ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ಗೆ 4–5 ತಿಂಗಳು ಬೇಕು: ಡಾ.ಭಾತೆ

ಜೀವನ್‌ ರೇಖಾ ಆಸ್ಪತ್ರೆ ನಿರ್ದೇಶಕ ಡಾ.ಭಾತೆ
Last Updated 5 ಜುಲೈ 2020, 16:01 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್‌–19 ಸೋಂಕಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಕ್ಯಾಂಡಿಟೇಟ್‌ನ (ಸಂಭಾವ್ಯ ಲಸಿಕೆ) ಕ್ಲಿನಿಕಲ್‌ ಟ್ರಯಲ್‌ಗೆ 4ರಿಂದ 5 ತಿಂಗಳು ಬೇಕಾಗಬಹುದು’ ಎಂದು ಈ ಪ್ರಕ್ರಿಯೆಗೆ ಆಯ್ಕೆಯಾಗಿರುವ ಇಲ್ಲಿನ ಜೀವನ್‌ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ತಿಳಿಸಿದರು.

‘ನಮ್ಮ ಆಸ್ಪತ್ರೆಯು ಆಯ್ಕೆಯಾಗಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಈಚೆಗೆ ಅಧಿಕೃತವಾಗಿ ಪತ್ರ ಕಳುಹಿಸಿದೆ. ಹೈದರಾಬಾದ್ ಮೂಲದ ಭಾರತ್‌ ಬಯೊಟೆಕ್‌ ಸಹಯೋಗದಲ್ಲಿ ಐಸಿಎಂಆರ್‌ ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿಪಡಿಸಿದ್ದು, ಒಟ್ಟು 2 ಹಂತಗಳಲ್ಲಿ ನಡೆಯುವ ಕ್ಲಿನಿಕಲ್‌ ಟ್ರಯಲ್‌ಗೆ 150ರಿಂದ 200 ಮಂದಿ ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಯಾವುದೇ ವ್ಯಾಕ್ಸಿನ್‌ನ ಕ್ಲಿನಿಕಲ್‌ ಟ್ರಯಲ್‌ ಅನ್ನು ಗಡುವಿನೊಳಗೆ ಪೂರ್ಣಗೊಳಿಸಲು ಆಗುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ಅವರು ಮಾಹಿತಿ ನೀಡಿದರು.

‘ಮುಂದಿನ ವಾರ ನಮಗೆ ಲಸಿಕೆ ಪೂರೈಕೆ ಆಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಬಂದ ನಂತರ ಪ್ರಕ್ರಿಯೆ ಆರಂಭಿಸಲಾಗುವುದು. ಈ ವಿಷಯದಲ್ಲಿ ಆತುರ ಮಾಡಲಾಗುವುದಿಲ್ಲ. ವೈದ್ಯಕೀಯ ಶಿಷ್ಟಾಚಾರ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಮೊದಲು ಆರೋಗ್ಯವಂತ ವ್ಯಕ್ತಿಗಳನ್ನು ಗುರುತಿಸಬೇಕು. ಅವರನ್ನು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಬಳಿಕ ಅವರ ಮೇಲೆ ವ್ಯಾಕ್ಸಿನ್‌ ಬಳಸಿ ಕ್ಲಿನಿಕಲ್‌ ಟ್ರಯಲ್ ಮಾಡಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಯಗಳನ್ನು ಆದಷ್ಟು ತ್ವರಿತವಾಗಿ ನಡೆಸಲು ಪ್ರಯತ್ನಿಸುತ್ತೇವೆ. ಡೆಡ್‌ಲೈನ್‌ ಆಧರಿಸಿ ಮಾಡುವ ಕೆಲಸವಿದಲ್ಲ. ಐಸಿಎಂಆರ್‌ನಿಂದ ನಮಗೆ ಯಾವುದೇ ಗಡುವು ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಾಲಿಸಬೇಕಾದ ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲು ಐಸಿಎಂಆರ್‌ ಅಧಿಕಾರಿಗಳೊಂದಿಗೆ ಮತ್ತೊಂದಷ್ಟು ಚರ್ಚೆ ನಡೆಸಬೇಕಾಗಿದೆ’ ಎಂದರು.

‘ಪರೀಕ್ಷೆಗೆ ಆಯ್ಕೆಯಾಗುವ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಇರುವುದಿಲ್ಲ. ಆದರೆ, ಅವರಿಗೆ ಲಸಿಕೆ ನೀಡಿದ ನಂತರ ನಿರಂತರವಾಗಿ ನಿಗಾ ವಹಿಸಲಾಗುವುದು. ಲಸಿಕೆ ನೀಡಿದಂದೇ ರಕ್ತದ ಮಾದರಿ ಸಂಗ್ರಹಿಸಲಾಗುವುದು. ಕೋವಿಡ್–19 ಸೋಂಕಿತರನ್ನು ಈ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT