ಶನಿವಾರ, ಫೆಬ್ರವರಿ 22, 2020
19 °C
ಆರ್ಥಿಕ–ಬೌದ್ಧಿಕ ಗುತ್ತಿಗೆದಾರರಲ್ಲಿ ಅಂತರರಾಷ್ಟ್ರೀಯ ಅಮಲು; ಲಿರಿಕ್ಸ್ ಜಾಗದಲ್ಲಿ ಕಿರಿಕ್ಸ್‌

‘ಸಿನಿಮಾ ನಿರ್ಮಾಣದಲ್ಲಿ ವಿವೇಕ–ಎಚ್ಚರವಿರಲಿ: ಪ್ರೊ.ಬರಗೂರು ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಿನಿಮಾ ಜನಪ್ರಿಯವಾದುದು. ಪ್ರಭಾವಶಾಲಿಯಾದುದು. ಪ್ರತಿ ಸಿನಿಮಾ ನಿರ್ಮಾಣದಲ್ಲೂ ವಿವೇಕ, ಎಚ್ಚರವಿರಬೇಕು. ಮನುಷ್ಯ ವಿರೋಧಿ ಅಲ್ಲದ ಸಿನಿಮಾ ಮಾತ್ರ ರೂಪುಗೊಳ್ಳಬೇಕು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಿವಿಮಾತು ಹೇಳಿದರು.

ನಗರದ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ನಡೆದ ‘ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ ವರ್ತಮಾನದ ಸವಾಲುಗಳು' ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಹಿತಿ, ಚಲನಚಿತ್ರ ನಿರ್ದೇಶಕನಿಂದ ಸಮಾಜ ಜವಾಬ್ದಾರಿಯನ್ನು ಬಯಸುತ್ತಿದೆ’ ಎಂದು ತಿಳಿಸಿದರು.

‘ಜಾಗತೀಕರಣ, ಜಾಹೀರಾತೀಕರಣ ಸೇರಿ ಸಿನಿಮಾದಲ್ಲಿ ಲಾಭಕೋರತನ, ಸ್ವಾರ್ಥಿತನವೇ ಹೆಚ್ಚಿದೆ. ಮಾನವೀಯ ಮೌಲ್ಯ ನಾಶಗೊಳ್ಳುತ್ತಿವೆ. ಲಿರಿಕ್ಸ್‌ ಜಾಗದಲ್ಲಿ ಕಿರಿಕ್ಸ್‌ ರಾರಾಜಿಸುತ್ತಿದೆ. ನೈತಿಕತೆಗೂ ಒಂದು ಗೆರೆಯಿದೆ. ಬೆಲೆಯಿದೆ. ಅದನ್ನು ದಾಟುವ ಯತ್ನವನ್ನು ಯಾರೂ ಮಾಡಬಾರದು’ ಎಂಬ ಸಲಹೆ ನೀಡಿದರು.

‘ಆರ್ಥಿಕ ಹಾಗೂ ಕೆಲ ಬೌದ್ಧಿಕ ಗುತ್ತಿಗೆದಾರರಿಂದ ಕನ್ನಡ ಚಿತ್ರರಂಗದಲ್ಲಿ ಅಂತರರಾಷ್ಟ್ರೀಯ ಅರಿವಿನ ಬದಲಿಗೆ ಅಮಲು ಆವರಿಸಿದೆ. ಇದರ ಪರಿಣಾಮ ಸಿನಿಮಾ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸಬೇಕಿದೆ. ಸಿನಿಮಾವೊಂದಕ್ಕೆ ಆರ್ಥಿಕ, ಬೌದ್ಧಿಕ ಜ್ಞಾನ ಬೇಕಿದೆ. ಆದರೆ ಆರ್ಥಿಕ, ಬೌದ್ಧಿಕ ಗುತ್ತಿಗೆದಾರರು ಬೇಡ. ಇವರಿಗೆ ನಾವಷ್ಟೇ ಶ್ರೇಷ್ಠ ಎಂಬ ಆತ್ಮರತಿಯ ರೋಗವಿದೆ’ ಎಂದು ಚಾಟಿ ಬೀಸಿದರು.

‘ಒಂದೆಡೆ ಹಿಂಸೆ ವೈಭವೀಕರಿಸುವ ಕೆಜಿಎಫ್ ಚಿತ್ರ ಯಶಸ್ವಿಯಾದರೆ, ಮತ್ತೊಂದೆಡೆ ಮನುಷ್ಯನ ಸಂವೇದನೆ ಹಿಡಿದಿಡುವ ರಾಜಕುಮಾರ ಚಿತ್ರವೂ ಯಶಸ್ವಿಯಾಗುತ್ತದೆ. ಈ ರೀತಿಯ ಬಿಕ್ಕಟ್ಟಿನಲ್ಲಿ ನಾವಿದ್ದೇವೆ. ಆರ್ಥಿಕ ಗುತ್ತಿಗೆದಾರರು ಮೌಲ್ಯಗಳು ನಾಶವಾದರೂ, ಹೂಡಿರುವ ಬಂಡವಾಳ ಮರಳಲೇಬೇಕು ಎನ್ನುತ್ತಾರೆ. ಎಂದೆಂದೂ ಹಿಂಸಾತ್ಮಕ, ಅಶ್ಲೀಲ ಚಿತ್ರಗಳ ನಿರ್ಮಾಣ ಬೇಕಿಲ್ಲ. ಸಂವೇದನೆ ಮತ್ತು ಸಂಪಾದನೆ ಎರಡೂ ಒಟ್ಟಿಗೆ ಬೆರೆತಾಗ ಮಾತ್ರ ಸಾಹಿತ್ಯ ಆಧಾರಿತ ಚಲನಚಿತ್ರಗಳ ನಿರ್ಮಾಣ ಸಾಧ್ಯ’ ಎಂದು ಬರಗೂರು ಅಭಿಪ್ರಾಯಪಟ್ಟರು.

‘ಸಿನಿಮಾ ತಂತ್ರಜ್ಞಾನ ಆಧಾರಿತವಾಗಿದೆ. ಆದರೆ ಸಾಹಿತ್ಯ ತಂತ್ರಜ್ಞಾನ ಆಧಾರಿತವಾದುದಲ್ಲ. ಕಾದಂಬರಿಯಲ್ಲಿರುವುದೆಲ್ಲವನ್ನು ಸಿನಿಮಾದಲ್ಲಿ ತರಲು ಸಾಧ್ಯವಿಲ್ಲ. ಆದರೆ ಮೂಲ ಆಶಯವನ್ನು ಸಮಕಾಲೀನಗೊಳಿಸುವುದರ ಜೊತೆಗೆ ಅರ್ಥಪೂರ್ಣವಾಗಿಸಬೇಕು. ಈ ಸಂದರ್ಭ ನಿರ್ದೇಶಕನ ಶಕ್ತಿ ಮತ್ತು ಒಳನೋಟಗಳು ಬಹಳ ಮುಖ್ಯ’ ಎಂದು ಸಲಹೆ ನೀಡಿದರು.

ಡಾ.ಎಂ.ಎಸ್.ಆಶಾದೇವಿ ಕನ್ನಡ ಚಿತ್ರರಂಗದಲ್ಲಿ ಸ್ತ್ರೀ ಸಂವೇದನೆ, ಪ್ರೊ.ಮೈಸೂರು ಕೃಷ್ಣಮೂರ್ತಿ ಸಂಗೀತದ ಸ್ವರೂಪ, ದೊಡ್ಡಹುಲ್ಲೂರು ರುಕ್ಕೋಜಿ ಭಾಷಾಭಿವ್ಯಕ್ತಿ ಮತ್ತು ಅಭಿರುಚಿ, ಡಾ.ಡಿ.ಸತೀಶ್‌ಚಂದ್ರ ಯುವ ಜನತೆ ಕುರಿತಂತೆ ವಿಷಯ ಮಂಡಿಸಿದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥೆ ಪ್ರೊ.ಜಿ.ಆರ್.ಸುಮಿತ್ರಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿನೋದಾ ಡಾ.ಎನ್‌.ಕೆ.ಪದ್ಮನಾಭ, ಪ್ರೊ.ರಂಗಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು