ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರ ಗುಡುಗು: ಬೃಹತ್ ಪ್ರತಿಭಟನಾ ರ‍್ಯಾಲಿ

₹ 12 ಸಾವಿರ ಗೌರವ ಧನ ನಿಗದಿಗೆ ಒತ್ತಾಯ
Last Updated 3 ಜನವರಿ 2020, 21:58 IST
ಅಕ್ಷರ ಗಾತ್ರ

ಬೆಂಗಳೂರು: ‘ತಿಂಗಳ ಗೌರವ ಧನಕನಿಷ್ಠ ₹ 12 ಸಾವಿರ ನಿಗದಿಪಡಿಸಬೇಕು’ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಘಟನೆ (ಎಐಯುಟಿಯುಸಿ) ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ರಾಯಚೂರು, ಬೀದರ್, ಕಲಬುರ್ಗಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರೈಲು ಮೂಲಕ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆಬೆಳಿಗ್ಗೆಯೇ ಬಂದಿಳಿದ ಕಾರ್ಯಕರ್ತೆಯರು, ನಿಲ್ದಾಣದಲ್ಲೇ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಅಲ್ಲಿಂದ ಬೆಳಿಗ್ಗೆ 11ರ ಸುಮಾರಿಗೆ ರ‍್ಯಾಲಿ ಆರಂಭಿಸಿದರು. ಶೇಷಾದ್ರಿ ರಸ್ತೆ ಮೇಲ್ಸೇತುವೆ ಮೂಲಕ ರ‍್ಯಾಲಿ ಸಾಗಿತು. ಇಡೀ ಮೇಲ್ಸೇತುವೆ ಸಾವಿರಾರು ಕಾರ್ಯಕರ್ತೆಯರಿಂದ ತುಂಬಿ ಹೋಗಿತ್ತು. ಸ್ವಾತಂತ್ರ್ಯ ಉದ್ಯಾನದಲ್ಲಿ ರ‍್ಯಾಲಿ ಅಂತ್ಯವಾಯಿತು. ನಂತರ, ಬಹಿರಂಗ ಸಭೆ ನಡೆಸಲಾಯಿತು.

‘ಮಾಸಿಕ ಗೌರವ ಧನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಸರ್ಕಾರಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈ ಬಾರಿಯೂ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷಸೋಮಶೇಖರ್, ‘ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದ್ದಾರೆ. ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಇವರ ಬೇಡಿಕೆ ಈಡೇರಿಸಲು ಆಗ್ರಹಿಸಿ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ರಮೇಶ್‌
ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪ್ರತಿಭಟನೆ ನಡೆಸಲಾಗಿತ್ತು. ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದರು.

ನಿಲ್ದಾಣದಿಂದ ಉದ್ಯಾನದವರೆಗೆ ರ್‍ಯಾಲಿ ಸಾಗುವ ವೇಳೆಯಲ್ಲಿ ಶೇಷಾದ್ರಿ ರಸ್ತೆ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಮೆಜೆಸ್ಟಿಕ್, ಓಕಳಿಪುರ, ಮಲ್ಲೇಶ್ವರ, ಕೆ.ಆರ್.ವೃತ್ತ, ಅರಮನೆ ರಸ್ತೆ, ಚಾಲುಕ್ಯ ವೃತ್ತ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು.

ಕಾರ್ಯಕರ್ತೆ ಅಸ್ವಸ್ಥ
ರ‍್ಯಾಲಿಯಲ್ಲಿ ನಡೆದುಕೊಂಡು ಬಂದು ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತೆಯೊಬ್ಬರು ಏಕಾಏಕಿ ಕುಸಿದುಬಿದ್ದು ಅಸ್ವಸ್ಥಗೊಂಡರು.

ಬಹಿರಂಗ ಸಭೆಯಲ್ಲಿ ಮುಖಂಡರು ಭಾಷಣ ಮಾಡುತ್ತಿದ್ದ ವೇಳೆಯಲ್ಲೇ ಕಾರ್ಯಕರ್ತೆ ಅಸ್ವಸ್ಥಗೊಂಡಿದ್ದರು. ಸ್ಥಳದಲ್ಲೇ ಇದ್ದ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ನಂತರ, ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಪ್ರಮುಖ ಬೇಡಿಕೆಗಳು
*ತಿಂಗಳ ಕನಿಷ್ಠ ಗೌರವ ಧನ ₹ 12 ಸಾವಿರಕ್ಕೆ ನಿಗದಿಪಡಿಸಬೇಕು

* ಆಶಾ ಸಾಫ್ಟ್‌ ಅಥವಾ ಆರ್‌ಸಿಎಚ್‌ ಪೋರ್ಟಲ್‌ಗೆ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು ಜೋಡಣೆ ಮಾಡುವುದನ್ನು ರದ್ದುಪಡಿಸಬೇಕು

* 15 ತಿಂಗಳ ಬಾಕಿ ಪ್ರೋತ್ಸಾಹ ಧನವನ್ನು ಒಂದೇ ಬಾರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು

*
ಎರಡು ದಿನ ಪ್ರತಿಭಟನೆಗೆ ಅನುಮತಿ ಕೋರಿದ್ದೆವು. ಪೊಲೀಸರು ಒಂದೇ ದಿನ ನೀಡಿದ್ದಾರೆ. ಸದ್ಯ ಪ್ರತಿಭಟನೆ ಕೈಬಿಟ್ಟಿದ್ದೇವೆ.
-ಡಿ. ನಾಗಲಕ್ಷ್ಮಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ

*
ಬೇರೆ ರಾಜ್ಯಗಳಲ್ಲಿ ಗೌರವ ಧನ ಹೆಚ್ಚಿದೆ ಎಂಬುದು ಆಶಾ ಕಾರ್ಯಕರ್ತೆಯರ ವಾದ.₹1 ಸಾವಿರ ಹೆಚ್ಚಿಸುವಂತೆ ಸರ್ಕಾರ ಈಗಾಗಲೇ ‌ಪ್ರಸ್ತಾವನೆ ಕಳುಹಿಸಿದೆ‌.
-ಬಿ. ಶ್ರೀರಾಮುಲು, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT