ಮಂಗಳವಾರ, ಮಾರ್ಚ್ 2, 2021
31 °C
ಮೈತ್ರಿ–ಬಿಜೆಪಿ ವಾಕ್ಸಮರ

ನಕಲಿ ಆಡಿಯೊವನ್ನು ಸತ್ಯವೆಂದು ಬಿಂಬಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಪರೇಷನ್‌ ಕಮಲ’ದ ಆಡಿಯೊ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ಚರ್ಚೆ ಮೈತ್ರಿ ಪಕ್ಷಗಳು ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಭಾರಿ ವಾಕ್ಸಮರ ಸೃಷ್ಟಿಸಿತು.

‘ಆಡಿಯೊ ನಕಲಿ ದಾಖಲೆ ಎಂದು ಗೊತ್ತಿದ್ದರೂ ಮೋಸ ಮಾಡುವ ಉದ್ದೇಶದಿಂದ ಸತ್ಯವೆಂದು ಬಿಂಬಿಸಿರುವ ಮುಖ್ಯಮಂತ್ರಿಯೇ ಈ ಪ್ರಕರಣದಲ್ಲಿ ಮೊದಲ ಆರೋಪಿ’ ಎಂದು ಯಡಿಯೂರಪ್ಪ ಗುಡುಗಿದರು.

‘ಆಡಿಯೊದಲ್ಲಿರುವುದು ನನ್ನದೇ ಧ್ವನಿ. ಆದರೆ, ಸಂಭಾಷಣೆ ವೇಳೆ ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾದಾಗ ನಾನೂ ಅಲ್ಲಿದ್ದೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂಬ ತಮ್ಮ ಸವಾಲನ್ನು ಯಡಿಯೂರಪ್ಪ ಪುನರುಚ್ಚರಿಸಿದಾಗ ಇಡೀ ಸದನ ನಿಬ್ಬೆರಗಾಯಿತು.

ಆಡಿಯೊ ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸಬಾರದು ಎಂಬ ಬಿಜೆಪಿ ವಾದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ‌, ‘ಈ ಪ್ರಕರಣ ಭಾರತೀಯ ದಂಡ ಸಂಹಿತೆಯಡಿ ಬರುತ್ತದೆ. ಮುಖ್ಯಮಂತ್ರಿ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಇಲ್ಲೇ ಬಿಟ್ಟುಬಿಡಿ ಅಂದರೂ ನಾನು ಬಿಡಲ್ಲ. ಸಭಾಧ್ಯಕ್ಷರ ಬಗ್ಗೆಯೇ ಗಂಭೀರವಾದ ಆರೋಪ ಬಂದಿರುವುದರಿಂದ ಸಾರ್ವಜನಿಕರಲ್ಲಿ ಸಂದೇಹ ಬರುವ ಸಾಧ್ಯತೆ ಇದೆ. ನಾವೇ ರಚಿಸಿದ ಕಾನೂನು, ವ್ಯವಸ್ಥೆಯ ಮೇಲೆ ನಮಗೇ ಅಪನಂಬಿಕೆ ಇದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ಇನ್ನೂ ನಂಬಿಕೆಯಿಲ್ಲ. ಇದಕ್ಕೆಲ್ಲ ಕಾರಣ ಏನು ಎನ್ನುವುದು ಈಗ ಗೊತ್ತಾಗಿದೆ. ಧ್ಚನಿ ಸುರುಳಿ ನೋಡಿದರೆ ಭ್ರಷ್ಟಾಚಾರ ಕಾಯ್ದೆಯಡಿ ಬರುತ್ತದೆ’ ಎಂದರು.

‘ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಲು ಬರುವುದಿಲ್ಲ. ಕೊಡುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ’ ಎಂದು ಬಿಜೆಪಿಯ ಮಾಧುಸ್ವಾಮಿ ಪ್ರತಿಪಾದಿಸಿದಾಗ ಸದನದಲ್ಲಿ ಗದ್ದಲ ಉಂಟಾಯಿತು.

‘ಇಂಥ ಕೆಲಸಕ್ಕೆ ಕೈ ಹಾಕಬೇಡ ಎಂದು ಶರಣ್ ಗೌಡಗೆ ಮುಖ್ಯಮಂತ್ರಿ ಸಲಹೆ ನೀಡಬಹುದಿತ್ತು’ ಎಂದು ಯಡಿಯೂರಪ್ಪ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಹೋ ಎಂದು ಕೂಗಿದರು. ಆಕ್ರೋಶಗೊಂಡ ಯಡಿಯೂರಪ್ಪ, ‘ನನ್ನ ಅಭಿಪ್ರಾಯವನ್ನೂ ನೀವು ಕೇಳಿ. ಆಗದಿದ್ದರೆ ಸುಮ್ಮನಿರಿ’ ಎಂದು ಯಡಿಯೂರಪ್ಪ ಗದರಿಸಿದರು.‌

‘ಇಡೀ ಪ್ರಕರಣದ ಹಿಂದೆ ರಾಜಕೀಯ ಕುತಂತ್ರ ಇದೆ. ಸಭಾಧ್ಯಕ್ಷ ಹೆಸರು ಪ್ರಸ್ತಾವ ಆಗಿದೆ ಎಂದು ಗೊತ್ತಾ ದಾಗ ಈ ಬಗ್ಗೆ ಅವರ ಜೊತೆ ಮುಖ್ಯಮಂತ್ರಿ ಗೌಪ್ಯವಾಗಿ ಚರ್ಚಿಸಬೇಕಿತ್ತು. ನಿಮ್ಮ ಉದ್ದೇಶದಲ್ಲಿ ದುರುದ್ದೇಶವೂ ಇತ್ತು. ನೀವು ಪ್ರಾಮಾಣಿಕರಾಗಿದ್ದರೆ ಆಡಿಯೊವನ್ನು ತಿರುಚದೆ ಬಿಡುಗಡೆ ಮಾಡುತ್ತಿದ್ದಿರಿ’ ಎಂದು ಕುಮಾರಸ್ವಾಮಿಯನ್ನು ಯಡಿಯೂರಪ್ಪ ಚುಚ್ಚಿದರು.

ಸಭಾಧ್ಯಕ್ಷರ ಬಗ್ಗೆ ನಾನು ಮಾತನಾಡಿದ್ದೇನೆ ಎಂದಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಮಾತಿಗೆ ನಾನು ಈಗಲೂ ಬದ್ಧ. ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಈ ಆರೋಪ ಮಾಡಿದ್ದಾರೆ’ ಎಂದೂ ಯಡಿಯೂರಪ್ಪ ಹೇಳಿದರು.‘ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಬೇಸತ್ತಿದ್ದಾರೆ 20ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಹೇಳಿದ್ದರು. ಅವರ ಅತೃಪ್ತಿಗೆ ಯಡಿಯೂರಪ್ಪ ಕಾರಣ ಅಲ್ಲ. ಅವರನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಕರ್ತವ್ಯ. ಸುಭಾಷ್ ಗುತ್ತೇದಾರ್‌ಗೆ ಅಮಿಷ ಒಡ್ಡಿದ್ದು ಸುಳ್ಳೇ. ನಮ್ಮ‌ ನಾಲ್ವರು ಶಾಸಕರನ್ನ ಸೆಳೆಯಲು ಪ್ರಯತ್ನಿಸಿದ್ದು ಸುಳ್ಳೇ. ಒಬ್ಬ ವಿಧಾನಪರಿಷತ್‌ ಸದಸ್ಯ ಮಾಡಲು ₹ 25 ಕೋಟಿ ಕೇಳಿದ್ದು ಸುಳ್ಳೇ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುತ್ತದೆಯೇ’ ಎಂದೂ ಪ್ರಶ್ನಿಸಿದರು.

‘ಈಗಲೂ ಕಾಲ ಮಿಂಚಿಲ್ಲ ಆಡಳಿತ ಪಕ್ಷ, ವಿರೋಧ ಪಕ್ಷ ಇಬ್ಬರನ್ನು ಕರೆದು ಚರ್ಚೆ ನಡೆಸಿ. ಸದನ ಸಮಿತಿ ರಚನೆ ಮಾಡಿ’ ಎಂದು ಸಭಾಧ್ಯಕ್ಷರಿಗೆ ಯಡಿಯೂರಪ್ಪ ಸಲಹೆ ನೀಡಿದರು.

‘ಈ ವಿಷಯ ಉದ್ಭವಿಸಿದಾಗಲೇ ಆಡಳಿತ ಮತ್ತು ವಿರೋಧ ಪಕ್ಷದವರನ್ನು ಮಾತನಾಡಿಸಿದ್ದರೆ ಸದನದಲ್ಲಿ ಎರಡು ದಿನ ಸಮಯ ವ್ಯರ್ಥವಾಗುತ್ತಿರಲಿಲ್ಲ’ ಎಂದೂ ಹೇಳಿದರು.

‘ನನ್ನ ಸ್ಥಿತಿ ರೇಪ್‌ ಆದಂತಾಗಿದೆ’!

ಆಡಿಯೋ ಪ್ರಕರಣದ ಕುರಿತು ವಿಧಾಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಚರ್ಚೆಯ ವೇಳೆ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್, ‘ನನ್ನ ಸ್ಥಿತಿ ರೇಪ್‌ಗೆ ಒಳಗಾದವರಂತಾಗಿದೆ’ ಎಂದಾಗ ನಗು ಉಕ್ಕಿತು.

ಆಡಳಿತ ಮತ್ತು ಬಿಜೆಪಿ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ ಸಭಾಧ್ಯಕ್ಷರು ಈ ಚಟಾಕಿ ಹಾರಿಸಿದರು. ‘ರೇಪ್ ಒಂದೇ ಸಲ ಆಗಿ ಹೋಗಿರುತ್ತದೆ. ಆದರೆ ವಿಚಾರಣೆ ವೇಳೆ ಯಾರು ಮಾಡಿದರು, ಎಲ್ಲಿ ಮಾಡಿದರು, ಹೇಗೆ ಮಾಡಿದರು, ಎಷ್ಟೊತ್ತು ಮಾಡಿದರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಪದೇ ಪದೇ ಕೇಳಿ ಕಿರಿಕಿರಿ ಉಂಟು ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ನನ್ನ ಸ್ಥಿತಿಯೂ ಹಾಗೆಯೇ ಆಗಿದೆ’ ಎಂದು ರಮೇಶ್ ಕುಮಾರ್ ಹೇಳಿದಾಗ ನಗೆಯ ಅಲೆ ಎದ್ದಿತು.

ಈ ಆಡಿಯೋ ಬಗ್ಗೆ ಸಭಾಧ್ಯಕ್ಷರ ಗಮನಕ್ಕೆ ಮೊದಲು ತರಬೇಕಿತ್ತು. ಆದರೆ ಮಾಧ್ಯಮಗಳ ಮುಂದೇ ಸಭಾಧ್ಯಕ್ಷರ ಬಗ್ಗೆ ಮಾತನಾಡಿ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಬಿಜೆಪಿ ಸದ್ಯರು ಮುಖ್ಯಮಂತ್ರಿ ವಿರುದ್ಧ ಆರೋಪಿಸಿದರು.

ಏನಾಗುವುದೋ ಗೊತ್ತಿಲ್ಲ

‘ಬಿಜೆಪಿ ಸದಸ್ಯರು ಮಾತನಾಡುವುದು ನೋಡಿದರೆ ನನ್ನ ಮೇಲೆ ನನಗೇ ಅನುಮಾನ ಬರುತ್ತಿದೆ. ನಾನೇ ಏನೋ ಅಪರಾಧ ಮಾಡಿದ್ದೇನೇನೋ ಎನಿಸುತ್ತಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

‘ಅಧಿಕಾರಿಗಳು ಸರ್ಕಾರಕ್ಕೆ ನಿಷ್ಠರಾಗಿರುತ್ತಾರೆಯೇ ಹೊರತು ಮುಖ್ಯಮಂತ್ರಿಗಲ್ಲ. ಯಡಿಯೂರಪ್ಪ ಅವರು ನೇಮಕ ಮಾಡಿದ್ದ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನೇ ನಾನೂ ಉಳಿಸಿಕೊಂಡಿದ್ದೇನೆ. ಯಡಿಯೂರಪ್ಪ ಅವಧಿಯಲ್ಲಿದ್ದವರೇ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಅಧಿಕಾರಿಗಳ ಮೇಲೆ ವಿಶ್ವಾಸ ಇರಬೇಕು. ಆ ವಿಶ್ವಾಸದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಸಂಶಯ ದೃಷ್ಟಿಯಿಂದ ನೀಡುವುದು ಸರಿಯಲ್ಲ’ ಎಂದೂ ಅವರು ಪ್ರತಿಪಾದಿಸಿದರು.

‘ಆಡಿಯೊದಲ್ಲಿ ಮುಖ್ಯ ಅಂಶಗಳನ್ನು ಮಾತ್ರ ಬಹಿರಂಗಪಡಿಸಿದ್ದೇನೆ. ಉಳಿದ ಅಂಶಗಳನ್ನು ಮುಂದಿಟ್ಟರೆ ಏನಾಗುತ್ತದೋ ಗೊತ್ತಿಲ್ಲ’ ಎಂದೂ ಹೇಳಿದರು.

ಸದನಕ್ಕೆ ಶಿವನಗೌಡ ನಾಯ್ಕ ಗೈರು 

‘ಆಪರೇಷನ್‌ ಕಮಲ’ ಆಡಿಯೊದಲ್ಲಿದ್ದಾರೆ ಎನ್ನಲಾದ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯ್ಕ ಮಂಗಳವಾರ ವಿಧಾನಸಭಾ ಕಲಾಪಕ್ಕೆ ಗೈರುಹಾಜರಾದರು.

ಆಡಿಯೊದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದ್ದರು. ಸುಮಾರು ಒಂದು ಗಂಟೆಯಷ್ಟೇ ಶಿವನಗೌಡ ಸದನದೊಳಗೆ ಇದ್ದರು. ಬಳಿಕ ಸಂಜೆ ವರೆಗೆ ಮೊಗಸಾಲೆಯಲ್ಲೇ ಕುಳಿತಿದ್ದರು. ಮಂಗಳವಾರ ಅವರು ದೇವಸ್ಥಾನಗಳ ಭೇಟಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು