ಭಾನುವಾರ, ಮಾರ್ಚ್ 7, 2021
28 °C

ಫೋನ್‌ ಕದ್ದಾಲಿಕೆ: ಎಡಿಜಿಪಿ ಕೈವಾಡ?

ಪ್ರಕಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರ ಫೋನ್‌ ಕದ್ದಾಲಿಕೆ ಹಿಂದೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರೊಬ್ಬರ ಕೈವಾಡವಿದೆ’ ಎಂಬ ಸಂಗತಿ ಬಯಲಿಗೆ ಬಂದಿದೆ. ಫೋನ್‌ ಕದ್ದಾಲಿಸಿರುವ ಇನ್‌ಸ್ಪೆಕ್ಟರ್‌ ದರ್ಜೆ ಅಧಿಕಾರಿಯೊಬ್ಬರು ನೀಡಿರುವ ಲಿಖಿತ ವಿವರಣೆಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಇದರೊಂದಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ನಡುವಿನ ಶೀತಲ ಸಮರ ಬೀದಿಗೆ ಬಂದಂತಾಗಿದೆ. ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ‘ಅಪ್ರೂವರ್‌’ ಆಗಿರುವ ಇನ್‌ಸ್ಪೆಕ್ಟರ್‌ ಒಬ್ಬರು ಎಡಿಜಿಪಿ ಸೂಚನೆ ಮೇರೆಗೆ ಫೋನ್‌ ಕದ್ದಾಲಿಸಿರು ವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರ ಅಪರಾಧ ವಿಭಾಗದ ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ, ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಮೂರು ಆಡಿಯೊ ಧ್ವನಿಸುರಳಿ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಈ ಆಡಿಯೊದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಹತ್ತಿರವಾದ ರಾಜ್ಯಸಭೆಯ ಸದಸ್ಯ ಅಹಮದ್‌ ಪಟೇಲ್‌ ಅವರ ಆಪ್ತ ಫರಾಜ್‌ ಎಂಬುವರ ಜೊತೆ ಭಾಸ್ಕರರಾವ್‌ ನಡೆಸಿದ್ದಾರೆ ಎನ್ನಲಾದ ಮಾತುಕತೆಯ ವಿವರಗಳಿವೆ.

‘ಫೋನ್‌ ಕದ್ದಾಲಿಕೆಗೆ ಆದೇಶಿಸಿದ ಪೊಲೀಸ್‌ ಅಧಿಕಾರಿಯೇ ಆಡಿಯೊ ಧ್ವನಿ ಸುರುಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವಂತೆ ನೋಡಿಕೊಂಡಿದ್ದಾರೆ. ನಗರದ ಪೊಲೀಸ್‌ ಕಮಿಷನರ್‌ ಆಗಿದ್ದ ಸುನಿಲ್‌ ಕುಮಾರ್‌ ಅವರ ಅವಧಿ ಮುಗಿದ ಬಳಿಕ ಈ ಪ್ರತಿಷ್ಠಿತ ಹುದ್ದೆಗೆ ಯಾವ್ಯಾವ ಅಧಿಕಾರಿಗಳು ಲಾಬಿ ಮಾಡುತ್ತಿದ್ದಾರೆ ಎಂಬುದನ್ನು ಅರಿಯಲು ಎಡಿಜಿಪಿ ದರ್ಜೆ ಅಧಿಕಾರಿಯೊಬ್ಬರು ಫೋನ್‌ ಕದ್ದಾಲಿಕೆಗೆ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಭಾಸ್ಕರ್‌ರಾವ್‌ ಮಾತ್ರವಲ್ಲ, 49 ಅಧಿಕಾರಿಗಳ ಫೋನ್‌ ಕದ್ದಾಲಿಕೆ ಮಾಡಲಾಗಿದೆ’ ಎಂಬ ಆತಂಕಕಾರಿ ಸಂಗತಿ ಗೊತ್ತಾಗಿದೆ.

‘ಅಲೋಕ್‌ ಕುಮಾರ್‌ ಅವರ ಅವಧಿಯಲ್ಲಿ ಫೋನ್‌ ಕದ್ದಾಲಿಕೆ ಮಾಡಲಾಗಿದೆ’ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿತ್ತು.

‘ಸಮಾಜದ ಹಿತದೃಷ್ಟಿಯಿಂದ ಕೆಲ ಕ್ರಿಮಿನಲ್‌ಗಳ ದೂರವಾಣಿ ಸಂಭಾಷಣೆಯನ್ನು ಸಾಮಾನ್ಯವಾಗಿ ಕದ್ದಾಲಿಸಲಾಗುತ್ತದೆ. ಇಂಥವರ ಜೊತೆ ಕೆಲವರು ಸಂಪರ್ಕ ಹೊಂದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘ಫೋನ್‌ ಕದ್ದಾಲಿಕೆಗೆ ಹಲವು ಹಂತದ ಅನುಮತಿ ಅಗತ್ಯವಿದೆ. ಹೆಚ್ಚುವರಿ ಅಥವಾ ಜಂಟಿ ಪೊಲೀಸ್‌ ಕಮಿಷನರ್‌ ದರ್ಜೆಯ ಅಧಿಕಾರಿಗಳು ಫೋನ್‌ ಕದ್ದಾಲಿಕೆಗೆ ಆದೇಶ ನೀಡಲು ಸಾಧ್ಯವಿಲ್ಲ. ಕನಿಷ್ಠ  ಪೊಲೀಸ್‌ ಕಮಿಷನರ್‌ ದರ್ಜೆಯ ಅಧಿಕಾರಿಗಳ ಒಪ್ಪಿಗೆ ಬೇಕಾಗಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಮೂಲಗಳ ಮಾಹಿತಿಯನ್ನು ನಂಬುವುದಾದರೆ, ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರ ಪತನದ ಸಂದರ್ಭದಲ್ಲಿ, ಆನಂತರ ಸುಮಾರು 600 ಪ್ರಭಾವಿಗಳ ದೂರವಾಣಿ
ಕದ್ದಾಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು