ಗುರುವಾರ , ಆಗಸ್ಟ್ 6, 2020
28 °C

ಬೆಳಗಾವಿ–ಮುಂಬೈ ವಿಮಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸ್ಪೈಸ್‌ಜೆಟ್ ಕಂಪನಿಯು ಗುರುವಾರ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಮುಂಬೈಗೆ ವಿಮಾನ ಹಾರಾಟ ಆರಂಭಿಸಿತು.

‘ಉಡಾನ್‌–3’ ಯೋಜನೆಯಡಿ ಬೆಂಗಳೂರು–ಬೆಳಗಾವಿ–ಮುಂಬೈ–ಬೆಳಗಾವಿ–ಬೆಂಗಳೂರು ಮಾರ್ಗವಾಗಿ ವಿಮಾನ ಹಾರಾಡಲಿದೆ. ಯೋಜನೆಯಡಿ ಇಲ್ಲಿ ಆರಂಭಿಸುತ್ತಿರುವ 4ನೇ ವಿಮಾನ ಇದಾಗಿದೆ. ಅಹಮದಾಬಾದ್‌, ಪುಣೆ ಹಾಗೂ ಹೈದರಾಬಾದ್ ವಿಮಾನಗಳು ಕಳೆದ ತಿಂಗಳು ಕಾರ್ಯಾಚರಣೆ ಆರಂಭಿಸಿವೆ. ದೇಶದ ವಿವಿಧ 13 ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ.

ವಿಮಾನನಿಲ್ದಾಣದಲ್ಲಿ ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ಹಾಗೂ ಕೆಲವು ಪ್ರಯಾಣಿಕರು ಭಾಗವಹಿಸಿದ್ದರು.

ಈ ವಿಮಾನ ನಿತ್ಯವೂ ಕಾರ್ಯಾಚರಣೆ ನಡೆಸಲಿದೆ. ಮಧ್ಯಾಹ್ನ 12.05ಕ್ಕೆ ಬೆಂಗಳೂರಿನಿಂದ ಬಂದು 12.25ಕ್ಕೆ ಮುಂಬೈಗೆ ಹೊರಡುತ್ತದೆ. ಸಂಜೆ 4.05ಕ್ಕೆ ಮುಂಬೈನಿಂದ ಬಂದು 4.25ಕ್ಕೆ ಬೆಂಗಳೂರಿಗೆ ತೆರಳುತ್ತದೆ. 90 ಸೀಟುಗಳ ಸಾಮರ್ಥ್ಯದ ಈ ವಿಮಾನದಲ್ಲಿ ಮೊದಲ ದಿನವಾದ ಗುರುವಾರ ಬೆಂಗಳೂರಿನಿಂದ 55 ಪ್ರಯಾಣಿಕರು ಬಂದಿಳಿದರು. ಮುಂಬೈಗೆ 50 ಮಂದಿ ತೆರಳಿದರು.

ಸ್ಪೈಸ್‌ ಜೆಟ್‌ ಕಂಪನಿಯಿಂದ ಬೆಂಗಳೂರು ವಿಮಾನವನ್ನೂ ಉದ್ಘಾಟಿಸಲಾಯಿತು. ಇದು ಬುಧವಾರ ಹೊರತುಪಡಿಸಿ ವಾರದ ಎಲ್ಲ ದಿನವೂ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಸಂಜೆ 6.05ಕ್ಕೆ ಬರುವ ಈ ವಿಮಾನ 6.25ಕ್ಕೆ ನಿರ್ಗಮಿಸುತ್ತದೆ.

ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ (ದಕ್ಷಿಣ) ಎನ್. ಕಿಶೋರ್‌, ನಿಲ್ದಾಣ ವ್ಯವಸ್ಥಾಪಕ ನಿಯಾಜ್‌ ಶಿರಹಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು