ಮಂಗಳವಾರ, ಏಪ್ರಿಲ್ 7, 2020
19 °C
ಹೊರವಲಯದಲ್ಲಿ ಹೊಸ ವಾರ್ಡ್, ಕೇಂದ್ರ ಪ್ರದೇಶದ ವಾರ್ಡ್‌ಗಳಿಗೆ ಕತ್ತರಿ

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಅಧಿಸೂಚನೆ ಪ್ರಕಟ: ಕೆಲ ವಾರ್ಡ್‌ಗಳ ಸ್ವರೂಪ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಸಂಬಂಧ 2011ರ ಜನಸಂಖ್ಯೆ ಆಧಾರದಲ್ಲಿ ರೂಪಿಸಿರುವ ಪಟ್ಟಿಯ ಕರಡು ಅಧಿಸೂಚನೆಯನ್ನು ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು ಅಷ್ಟೇ (198) ಉಳಿಸಿಕೊಳ್ಳಲಾಗಿದೆ. ಆದರೆ, ನಗರದ ಕೇಂದ್ರ ಪ್ರದೇಶದ ಅನೇಕ ವಾರ್ಡ್‌ಗಳನ್ನು ಕೈಬಿಟ್ಟು, ನಗರಕ್ಕೆ ಹೊಸತಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ 27 ಹೊಸ ವಾರ್ಡ್‌ಗಳನ್ನು ರೂಪಿಸಲಾಗಿದೆ.

ಪಾಲಿಕೆಯ ಈಗಿನ ಅವಧಿಯಲ್ಲಿ ಮೇಯರ್‌ಗಳಾಗಿ ಕಾರ್ಯನಿರ್ವಹಿ ಸಿದ್ದ ಇಬ್ಬರು ಮಹಿಳೆಯರು ಪ್ರತಿನಿಧಿಸು ತ್ತಿದ್ದ ವಾರ್ಡ್‌ಗಳನ್ನು (ಗಂಗಾಂಬಿಕೆ ಅವರ ಜಯನಗರ ವಾರ್ಡ್‌ ಹಾಗೂ ಜಿ.ಪದ್ಮಾವತಿ ಅವರ ಪ್ರಕಾಶ್‌ ನಗರ ವಾರ್ಡ್‌) ಹೊಸ ಪಟ್ಟಿಯಲ್ಲಿ ಕೈಬಿಡಲಾಗಿದೆ. ಕೈಬಿಡಲಾದ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಪ್ರತಿನಿಧಿಸುತ್ತಿರುವ ತಲಾ 13 ವಾರ್ಡ್‌ಗಳು ಹಾಗೂ ಜೆಡಿಎಸ್‌ ಪ್ರತಿ
ನಿಧಿಸುತ್ತಿರುವ ಒಂದು ವಾರ್ಡ್‌ ಸೇರಿದೆ.

ಈ ಹಿಂದಿನ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಮರುವಿಂಗಡಣಾ ಪಟ್ಟಿಯ ಕರಡಿನಲ್ಲಿದ್ದ ಅಂಶಗಳನ್ನು ಗಾಳಿಗೆ ತೂರಿ ಹೊಸ ಪಟ್ಟಿ ಸಿದ್ಧಪಡಿಸಲಾಗಿದೆ. ಹಿಂದಿನ ಪಟ್ಟಿಯ ಪ್ರಕಾರ 13 ವಾರ್ಡ್‌ಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಅವುಗಳಲ್ಲಿ ಗಂಗಾಂಬಿಕೆ ಅವರು ಪ್ರತಿನಿಧಿಸುವ ಜಯನಗರ (153 ) ಹಾಗೂ ಕಾಂಗ್ರೆಸ್‌ನ ಆರ್‌. ಸಂಪತ್‌ರಾಜ್‌ ಪ್ರತಿನಿಧಿಸುವ ದೇವರ ಜೀವನಹಳ್ಳಿ ವಾರ್ಡ್‌ಗಳು ಸೇರಿದ್ದವು. ಇವುಗಳ ಗಡಿಗಳನ್ನೂ ಬದಲಾಯಿಸಲಾಗಿದೆ.

