ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿಗೆ ಧಿಕ್ಕಾರ ಕೂಗಿದ ರವಿಕುಮಾರ್: ಉಭಯ ಸದನಗಳಲ್ಲೂ ಗದ್ದಲ, ಧರಣಿ

Last Updated 3 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ವಾಕ್ಸಮರ, ಗದ್ದಲ, ಧರಣಿಯಿಂದಾಗಿ ಕಾವೇರಿದ ವಾತಾವರಣ ಸೃಷ್ಟಿಯಾಗಿ ಕಲಾಪಕ್ಕೆ ಅಡ್ಡಿ ಉಂಟಾಯಿತು.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಎನ್.ರವಿಕುಮಾರ್‌ ಅವರು ದೊರೆಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಇದರಿಂದ ಕೆರಳಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ರವಿಕುಮಾರ್‌ ಕ್ಷಮೆ ಕೋರಬೇಕು ಮತ್ತು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು. ಆದರೆ, ಕ್ಷಮೆ ಕೇಳಲು ಅವರು ನಿರಾಕರಿಸಿದರು.

ವಿಧಾನಸಭೆಯಲ್ಲಿ ಕಲಾಪ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಕಾಂಗ್ರೆಸ್‌ ನಾಯಕರು ಬೆಳಿಗ್ಗೆಯೇ ಸಭಾಧ್ಯಕ್ಷರಿಗೆ ನಿಯಮ 363 ಅಡಿ ದೊರೆಸ್ವಾಮಿ ಪ್ರಕರಣವನ್ನು ಪ್ರಸ್ತಾಪ ಮಾಡಲು ನೋಟಿಸ್‌ ನೀಡಿತ್ತು. ಆದರೆ, ಬಿಜೆಪಿ ಈನೋಟಿಸ್‌ ಉದ್ದೇಶದ ಬಗ್ಗೆಯೇ ತಕರಾರು ಎತ್ತಿ, 328 ರ ಅಡಿ ಬಸನಗೌಡ ಯತ್ನಾಳ್ ಅವರಿಗೆ ನೋಟಿಸ್‌ ನೀಡಿದರಷ್ಟೇ ಚರ್ಚೆಗೆ ಸಿದ್ಧ ಎಂದು ಪಟ್ಟು ಹಿಡಿಯಿತು. ಆದರೆ, ಅದಕ್ಕೆ ಕಾಂಗ್ರೆಸ್ ಒಪ್ಪಲಿಲ್ಲ.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡೂ ಪಕ್ಷಗಳ ಪ್ರಮುಖರನ್ನು ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸಿದರೂ ಕಗ್ಗಂಟು ಬಗೆಹರಿಯಲಿಲ್ಲ. ಎರಡೂ ಪಕ್ಷಗಳು ತಮ್ಮ ತಮ್ಮ ನಿಲುವಿಗೇ ಅಂಟಿಕೊಂಡವು. ಸಭಾಧ್ಯಕ್ಷರು ಎರಡೂ ಕಡೆಯ ವಾದವನ್ನು ಆಲಿಸಿ ನಿಯಮ 363 ರಡಿ ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲ. ನಿಯಮ 328 ರಡಿ ಯತ್ನಾಳ್ ಅವರಿಗೆ ನೋಟಿಸ್‌ ನೀಡಿ ವಿಷಯ ಪ್ರಸ್ತಾಪಿಸ
ಬಹುದು ಎಂದು ರೂಲಿಂಗ್‌ ನೀಡಿದರು. ಇದನ್ನು ಒಪ್ಪದ ಕಾಂಗ್ರೆಸ್‌ ಸದಸ್ಯರು ಇನ್ನಷ್ಟು ಗದ್ದಲ ಎಬ್ಬಿಸಿದರು. ಜೆಡಿಎಸ್‌ ಸದಸ್ಯರು ಧರಣಿಯಲ್ಲಿ ಭಾಗವಹಿಸದೇ ದೂರ ಉಳಿದರು.

ರಾಜ್ಯಪಾಲರಿಗೆ ‘ಕೈ’ ದೂರು
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರ ನಡವಳಿಕೆ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ‘ಬುಧವಾರ ಬೆಳಿಗ್ಗೆ 10.45 ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ದೂರು ನೀಡಲಾಗುವುದು. ರಾಜ್ಯಪಾಲರು ಸಂವಿಧಾನದ ರಕ್ಷಕರು. ಸದನದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಅವರ ಗಮನಕ್ಕೆ ತರಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

**

ಸಭಾಧ್ಯಕ್ಷರು ಪಕ್ಷಪಾತದ ತೀರ್ಮಾನ ತೆಗೆದುಕೊಂಡಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ವಿರೋಧಿ, ಹಿಟ್ಲರ್‌ ಆಡಳಿತ ನಡೆದಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

**

ಸದನವನ್ನು ದಾರಿ ತಪ್ಪಿಸಲು ಕಾಂಗ್ರೆಸ್‌ ಮತ್ತು ಬಿಜೆಪಿಯವರು ಸೇರಿ ನಾಟಕವಾಡುತ್ತಿದ್ದಾರೆ. ಇವರು ಯಾವ ಸಂವಿಧಾನವನ್ನು ಉಳಿಸಲು ಹೊರಟಿದ್ದಾರೆ.
-ಎಚ್‌.ಡಿ.ರೇವಣ್ಣ, ಶಾಸಕ, ಜೆಡಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT