ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ಪತ್ರಕರ್ತರು ಸೇರಿ ಏಳು ಮಂದಿ ವಿರುದ್ಧ ಎಫ್‌ಐಆರ್

Last Updated 14 ಜೂನ್ 2019, 14:48 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಮ್ಸ್‌ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಷಿಯನ್‌ ವಿ.ಕೆ.ಯಾದವಾಡ ಗುರುವಾರ ನೀಡಿದ ದೂರಿನ ಮೇರೆಗೆ ಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಎಚ್‌.ಆರ್‌.ರಂಗನಾಥ್‌, ವರದಿಗಾರ ವೀರೇಶ್‌ದಾನಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ವಿಮ್ಸ್‌ ವೈದ್ಯರಾದ ಡಾ.ರವಿ ಭೀಮಪ್ಪ, ಡಾ.ಶಡ್ರಕ್‌, ಶುಶ್ರೂಷಕ ವಿಭಾಗ ಹನುಮಂತರಾಯ ಹಾಗೂ ಉಷಾ ಎಂಬುವವರ ಮೇಲೆ ಕೌಲ್‌ಬಜಾರ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇದೇ ವೇಳೆ, ‘ಯಾದವಾಡ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು’ ಎಂದು ಉಷಾ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಜೂನ್‌ 12ರಂದು ರಾತ್ರಿ ಲ್ಯಾಬ್‌ಗೆ ಬಂದ ಉಷಾ ಅವರು ಎದೆನೋವಿನ ಕಾರಣ ನೀಡಿ ರಕ್ತ ತಪಾಸಣೆ ಮಾಡುವಂತೆ ಕೋರಿದ್ದರು. ರಕ್ತದ ಮಾದರಿ ಸಂಗ್ರಹಿಸಿದ ಬಳಿಕ ಅವರು ನನ್ನ ಕೈ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ಅವರೊಂದಿಗೆ ಇದ್ದ ಐದಾರು ಮಂದಿ ಲ್ಯಾಬ್‌ಗೆ ನುಗ್ಗಿ ಹಲ್ಲೆ ಮಾಡಿದರು. ರಂಗನಾಥ್‌, ವೀರೇಶ್‌ದಾನಿ, ಮುಲಾಲಿ ಮತ್ತು ಹನುಮಂತರಾಯ ವಿರುದ್ಧ ನೀಡಿರುವ ದೂರನ್ನು ವಾಪಸ್‌ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದರು. ವೈದ್ಯರಿಬ್ಬರು ಹಲ್ಲೆ ಮಾಡುವಂತೆ ಹೇಳಿರುವುದಾಗಿಯೂ ತಿಳಿಸಿದರು. ನನ್ನ ಬಳಿ ಇದ್ದ ಚಿನ್ನದ ಸರ, ಚಿನ್ನದ ಉಂಗುರ ಮತ್ತು ಮೊಬೈಲ್‌ ಫೋನ್‌ ಅನ್ನೂ ಕಸಿದುಕೊಂಡರು’ ಎಂದು ಯಾದವಾಡ ಆರೋಪಿಸಿದ್ದಾರೆ.

‘2015ರಲ್ಲಿ ನನ್ನ ವಿರುದ್ಧ ಪಬ್ಲಿಕ್‌ ಟಿವಿಯಲ್ಲಿ ಪ್ರಕಟವಾದ ವರದಿಗೆ ಸಂಬಂಧಿಸಿ 2016ರಲ್ಲಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಅದನ್ನು ರದ್ದು ಮಾಡುವಂತೆ ಅವರು ಕೋರಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ರದ್ದು ಮಾಡಿತ್ತು. ನಂತರ, ಅವರೆಲ್ಲ ಹಾಜರಾಗಿ ಸಮಜಾಯಿಷಿ ನೀಡುವಂತೆ ನಗರದ ನ್ಯಾಯಾಲಯ ಸೂಚಿಸಿ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. ಈ ಹಿನ್ನೆಲೆಯಲ್ಲೇ ನನ್ನ ಮೇಲೆ ಹಲ್ಲೆ ನಡೆದಿದೆ’ ಎಂದು ಯಾದವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ರಂಗನಾಥ್‌, ಕರೆ ಸ್ವೀಕರಿಸಲಿಲ್ಲ. ವೀರೇಶ್‌ ದಾನಿಯವರ ಫೋನ್ ಬಂದ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT