ಜೆಡಿಎಸ್‌ ಜತೆ ಎಂದಿಗೂ ಕೈ ಜೋಡಿಸಲ್ಲ: ಯಡಿಯೂರಪ್ಪ

ಗುರುವಾರ , ಏಪ್ರಿಲ್ 25, 2019
32 °C
ಟೋಪಿ ಹಾಕಿ ಅಧಿಕಾರಕ್ಕೆ ಬರುವುದರಲ್ಲಿ ಕುಮಾರಸ್ವಾಮಿ ತಜ್ಞ * ನಮಗೆ ಕೈಕೊಟ್ಟ ಅಪ್ಪ–ಮಕ್ಕಳು ನಂಬಿಕೆದ್ರೋಹಿಗಳು

ಜೆಡಿಎಸ್‌ ಜತೆ ಎಂದಿಗೂ ಕೈ ಜೋಡಿಸಲ್ಲ: ಯಡಿಯೂರಪ್ಪ

Published:
Updated:
Prajavani

* ಲೋಕಸಭಾ ಚುನಾವಣೆಯಲ್ಲಿ ಪಕ್ಷವು 22 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಉಳಿದ ಸ್ಥಾನಗಳ ಕಥೆ ಏನು?

ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ಕನಿಷ್ಠ 22 ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ಸಂಕಲ್ಪ. ಎರಡಂಕಿ ದಾಟಲು ಬಿಜೆಪಿಯನ್ನು ಬಿಡುವುದಿಲ್ಲ ಎಂದು ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಬಿಜೆಪಿಯ ಸಂಕಲ್ಪ ಹಾಗೂ ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದದಿಂದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟವೇ ಎರಡಂಕಿ ದಾಟಲ್ಲ.

* ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಡೆಸಿದ ಸಮೀಕ್ಷೆಯಂತೆ ರಾಜ್ಯದಲ್ಲಿ ಪಕ್ಷ 12 ಸ್ಥಾನಗಳನ್ನು ಗೆಲ್ಲಲು ಸಾಧ್ಯ. ಇನ್ನೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ 10 ಪ್ಲಸ್‌ ಆಗಬೇಕಂತೆ. ಹೌದಾ?

ಪ್ರಧಾನಿ ನರೇಂದ್ರ ಮೋದಿ ಬೇರೆ ಅಲ್ಲ, ಪಕ್ಷ ಬೇರೆ ಅಲ್ಲ. ಮೋದಿ ಅವರ ನಿರಂತರ ಪರಿಶ್ರಮಕ್ಕೆ ರಾಜ್ಯದ ಜನರು ಮನ್ನಣೆ ನೀಡಲಿದ್ದಾರೆ. 22 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ, ಗಡಿಗಳ ರಕ್ಷಣೆ ಮಾಡುತ್ತೇವೆ, ವಿದೇಶದಲ್ಲಿ ಭಾರತಕ್ಕೆ ಗೌರವ ಬರುವ ರೀತಿಯಲ್ಲಿ ಮಾಡುತ್ತೇವೆ ಎಂಬ ಭರವಸೆಯನ್ನು ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗ ನೀಡಿದ್ದೆವು. ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಮೋದಿ ಅವರ ಜನಪ್ರಿಯತೆಯಿಂದ  ಈ ಚುನಾವಣೆಯಲ್ಲಿ ದೇಶದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದೇವೆ. ರಾಜ್ಯದ ಉದ್ದಕ್ಕೂ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಸಿದ್ದು, ಉದ್ದಗಲಕ್ಕೂ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಯುವಕರು ಹಾಗೂ ‌ಶ್ರೀಸಾಮಾನ್ಯರು ವಿಶೇಷ ಬೆಂಬಲ ನೀಡಿದ್ದಾರೆ.

* ರಾಜ್ಯದಲ್ಲಿ ಮೋದಿ ಅವರಿಗಿಂತ ಯಡಿಯೂರಪ್ಪನವರೇ ಜನಪ್ರಿಯರು ಎಂಬ ಮಾತಿದೆ. ನಿಜವಾ?

ಈ ಮಾತನ್ನು ಒಪ್ಪುವುದಿಲ್ಲ. ಮೋದಿ ಅವರಿಗೆ ಯಾರೂ ಸಾಟಿ ಇಲ್ಲ. ಅವರ ಸಾಧನೆಯಿಂದ ಶೇ 70ರಿಂದ 80ರಷ್ಟು ಯಶಸ್ಸು ಸಿಗಲಿದೆ. ಅದಕ್ಕೆ ನಮ್ಮದು ಸ್ವಲ್ಪ ಸೇರಲಿದೆ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಗೆಲ್ಲಿಸುತ್ತೇವೆ.

* ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪೈಕಿ ನಿಮ್ಮ ನೇರ ಶತ್ರು ಯಾರು?

ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳೇ ಪರಸ್ಪರ ಶತ್ರುಗಳು. ಅವರ ಕಚ್ಚಾಟ, ಬಡಿದಾಟ ಮಿತಿಮೀರಿದೆ. ಅವರಿಗೆ ಪರಸ್ಪರ ವಿಶ್ವಾಸ ಇಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಅವರ ನಾಯಕರು ಒಟ್ಟಾಗಿ ಹೋಗಬಹುದು. ಆದರೆ, ಕಾರ್ಯಕರ್ತರು ಜತೆಗೂಡಿ ಹೋಗಲು ಸಾಧ್ಯವೇ ಇಲ್ಲ. ಅದನ್ನು ದಿನವೂ ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ನೋಡಬಹುದು.

* ಜೆಡಿಎಸ್‌ ಬಗ್ಗೆ ಬಿಜೆಪಿ ಮೃದುಧೋರಣೆ ಹೊಂದಿದೆಯಂತೆ. ಹೌದಾ?

ಯಾವುದೇ ರೀತಿಯೊಳಗೂ ಮೃದು ಧೋರಣೆ ಹೊಂದಿಲ್ಲ. ನಾವು ನಿಷ್ಠುರವಾಗಿಯೇ ಇದ್ದೇವೆ. ಹಾಗೆ ನೋಡಲು ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 104 ಸ್ಥಾನಗಳನ್ನು ಗೆದ್ದಿರುವ ನಾವು ವಿರೋಧ ಪಕ್ಷದಲ್ಲಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು 37 ಶಾಸಕರು ಇರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ನವರು ಬಿಟ್ಟುಕೊಟ್ಟಿದ್ದಾರೆ.

* ದಕ್ಷಿಣ ಭಾರತದಲ್ಲಿ ಸ್ವತಂತ್ರವಾಗಿ ಪ್ರಾದೇಶಿಕ ನಾಯಕರು ಉದಯಿಸಿ ಬಂದಿದ್ದಾರೆ. ನಿಮಗೆ ಪ್ರಾದೇಶಿಕ ನಾಯಕನಾಗಿ ಬೆಳೆಯುವ ಅವಕಾಶ ಇತ್ತು. ಅದನ್ನು ನೀವೇ ಕಳೆದುಕೊಂಡಿದ್ದೀರಾ?

ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿ ಅಕ್ಷಮ್ಯ ಅಪರಾಧ ಮಾಡಿದೆ. ಬಳಿಕ ನನ್ನ ತಪ್ಪಿನ ಅರಿವಾಯಿತು. ಅದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ. ರಾಜ್ಯದ ಮತದಾರರ ಚಿಂತನೆ ಹಾಗೂ ಆಲೋಚನೆಯೇ ವಿಭಿನ್ನ. ಹಾಗಾಗಿ, ಇಲ್ಲಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕಡಿಮೆ.

* ನಿಮ್ಮ ಪಕ್ಷ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಆದರೆ, ದೇವದುರ್ಗದಲ್ಲಿನ ಆಪರೇಷನ್‌ ಆಡಿಯೊದಲ್ಲಿ ₹10 ಕೋಟಿ ಕೊಡುವ ಪ್ರಸ್ತಾಪ ಇದೆ. ಇದನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ?

ಇದರಲ್ಲಿ ನೂರಕ್ಕೆ ನೂರು ಸತ್ಯಾಂಶ ಇಲ್ಲ. ರಾತ್ರಿ 12.30ಕ್ಕೆ ಯಾರೋ ಬಂದು ಎಬ್ಬಿಸಿ ಏನೋ ಮಾತನಾಡಿದರು. ಅದು ಬಿಟ್ಟರೆ, ನಾನು ಆ ರೀತಿಯ ಯಾವುದೇ ಮಾತು ಆಡಿಲ್ಲ.

* ಆಡಿಯೊದಲ್ಲಿರುವುದು ನನ್ನದೇ ಧ್ವನಿ ಎಂದು ಹೇಳಿಕೊಂಡಿದ್ದೀರಲ್ಲ?

ಹೌದು. ಅದರಲ್ಲಿ ಇರುವುದು ಕೆಲವು ಭಾಗ ನನ್ನ ಧ್ವನಿ. ಪೂರ್ಣ ನನ್ನ ಧ್ವನಿ ಅಲ್ಲ. ಆಡಿಯೊ ಮಿಕ್ಸಿಂಗ್ ಮಾಡುವ ಕೆಲಸದಲ್ಲಿ  ಕುಮಾರಸ್ವಾಮಿ ಎಕ್ಸ್‌ಪರ್ಟ್‌. ಬೆಂಗಳೂರಿನಲ್ಲಿ ಕುಳಿತು ರಾತ್ರಿ 12.30ಕ್ಕೆ ಅವನನ್ನು ಕಳುಹಿಸಿಕೊಟ್ಟು ಅಲ್ಲಿಂದಲೇ ರೆಕಾರ್ಡ್‌ ಮಾಡಿಸಿ ಗೊಂದಲ ಉಂಟು ಮಾಡಿದರು. 

* ಲೋಕಸಭೆ ಚುನಾವಣೆ ನಂತರ ಜೆಡಿಎಸ್‌ ಜತೆಗೆ ನೀವು ಮತ್ತೆ ಕೈಜೋಡಿಸುತ್ತೀರಿ ಎಂಬ ಮಾತಿದೆ. ನಿಜವೇ?

ಈ ಹಿಂದೆ 20 ತಿಂಗಳ ಅಧಿಕಾರ ಸೂತ್ರ ಹಂಚಿಕೆಯಡಿ ನಾವು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ, ಒಂದು ವಾರದಲ್ಲೇ ಕೈಕೊಟ್ಟ ಅಪ್ಪ–ಮಕ್ಕಳು ಅವರು. ಅವರ ಜತೆಗೆ ಕೈಜೋಡಿಸುವುದು ಅಸಾಧ್ಯ. ಅವರು ನಂಬಿಕೆದ್ರೋಹಿಗಳು.

* ನಿಮ್ಮ ಹಿಂದಿನ ಸಖ ಕುಮಾರಸ್ವಾಮಿ ಅವರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೇನು?

ಜನರಿಗೆ ಟೋಪಿ ಹಾಕಿ ಮೋಸ ಮಾಡಿ ಅಧಿಕಾರಕ್ಕೆ ಬರುವುದರಲ್ಲಿ ಅವರು ತಜ್ಞರಿದ್ದಾರೆ. ಅದು ಅವರ ಸಾಮರ್ಥ್ಯ. ದೌರ್ಬಲ್ಯದ ಬಗ್ಗೆ ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ, ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡಲ್ಲ.

* ಚುನಾವಣೆಯಲ್ಲಿ ಎಷ್ಟು ಮಹಿಳೆಯರಿಗೆ ಸೀಟು ನೀಡುತ್ತೀರಾ?

ಲೋಕಸಭಾ ಚುನಾವಣೆಯಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್‌ ನೀಡಲಿದ್ದೇವೆ.  

* ಅನಂತಕುಮಾರ ಹೆಗಡೆ ಅವರ ಪ್ರಚೋದನಾಕಾರಿ ಹೇಳಿಕೆ ಕುರಿತು ಏನು ಹೇಳುತ್ತೀರಿ? ಅವರನ್ನು ನಿಯಂತ್ರಣ ಮಾಡುತ್ತೀರಾ?

ಸುಧಾರಿಸಿಕೊಳ್ಳಬೇಕು ಎಂದು ಅವರಿಗೆ ಸಲಹೆ ಕೊಟ್ಟಿದ್ದೇವೆ. ಅವರೂ ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ. ಇತಿ ಮಿತಿ ಅರಿತು ನಡೆದುಕೊಳ್ಳುವಂತೆ ನಾಯಕರು ಎಲ್ಲರಿಗೂ ಹೇಳಿದ್ದಾರೆ. ಅದು ನನಗೂ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ.

* ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನ ಗೆದ್ದ 24 ಗಂಟೆಗಳಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬರುತ್ತದೆ ಎಂದಿದ್ದೀರಿ. ಇದು ಹೇಗೆ ಸಾಧ್ಯ ಸಾರ್‌? ತಂತ್ರದಿಂದಲೋ, ಕುತಂತ್ರದಿಂದಲೋ?

ಮೈತ್ರಿ ಸರ್ಕಾರವನ್ನು ಉರುಳಿಸಲು ನಾವೇನೂ ಪ್ರಯತ್ನಪಟ್ಟಿಲ್ಲ. ಮೈತ್ರಿ ಪಕ್ಷಗಳ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿ ಅವರ ನಾಯಕತ್ವವನ್ನು ಒಪ್ಪಲು ಸಿದ್ಧರಿಲ್ಲ. ಹೀಗಾಗಿ ಸರ್ಕಾರ ಬಿದ್ದರೆ ಅವರ ದೌರ್ಬಲ್ಯದಿಂದಲೇ ಹೊರತು ನಮ್ಮಿಂದಲ್ಲ. 22 ಸ್ಥಾನ ಗೆದ್ದರೆ ಅವರಲ್ಲಿಯೇ ಕಚ್ಚಾಟ–ಬಡಿದಾಟ ಮುಗಿಲು ಮುಟ್ಟುತ್ತದೆ. ಆಗ ಏನಾಗಬಹುದು ಎಂಬುದನ್ನು ಯೋಚಿಸಿ ನೋಡಿ. ಪ್ರತಿ ಸಂದರ್ಭದಲ್ಲಿ ಚುನಾವಣೆಯೊಂದೇ ಪರಿಹಾರ
ವಲ್ಲ. ಮುಂದೆ ಏನಾಗುವುದೋ ಕಾದುನೋಡಿ.

* ಸರ್ಕಾರ ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಅಂತ ಮುಹೂರ್ತ ನಿಗದಿ ಮಾಡುತ್ತಲೇ ಇದ್ದೀರಿ. ಸರ್ಕಾರ ಉರುಳಿಸುವ ಹೊಸ ಮುಹೂರ್ತ ಯಾವುದು?

ನಾವು ಯಾವುದೇ ಮುಹೂರ್ತವನ್ನೂ ಫಿಕ್ಸ್‌ ಮಾಡಲ್ಲ. ಅವರ ಕಚ್ಚಾಟ–ಬಡಿದಾಟದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅದರ ಪರಿಣಾಮದಿಂದ ಅಧಿಕಾರ ಕಳೆದುಕೊಳ್ಳುತ್ತಾರೆ.

* ಹಿಂದೆ ಯಾವುದೋ ಕಾರಣಕ್ಕೆ ಆಪರೇಷನ್‌ ಕಮಲ ಎಂಬ ಕೆಟ್ಟ ಪರಂಪರೆ ರಾಜ್ಯದಲ್ಲಿ ಶುರುವಾಯಿತು. ಅದು ಇಲ್ಲಿಗೇ ನಿಲ್ಲುತ್ತದೋ, ಮುಂದುವರಿಯುತ್ತೋ? ಅದನ್ನು ನಡೆಸಿದ್ದು ತಪ್ಪು ಎನಿಸಿದ್ದಿದೆಯೇ?

ಡೆಮಾಕ್ರಸಿರೀ ಇದು. ಹಿಂದೆ ನಾವು 110 ಸೀಟು ಗೆದ್ದಾಗ 114 ಮಾಡಿಕೊಳ್ಳುವ ಅನಿವಾರ್ಯತೆ ಇತ್ತು. ಅದಕ್ಕಾಗಿ ಪ್ರಯತ್ನಪಟ್ಟಿದ್ದು ತಪ್ಪೇ? ಈಗಲೂ ನಾವು 110–112 ಗೆದ್ದಿದ್ದರೆ 2–3 ಜನ ಓಡಿ ಬರುತ್ತಿದ್ದರು. ಸಂಖ್ಯಾಬಲ ಸಾಧಿಸದೆ ಇನ್ನೇನು ಮೂರು ತಿಂಗಳಿಗೊಮ್ಮೆ ಚುನಾವಣೆಗೆ ಹೋಗಲು ಆಗುತ್ತದೆಯೇ?

* ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದ್ದರೂ ಮಹದಾಯಿ ವಿವಾದ ಇತ್ಯರ್ಥ ಆಗಲಿಲ್ಲವಲ್ಲ?

ಮಹದಾಯಿ ಯೋಜನೆಗೆ ಕೇಂದ್ರದಿಂದ ಈಗಾಗಲೇ ಅನುಮತಿ ಸಿಕ್ಕಿದೆ. ಮಿಕ್ಕ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಮಾಡಿದ್ದೇನು? ನೀರಾವರಿ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತು. ಎಲ್ಲ ಅನುಮತಿ ಇದ್ದರೂ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲಿಲ್ಲ.  

* ಹಿಂದುತ್ವ ಎನ್ನುವುದು ಈಗ ಬಿಜೆಪಿಯ ವಿಷಯವಾಗಿ ಮಾತ್ರ ಇಲ್ಲ. ರಾಹುಲ್‌ ಗಾಂಧಿ ಅವರೂ ಮೃದು ಹಿಂದುತ್ವದ ಪ್ರತಿಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನಾನೂ ಹಿಂದೂ ಎನ್ನುತ್ತಿದ್ದಾರಲ್ಲ?

ಬಹಳ ಸಂತೋಷ. ಅವರಿಗೆ ಈಗಲಾದರೂ ಪಶ್ಚಾತ್ತಾಪ ಆಗಿದೆಯಲ್ಲ, ಅಷ್ಟೇ ಸಾಕು. ಹಿಂದೆ ಈ ವಿಷಯ
ವಾಗಿ ಅವರೇ ಬೆಂಕಿ ಹಚ್ಚಿ, ಬೇಳೆ ಬೇಯಿಸಿಕೊಂಡಿದ್ದರು. ಅವರಿಗೀಗ ತಾವು ತಪ್ಪು ಮಾಡಿದ್ದೆವೆಂದು ಅರ್ಥವಾಗಿದೆ.

* ಮಂದಿರದಲ್ಲಿ ರಾಮನಿಗೆ ಪೂಜೆ ಸಲ್ಲಿಕೆಯಾಗುವುದು ಯಾವಾಗ?

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದೆ. ತೀರ್ಪಿಗಾಗಿ ಕಾಯುತ್ತಿದ್ದೇವೆ.

* ಅಯೋಧ್ಯೆ ವಿಷಯದಲ್ಲಾದರೆ ಸುಪ್ರೀಂ ಕೋರ್ಟ್‌ ತೀರ್ಪು ಒಪ್ಪುವುದಾಗಿ ಹೇಳುತ್ತೀರಿ. ಶಬರಿಮಲೆ ವಿವಾದದಲ್ಲಿ ಕೋರ್ಟ್‌ ತೀರ್ಪಿನ ವಿರುದ್ಧದ ನಿಲುವನ್ನೇ ತಾಳುತ್ತೀರಿ. ಏಕೆ ಈ ದ್ವಂದ್ವ?

ನೂರಕ್ಕೆ 90 ಭಾಗದಷ್ಟು ಮಹಿಳೆಯರು ತೀರ್ಪಿನ ವಿರುದ್ಧ ನಿಲುವು ತಾಳಿದ್ದರು. ನೂರಾರು ವರ್ಷದ ಪದ್ಧತಿ ತಪ್ಪಿಸಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದೇವೆ.

* ರಾಜ್ಯದ 28 ಕ್ಷೇತ್ರಗಳಲ್ಲಿ ನೀವು ಕಳೆದುಕೊಳ್ಳುವ ಆ ಆರು ಸ್ಥಾನಗಳು ಯಾವುವು?

ಅದನ್ನು ಹೇಳಲಾರೆ. ಆ ಮಾಹಿತಿ ಹಂಚಿಕೊಂಡರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

‘ಕುಟುಂಬ ಸದಸ್ಯರು ಸ್ವಶಕ್ತಿಯಿಂದ ಬೆಳೆದರೆ ತಪ್ಪಲ್ಲ’

* ಕುಟುಂಬ ರಾಜಕಾರಣ ಹೊಸ ಸ್ವರೂಪ ಪಡೆದಿದೆ. ನಿಮ್ಮ ಅಭಿಪ್ರಾಯ ಏನು?

ಜನರ ಅಪೇಕ್ಷೆಯಂತೆ ಒಂದೇ ಕುಟುಂಬದ ಒಬ್ಬಿಬ್ಬರು ರಾಜಕಾರಣದಲ್ಲಿ ಇರುವುದು ಸಹಜ. ಅದನ್ನು ಎಲ್ಲ ಕಡೆ ನೋಡುತ್ತಿದ್ದೇವೆ. ಆದರೆ, ದೇವೇಗೌಡರು ಕುಟುಂಬ, ಅವರು ಮಾಡುತ್ತಿರುವ ರೀತಿ, ಇಬ್ಬರು ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಲು ಮುಂದಾಗಿರುವುದು ಜನರಲ್ಲಿ ಅಸಹ್ಯ ಮೂಡಿಸಿದೆ. ಕುಟುಂಬ ರಾಜಕಾರಣಕ್ಕೆ ಇತಿಮಿತಿ ಬೇಕು. ಅವರು ಇತಿಮಿತಿ ದಾಟುತ್ತಿದ್ದಾರೆ. ಅದರ ಬಗ್ಗೆ ಜನರಿಗೆ ಬೇಸರ ಮೂಡಿಸಿದೆ. ಯಾರದ್ದೇ ಮನೆಯಲ್ಲಿ ಸ್ವಂತ ಶಕ್ತಿಯಲ್ಲಿ ಒಂದಿಬ್ಬರು ರಾಜಕಾರಣದಲ್ಲಿ ಇದ್ದರೆ, ಸ್ವಂತ ಶಕ್ತಿಯಿಂದ ಬೆಳೆದಿದ್ದರೆ ತಪ್ಪಲ್ಲ. ಎಲ್ಲ ಅಧಿಕಾರ ನಮಗೆ ಬೇಕು ಎಂಬ ದೇವೇಗೌಡರ ಕುಟುಂಬದ ನಿಲುವನ್ನು ಜನರು ಒಪ್ಪುವುದಿಲ್ಲ.

* ಈ ಸಲ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ಟಿಕೆಟ್ ನೀಡುತ್ತೀರಾ?

ನಮ್ಮ ಪಕ್ಷದಿಂದ ಈಗಿನ ಸ್ಥಿತಿಯಲ್ಲಿ ಮುಸ್ಲಿಮರು ಅಥವಾ ಕ್ರೈಸ್ತರು ಚುನಾವಣೆಗೆ ನಿಂತು ಗೆಲ್ಲಲು ಅವಕಾಶ ಕಡಿಮೆ. ಈ ಸಮುದಾಯಗಳನ್ನು ನಮ್ಮ ಜತೆಗೆ ಕರೆದುಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಿಸಲು ಇನ್ನಷ್ಟು ಸಮಯ ಬೇಕಾಗಬಹುದು. ಈ ಹಿಂದೆ ಬೆಂಗಳೂರಿನಲ್ಲಿ ಸಾಂಗ್ಲಿಯಾನಾ ಅವರಿಗೆ ಟಿಕೆಟ್‌ ನೀಡಿ ಗೆಲ್ಲಿಸಿದ್ದೆವು. ನನ್ನ ಆಡಳಿತದ ಅವಧಿಯಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತರನ್ನು ಒಂದೇ ತಾಯಿಯ ಮಕ್ಕಳಂತೆ ನೋಡಿದ್ದೇವೆ. ಎಲ್ಲ ವರ್ಗಕ್ಕೂ ಸಮಾನ ಆದ್ಯತೆ ನೀಡಿದ್ದೇನೆ. ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಚ್ಚು ಲಾಭ ಸಿಕ್ಕಿದ್ದು ಮುಸ್ಲಿಂ ಮಹಿಳೆಯರಿಗೆ. ನನ್ನ ಅಧಿಕಾರದ ಅವಧಿಯಲ್ಲಿ ಮುಸ್ಲಿಮರನ್ನು ಗೆಲ್ಲಿಸಲು ಸಾಧ್ಯವಾಗದಿದ್ದರೂ ಸಮುದಾಯದ ನಾಯಕರೊಬ್ಬರನ್ನು ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಿದ್ದೆ.

* ಸುಮಲತಾ ಅವರನ್ನು ಬೆಂಬಲಿಸುತ್ತೀರೋ? ಅಭ್ಯರ್ಥಿಯನ್ನು ನಿಲ್ಲಿಸುತ್ತೀರೋ?

ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಆದರೆ, ಅಪ್ಪ–ಮಕ್ಕಳು ಎಲ್ಲವೂ ನಮಗೇ ಬೇಕು ಎಂದು ಬಡಿದಾಟ ನಡೆಸಿದ್ದಾರೆ. ಅವರಿಗೆ ಪಾಠ ಕಲಿಸಬೇಕು ಎನ್ನುವ ಅಭಿಪ್ರಾಯ ಜನರಲ್ಲಿದೆ. ಸನ್ನಿವೇಶ ನೋಡಿಕೊಂಡು ಅಭ್ಯರ್ಥಿಯನ್ನು ಹಿಂಪಡೆದು ಸುಮಲತಾ ಅವರಿಗೆ ಬೆಂಬಲಿಸುವ ಕುರಿತು ತೀರ್ಮಾನಿಸುತ್ತೇವೆ. ರಾಮನಗರದ ಅನುಭವ ಇದೆ. ಎಚ್ಚರಿಕೆಯಿಂದ ಮುನ್ನಡೆಯುತ್ತೇವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !