ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉತ್ತರ: ಮಧ್ಯಮ ವರ್ಗದ ಮತದಾರರ ಸೆಳೆಯಲು ಕಸರತ್ತು

ಮೈತ್ರಿ ಅಭ್ಯರ್ಥಿ– ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ * ಜಾತಿ, ಧರ್ಮದ ಸಮೀಕರಣದಲ್ಲಿ ಗೆಲುವಿನ ಕನಸು
Last Updated 24 ಏಪ್ರಿಲ್ 2019, 12:28 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿನಿ ಭಾರತ’ದಂತಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಮಧ್ಯೆ ತುರುಸಿನ ಪೈಪೋಟಿ. ಜಾತಿ, ಧರ್ಮ, ನಮ್ಮವರು, ಹೊರಗಿನವರು ಇತ್ಯಾದಿಗಳ ಸಮೀಕರಣದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಕನಸು ಕಾಣುತ್ತಿದ್ದಾರೆ.

ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ವಿ.ಸದಾನಂದಗೌಡ ಎರಡನೇ ಬಾರಿಗೆ ಇಲ್ಲಿಂದ ಆಯ್ಕೆ ಬಯಸಿದ್ದಾರೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣಬೈರೇಗೌಡ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕೃಷ್ಣಬೈರೇಗೌಡರ ಸ್ಪರ್ಧೆ ಡಿವಿಎಸ್‌ ಹಾದಿಯನ್ನು ಕಠಿಣಗೊಳಿಸಿದೆ; ಸಾಕಷ್ಟು ಬೆವರು ಹರಿಸಬೇಕಾಗಿದೆ.

ಕಾಂಗ್ರೆಸ್‌– ಜೆಡಿಎಸ್‌ ಸೀಟು ಹಂಚಿಕೆ ಒಪ್ಪಂದದ ಅನ್ವಯ ಈ ಕ್ಷೇತ್ರವನ್ನು ಕಾಂಗ್ರೆಸ್‌ ಜೆಡಿಎಸ್‌ಗೆ ಬಿಟ್ಟು ಕೊಟ್ಟಿತ್ತು. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೇ ಎಂಬ ಕಾರಣಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆರಂಭದಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸಾಹ ತೋರಿದ್ದರು. ಆದರೆ, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಂಗ್ರೆಸ್‌ ಶಾಸಕರ ‘ರೆಡ್‌ ಸಿಗ್ನಲ್‌’ನಿಂದ ಎಚ್ಚೆತ್ತ ದೇವೇಗೌಡರು ನೆರೆಯ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಜೆಡಿಎಸ್‌ಗೆ ಪರ್ಯಾಯ ಸಮರ್ಥ ಅಭ್ಯರ್ಥಿ ಸಿಗಲಿಲ್ಲ. ಹೀಗಾಗಿ ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ ಹರಿವಾಣಕ್ಕೆ ಹಾಕಿ ಕೈತೊಳೆದುಕೊಂಡಿತು.

ಸಚಿವ ಕೃಷ್ಣಬೈರೇಗೌಡ ಅವರಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರೇ ಶ್ರೀರಕ್ಷೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್‌, ಎರಡರಲ್ಲಿ ಜೆಡಿಎಸ್‌ ಮತ್ತು ಒಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಎಂಟರಲ್ಲಿ ಏಳು ಶಾಸಕರು ದೋಸ್ತಿ ಶಾಸಕರೇ ಇದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಬಗ್ಗೆ ಕ್ಷೇತ್ರದಲ್ಲಿ ಮತದಾರರ ಆಕ್ಷೇಪಗಳೇನೂ ಇಲ್ಲ. ಆದರೆ, ಸಂಸದರು ಕೈಗೆ ಸಿಗುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ನಗರಪಾಲಿಕೆ ಸದಸ್ಯರು ಮತ್ತು ಶಾಸಕರು ಮಾಡಬೇಕಾದ ಕೆಲಸಗಳಿಗೆ ಸಂಸದರನ್ನು ದೂರಿದರೆ ಪ್ರಯೋಜನವೇನು? ಇದು ಎದುರಾಳಿಗಳ ಹುನ್ನಾರವೇ ಹೊರತು ಬೇರೆನೂ ಅಲ್ಲ ಎಂಬುದು ಬಿಜೆಪಿಯ ದೂರು.

ಕ್ಷೇತ್ರ ಮರುವಿಂಗಡಣೆಯ ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಜಾತಿ– ಸಮುದಾಯಗಳ ಸಮೀಕರಣವೂ ಬದಲಾಗಿದೆ. ಒಕ್ಕಲಿಗ ಸಮುದಾಯ ಪ್ರಾಬಲ್ಯವಿರುವ ಈ ಕ್ಷೇತ್ರವನ್ನು ಕಳೆದ ಎರಡು ಚುನಾವಣೆಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಬಿ.ಚಂದ್ರೇಗೌಡ ಮತ್ತು ಡಿ.ವಿ.ಸದಾನಂದಗೌಡ ಅವರು ಗೆದ್ದುಕೊಂಡರು. ಈ ಬಾರಿ ಇಬ್ಬರು ಅಭ್ಯರ್ಥಿಗಳು ಒಂದೇ ಸಮುದಾಯಕ್ಕೆ ಸೇರಿರುವುದರಿಂದ ಒಕ್ಕಲಿಗರು ಯಾರ ಕಡೆ ಒಲಿಯುತ್ತಾರೆ ಎಂಬುದು ಕುತೂಹಲಕಾರಿ.

ಒಕ್ಕಲಿಗ ಸಮುದಾಯದಲ್ಲಿ ಈ ಕ್ಷೇತ್ರದಲ್ಲಿ ಗಂಗಟಕಾರರ ಸಂಖ್ಯೆಯೇ ಹೆಚ್ಚು. ಕೃಷ್ಣಬೈರೇಗೌಡ ಅವರು ಮರಸು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಸದಾನಂದಗೌಡ ಅರೆಭಾಷೆ ಗೌಡ ಸಮುದಾಯದವರು. ವಿಶೇಷವೆಂದರೆ, ಈ ಕ್ಷೇತ್ರದಲ್ಲಿರುವ ಒಕ್ಕಲಿಗರು ಸುತ್ತುಮುತ್ತಲಿನ ಜಿಲ್ಲೆಗಳಿಂದ ವಲಸೆ ಬಂದು ನೆಲೆ ನಿಂತಿದ್ದಾರೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಕುಣಿಗಲ್‌, ತುಮಕೂರು ಭಾಗದ ಒಕ್ಕಲಿಗರು ಯಶವಂತಪುರ, ಮಹಾಲಕ್ಷ್ಮಿ ಬಡಾವಣೆ ಮತ್ತು ದಾಸರಹಳ್ಳಿ ಭಾಗದಲ್ಲಿ ಹೆಚ್ಚು. ಬ್ಯಾಟರಾಯನಪುರ, ಕೆ.ಆರ್‌.ಪುರ ಭಾಗದಲ್ಲಿ ಮರಸು ಒಕ್ಕಲಿಗರ ಸಂಖ್ಯೆ ಅಧಿಕ. ಈ ಬಾರಿ ಯಾವ ಪಕ್ಷದ ಅಭ್ಯರ್ಥಿಗೆ ಮತದಾರರು ಒಲಿಯಲಿದ್ದಾರೆ ಎಂಬುದು ಸದ್ಯದ ಕುತೂಹಲ.

***

ಐದು ವರ್ಷಗಳ ಸಾಧನೆಯೇ ನಮ್ಮ ಶ್ರೀರಕ್ಷೆ . ದೇಶ ಇನ್ನಷ್ಟು ಪ್ರಗತಿಯ ಹಾದಿಯಲ್ಲಿ ಸಾಗಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು.

-ಡಿ.ವಿ.ಸದಾನಂದಗೌಡ, ಬಿಜೆಪಿ ಅಭ್ಯರ್ಥಿ

ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್‌ ಕಾರ್ಯಕರ್ತರು ಗೆಲುವಿಗೆ ಶ್ರಮಿಸುತ್ತಿದ್ದಾರೆ.

-ಕೃಷ್ಣ ಬೈರೇಗೌಡ, ಮೈತ್ರಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT