳು, ಮಾಲ್‌ಗಳು ಹೇಗೆ ಖಾಲಿ, ಖಾಲಿ ಹೊಡೆಯುತ್ತಿದ್ದವು ಎಂಬುದನ್ನು ನೋಡಿದೆಯಾ? ವಿಧಾನಸೌಧದ ಮುಂಭಾಗದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆದಿದ್ದನ್ನೂ ನೀನು ಗಮನಿಸಿದೆಯಾ? ಹಾಗಾದರೆ ದೇವರ ಕೆಲಸ ಮಾಡಬೇಕಾದ ಈ ಸರ್ಕಾರ ಎಲ್ಲಿದೆ ಎಂದು ಪ್ರಶ್ನೆ ಮಾಡಿದೆಯಾ?

ಬಬ್ಲು ಭಯ್ಯಾ, ಕ್ಷಮಿಸಿಬಿಡು ನಮ್ಮನ್ನು. ಏಕೆಂದರೆ, ನಾವು ದೇವರು ಮತ್ತು ಸರ್ಕಾರ ಎಂದರೇನು ಎಂಬುದನ್ನಷ್ಟೇ ಮರೆತಿಲ್ಲ; ಮಾನವೀಯತೆಯನ್ನೇ ಸಂಪೂರ್ಣವಾಗಿ ಮರೆತುಬಿಟ್ಟಿದ್ದೇವೆ.

ಬಬ್ಲು ಭಯ್ಯಾ, ಕ್ಷಮಿಸುತ್ತೀಯಾ ನಮ್ಮನ್ನು?

(ಲೇಖಕಿ: ಸಾಮಾಜಿಕ ಮಾನವಶಾಸ್ತ್ರಜ್ಞೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು