ಭಾನುವಾರ, ಏಪ್ರಿಲ್ 18, 2021
31 °C

ಮಿಶ್ರಣದ ರುಚಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |
ಚಲವೊಂದಚಲವೊಂದು ಸಮವದಸಮವಿದು ||
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ |
ಮಿಲಿತತೆಯಿನೇ ರುಚಿಯೋ – ಮಂಕುತಿಮ್ಮ || 90 ||

ಪದ-ಅರ್ಥ: ಜಲಧಿ=ಸಮುದ್ರ, ವೀಕ್ಷಿಸಿಕ್ಕೆಲಗಳಲಿ=ವೀಕ್ಷಿಸಿ (ನೋಡಿ)+ ಇಕ್ಕೆಲಗಳಲಿ(ಎರಡೂ ಬದಿಗಳಲ್ಲಿ), ಚಲವೊಂದಚಲವೊಂದು=ಚಲ(ಚಲಿಸುವ)ಒಂದು+ಅಚಲ(ಅಲುಗಾಡದ)ವೊಂದು, ಸಮವದಸಮವಿದು=ಸಮವದು+ಅಸಮವಿದು, ಕಲೆತಿರ್ಪುವಂತು=ಕಲೆತಿರ್ಪುವು(ಬೆರೆಕೆಯಾಗಿರುವವು)+ಅಂತು, ಮೇಯಾಮೇಯಗಳು=ಮೇಯ(ಅಳೆಯಬಹುದಾದ)+ಅಮೇಯ(ಅಳೆಯಲಾರದ)ಗಳು, ಮಿಲಿತತೆ=ಸೇರುವಿಕೆ

ವಾಚ್ಯಾರ್ಥ: ಸಮುದ್ರತೀರದಲ್ಲಿ ನಿಂತು ಎರಡೂ ಕಡೆಗೆ ನೋಡಿದಾಗ ನಮಗೆ ಕಾಣುವುದು ಚಲಿಸುವುದೊಂದು, ಅಚಲವೊಂದು. ಅಲ್ಲಿ ಸಮವಿದೆ, ಇಲ್ಲಿ ಅಸಮವಿದೆ. ಅಂತೆಯೇ ಜಗತ್ತಿನಲ್ಲಿ ಅಳೆಯಬಹುದಾದ ಮತ್ತು ಅಳೆಯಲಾರದವುಗಳು ಸೇರಿಕೊಂಡಿವೆ. ಈ ಸೇರುವಿಕೆಯೇ ಪ್ರಪಂಚದ ರುಚಿ.

ವಿವರಣೆ: ಸಮುದ್ರ ತೀರದಲ್ಲೋ, ನದಿ ತೀರದಲ್ಲೋ ನಿಂತು ಆಚೀಚೆ ನೋಡಿ. ನೀರಿನಲ್ಲಿ ತೆರೆಗಳು ಹರಿಯುತ್ತಲೇ ಇವೆ. ಒಂದರೆಕ್ಷಣ ಕೂಡ ಅವು ಒಂದೆಡೆಗೆ ನಿಲ್ಲಲಾರವು. ಅವುಗಳ ಗುಣವೇ ಚಲನೆ. ಇನ್ನೊಂದು ಬದಿಯ ಭೂಪ್ರದೇಶವನ್ನು ಗಮನಿಸಿ. ಅಲ್ಲಿ ಎಲ್ಲವೂ ಸ್ಥಿರ, ಅಚಲ. ಚಲ, ಅಚಲಗಳೆರಡೂ ಬದಿಬದಿಯಲ್ಲೇ ಇವೆ. ಅದರಂತೆಯೇ ಸಮವಾದವು, ಅಸಮವಾದವುಗಳೂ ಬೆರೆತಿವೆ. ಇದರೊಂದಿಗೆ ಅಳೆಯಬಹುದಾದ ಮತ್ತು ಅಳತೆಗೆ ಸಿಕ್ಕದವುಗಳ ಮಿಶ್ರಣವೂ ಇದೆ. ನಮ್ಮ ಗಮನಕ್ಕೆ ಬರುವ ಎಲ್ಲ ವಸ್ತುಗಳೂ ಅಳತೆಗೆ ಸಿಕ್ಕುವಂತಹವುಗಳು. ಮನೆ, ನಗರ, ದೇಶ ಅಷ್ಟೇ ಏಕೆ ನಮ್ಮ ಭೂಮಿಯನ್ನೇ ಅಳೆಯಬಹುದು. ನಮ್ಮ ಗ್ರಹದ ಸುತ್ತಳತೆ, ಭಾರ ಇವನ್ನೆಲ್ಲ ವಿಜ್ಞಾನಿಗಳು ಅಳೆದಿದ್ದಾರೆ. ಯಾವುದೆಲ್ಲವೂ ಅಳತೆಗೆ ಸಿಗುತ್ತದೋ ಅದು ಮೇಯ. ಇನ್ನು ಕೆಲವು ಅಳತೆಗೆ ಸಿಗಲಾರದವು. ತಾಯಿಯ ಪ್ರೀತಿಯನ್ನು ಅಳೆಯಲಾಗುತ್ತದೆಯೇ? ಅಂತೆಯೆ ಒಬ್ಬ ಮನುಷ್ಯನಿಗೆ ಕೋಪ ಬಂದಿದೆ ಎಂದಿಟ್ಟುಕೊಳ್ಳಿ. ಆ ಕೋಪ ಎಷ್ಟರಮಟ್ಟದ್ದು ಎಂದು ಹೇಗೆ ಹೇಳುವುದು? ಬಹಳ ಹೆಚ್ಚೆಂದರೆ ಭಾರೀ ಎನ್ನಬಹುದೆ ಹೊರತು ಅದನ್ನು ಅಳೆಯಲಾಗುವುದಿಲ್ಲ. ಹಾಗೆಯೇ ಮನುಷ್ಯನ ಸಂತೋಷ, ದು:ಖ, ಸೆಡವು, ಸುಮ್ಮಾನಗಳು ಅಳತೆಗೆ ದೊರೆಯುವುದಿಲ್ಲ. ಇವೆಲ್ಲ ಅಮೇಯಗಳು. ಇದರೊಂದಿಗೆ ಈ ಪ್ರಪಂಚವನ್ನೇ ಸೃಷ್ಟಿಮಾಡಿದ, ಅದನ್ನು ಪೋಷಿಸುವ ಬ್ರಹ್ಮಸತ್ವವಂತೂ ಯಾವ ಅಳತೆಗೂ ದೊರೆಯದ್ದು. ಈ ಪ್ರಪಂಚ ಹೀಗೆ ಚಲ ಅಚಲಗಳ, ಸಮ ಅಸಮಗಳ ಹಾಗೂ ಮೇಯ ಅಮೇಯಗಳ ಮಿಶ್ರಣವಾಗಿದೆ. ಅವುಗಳನ್ನು ಬೇರೆಬೇರೆಯಾಗಿ ನೋಡಿದರೆ ಅಸಮಂಜಸವೆನ್ನಿಸುತ್ತವೆ. ಹುಣಸೆಹಣ್ಣು ಬಲೆ ಹುಳಿ, ಕಾರದಪುಡಿಯನ್ನು ಬರಿಬಾಯಿಯಲ್ಲಿ ತಿನ್ನುವುದು ಸುಲಭವೇ? ಉಪ್ಪಿನರುಚಿ ಬೇರೆ, ಬೆಲ್ಲದ ಸವಿಯೂ ಬೇರೆ. ಆದರೆ ಅವೆಲ್ಲವನ್ನು ಒಂದು ಸರಿಯಾದ ಹದದಲ್ಲಿ ಬೆರೆಸಿದಾಗ ರುಚಿಯಾದ ಸಾರು ಆಗುತ್ತದೆ. ಹಾಗೆಯೇ ಪ್ರಪಂಚದ ಹೆಚ್ಚು ಕಡಿಮೆಗಳು ಬ್ರಹ್ಮರಸದಲ್ಲಿ ಸೇರಿದಾಗ ಸಮಂಜಸವಾಗುತ್ತವೆ. ಮನುಷ್ಯ ಜೀವನ ಸಮೃದ್ಧಿಯಾಗಿ, ಸುಖಮಯವಾಗಿ ಇರಬೇಕಾದರೆ, ಬದುಕು ರುಚಿಕರವಾಗಿ, ಆನಂದಕರವಾಗಿ ನಡೆಯಬೇಕಾದರೆ ಒಂದೆರಡು ಗುಣಗಳ ಸೇರುವಿಕೆ ಸಾಕಾಗುವುದಿಲ್ಲ. ನೂರಾರು ಗುಣಗಳ ಅನ್ಯೋನ್ಯ ಮೈತ್ರಿಗಳು ಸಮ್ಮಳಿತವಾಗಬೇಕು. ಈ ನಯವೇ ಸಂಸ್ಕೃತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.