‘ನಮ್ಮ ಪಕ್ಷದ ಪ್ರಾಬಲ್ಯ ಹೆಚ್ಚು ಇರುವ ವಾರ್ಡ್‌ಗಳನ್ನುಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಈ ಮಾರ್ಪಾಡುಗಳು ನಿರೀಕ್ಷಿತ. ಕಾಂಗ್ರೆಸ್‌ ಬಲಿಷ್ಠವಾಗಿರುವ ವಾರ್ಡ್‌ ಗಳನ್ನೇ ಕೈಬಿಟ್ಟಿದ್ದಾರೆ. ಆಡಳಿತ ಪಕ್ಷದ ಶಾಸಕರು ತಮಗೆ ಅನುಕೂಲವಾಗುವಂತೆ ಮರುವಿಂಗಡಣೆ ಮಾಡಿದ್ದಾರೆ. ಇದರಿಂದ ನಾವು ವಿಚಲಿತವಾಗುವು ದಿಲ್ಲ. ನಮ್ಮ ಆಡಳಿತಾವಧಿಯಲ್ಲಿ ನಡೆದಿರುವ ಉತ್ತಮ ಕೆಲಸಗಳ ಬಗ್ಗೆ ಜನರಿಗೆ ತಿಳಿದಿದೆ. ನಮ್ಮ ಕಾಲದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಮುಂದಿನ ಚುನಾ ವಣೆ ಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಅಸ್ತಿತ್ವದಲ್ಲಿದ್ದಾಗ ಒಟ್ಟು 100 ವಾರ್ಡ್‌ಗಳಿದ್ದವು. 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿಗಳು ಹಾಗೂ 110 ಹಳ್ಳಿಗಳನ್ನು ಸೇರ್ಪಡೆಗೊಳಿಸಿ 2007ರಲ್ಲಿ ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯನ್ನು (ಬಿಬಿಎಂಪಿ) ರಚಿಸಿದಾಗ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಯಿತು. ಆ ಬಳಿಕ, 2015ರ ಬಿಬಿಎಂಪಿ ಚುನಾವಣೆಗೆ ಮುನ್ನ 2011ರ ಜನಸಂಖ್ಯೆ ಆಧರಿಸಿ ವಾರ್ಡ್‌ಗಳ ಮರುವಿಂಗಡಣೆ ಆಗ ಬೇಕಿತ್ತು. ಆದರೆ, ಪಾಲಿಕೆ ಪೂರ್ವ ಸಿದ್ಧತೆ ಮಾಡಿಕೊಂಡಿರದ ಕಾರಣ ಮರುವಿಂಗಡಣೆ ನಡೆದಿರಲಿಲ್ಲ. 

2015ರ ಆ. 25ರಂದು ಬಿಬಿ ಎಂಪಿ ಚುನಾವಣೆಯ ಮತದಾನ ನಡೆದಿತ್ತು. ಅದೇ ವರ್ಷ ಸೆ. 11ರಂದು ಪಾಲಿಕೆ ರಚನೆ ಆಗಿತ್ತು. ಈಗಿನ ಚುನಾ ಯಿತ ಸದಸ್ಯರ ಅವಧಿ 2020ರ ಸೆ. 10ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡು ಹೊಸ ಮೀಸಲಾತಿ ಪ್ರಕಾರ ಚುನಾವಣೆ ನಡೆಯಬೇಕಿದೆ.

ಜನಸಂಖ್ಯೆ (ಸರಾಸರಿ 42,645) ಆಧಾರದಲ್ಲಿ ಮರುವಿಂಗಡಣೆ ನಡೆಸ ಲಾಗಿದೆ. ಹಾಗಾಗಿ ಇದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದ ವಾರ್ಡ್‌ಗಳ ವಿಸ್ತೀರ್ಣ ಬದಲಾಗಲಿದೆ. ಕೆಲವು ವಿಧಾನ‌ಸಭಾ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಲಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಹೆಚ್ಚಾಗಲಿದೆ.

ಪ್ರಮುಖ ರಸ್ತೆಗಳು ಹಾಗೂ ರಾಜಕಾಲುವೆಗಳನ್ನು ಗಡಿಯಾಗಿ ಹೊಂದುವ ರೀತಿಯಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮಾಡಬೇಕು. ಒಂದು ವಾರ್ಡ್‌ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಕೆ ಆಗದಂತೆ ನೋಡಿ ಕೊಳ್ಳಬೇಕು. ಜನಸಂಖ್ಯೆ ಸಮ ಪ್ರಮಾಣದಲ್ಲಿ ಹಂಚಿಕೆ ಆಗಬೇಕು.

‘ಈ ಅಂಶಗಳನ್ನು ಪಾಲಿಸದೇ ಇದ್ದರೆ ಕಾನೂನು ಹೋರಾಟ ನಡೆಸು ತ್ತೇವೆ. ಈ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ವಾಜಿದ್‌ ಹೇಳಿದರು.

ಹೈಕೋರ್ಟ್‌ ಚಾಟಿಗೆ ಎಚ್ಚೆತ್ತ ಸರ್ಕಾರ
‘ಬಿಬಿಎಂಪಿಯ 198 ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶೀಘ್ರವೇ ಮರುವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು.

ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ
ಪ್ರತಿಯೊಂದು ವಾರ್ಡ್‌ನ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ದಿಕ್ಕುಗಳ ಗಡಿಗಳ ಬಗ್ಗೆ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಕರಡು ಪಟ್ಟಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ಹಾಗೂ ಸಲಹೆ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ವಿಳಾಸ: ಜಿಲ್ಲಾಧಿಕಾರಿ ಕಚೇರಿ, ಕಂದಾಯಭವನ, ಕೆ.ಜಿ.ರಸ್ತೆ, ಬೆಂಗಳೂರು ನಗರ ಜಿಲ್ಲೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು