ಗುರುವಾರ , ಅಕ್ಟೋಬರ್ 17, 2019
22 °C

ಪ್ರಧಾನಿ ಮೋದಿ ಸೇರಿ ಕೇಂದ್ರ ನಾಯಕರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ವಾಗ್ದಾಳಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ್ದ ಪ್ರವಾಹಕ್ಕೆ ಮಿಡಿಯದ ಕೇಂದ್ರ ನಾಯಕರ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರದ ಪ್ರವಾಹಕ್ಕೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ನಾಯಕರ ವಿರುದ್ಧ ಕಿಡಿಕಾರಿರುವ ಯತ್ನಾಳ್, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೇಂದ್ರ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಗುರಿಯಾಗಿಸಲೆಂದೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಜನ ತಕ್ಕ ಪಾಠ ಕಲಿಸಲಿದ್ದಾರೆ’: ರಾಜ್ಯದಲ್ಲಿ ಈಗ ಚುನಾವಣೆ ಇಲ್ಲ ಎಂಬ ಭಾವನೆ ಸರಿಯಲ್ಲ. ರಾಜ್ಯದ ಜನ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಸದರು ಇಷ್ಟು ಸಂಖ್ಯೆಯಲ್ಲಿ ಬೇರೆಲ್ಲಿದ್ದಾರೆ? ಹೀಗೆಯೇ ಮುಂದುವರಿದರೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಎಂತೆಂಥವರನ್ನೋ ಜನ ಚುನಾವಣೆಯಲ್ಲಿ ಮನೆಗೆ ಕಳಿಸಿದ್ದಾರೆ. ಹೀಗಿರುವಾಗ ಇವರೆಲ್ಲ ಯಾವ ಲೆಕ್ಕ. ಇವರನ್ನು ಕೆಳಗಿಳಿಸೋದು ನಾವಲ್ಲ, ಜನ ಎಂದು ಯತ್ನಾಳ್ ಕಿಡಿಕಾರಿದರು.

‘ಜನರಿಗೆ ಹೇಗೆ ಮುಖ ತೋರಿಸಲಿ?’: ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು ನಾವು. ಜನರಿಗೆ ನಾವು ಉತ್ತರ ನೀಡಬೇಕು. ಇಡೀ ಉತ್ತರ ಕರ್ನಾಟಕದ ಜನ ಪರದಾಡುತ್ತಾ ಇದ್ದಾರೆ. ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡುತ್ತಾರೆ ಅಂದ್ರೆ ನಮ್ಮ ಜನ ಏನು ಮಾಡಿದ್ದಾರೆ? ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಕೇಳುತ್ತಿದ್ದಾರೆ. ಜನರಿಗೆ ನಾವೇನು ಉತ್ತರ ಕೊಡಬೇಕು ಎಂದು ಯತ್ನಾಳ್ ಪ್ರಶ್ನಿಸಿದರು.

ಕೇಂದ್ರಕ್ಕೆ ನಮ್ಮ ಒಂದು ನಿಯೋಗವನ್ನು ಕರೆದೊಯ್ಯಬೇಕು. ನಾವು ಮಾತನಾಡುತ್ತೇವೆ. ಹಿಂದೆ ನಾನೂ ಸಂಸದನಾಗಿದ್ದವನು. ನನಗೂ ಎಲ್ಲ ಅನುಭವ ಇದೆ. ನಮ್ಮ ಸಂಸದರು ಕೇಂದ್ರವನ್ನು ಪ್ರಶ್ನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವಿಜಯನಗರ ಜಿಲ್ಲೆ ರಚನೆ ವಿಚಾರಕ್ಕೆ ಸಂಬಂಧಿಸಿ ನಾಳೆ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಹೀಗಾಗಿ ಈಗಲೇ ಪ್ರತಿಕ್ರಿಯಿಸಿವುದು ಸರಿಯಲ್ಲ ಎಂದು ಅವರು ಹೇಳಿದರು.

ತೇಜಸ್ವಿ ಸೂರ್ಯ, ಈಶ್ವರಪ್ಪ ವಿರುದ್ಧವೂ ವಾಗ್ದಾಳಿ

ಸಂಸದ ತೇಜಸ್ವಿ ಸೂರ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು.

ಎಸಿ ರೂಮಿನಲ್ಲಿ‌ ಕೂತು ಪಕ್ಷ ಕಟ್ಟೋದಲ್ಲ. ಹಳ್ಳಿ ಹಳ್ಳಿ ಅಲೆದು ಪಕ್ಷ ಕಟ್ಟಿದೋರು ನಾವು. ಇಂಗ್ಲಿಷ್ ಬಂದ ಮಾತ್ರಕ್ಕೆ ಅಂತಾರಾಷ್ಟ್ರೀಯ ನಾಯಕರಾಗಲ್ಲ ಎಂದು ಅವರು ಹೇಳಿದರು.

‘ಈಗ ಯಡಿಯೂರಪ್ಪ ಅವರ ಬಗ್ಗೆಯೇ ಕೆಲವರು ಮಾತನಾಡುತ್ತಾರೆ. ಗೂಟದ ಕಾರು ಇಟ್ಟುಕೊಂಡು ಓಡಾಡುವರೇ ಹೀಗೆ ಮಾತಾಡಿದರೆ ಹೇಗೆ? ಹಾಗಿದ್ದರೆ ಸಚಿವ ಸ್ಥಾನದಲ್ಲಿ ಯಾಕೆ ಇರುತ್ತೀರಿ, ರಾಜೀನಾಮೆ ‌ಕೊಡಿ. ತುಂಬಾ ಜನ ಪಕ್ಷ ಕಟ್ಟಿದೋರು ಸರದಿಯಲ್ಲಿದ್ದಾರೆ’ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

Post Comments (+)