ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ವರ್ಷಕ್ಕೆ ಮೂರೇ ಅರ್ಜಿ ಸಲ್ಲಿಕೆಗೆ ಅವಕಾಶವೆಂದ ಆಯುಕ್ತ!

ಕ್ರಮಕ್ಕೆ ಭೀಮಪ್ಪ ಗಡಾದ ಆಗ್ರಹ
Last Updated 18 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಬೆಳಗಾವಿ: ‘‘ಸು‍ಪ್ರೀಂ ಕೋರ್ಟ್‌ ಆದೇಶದಂತೆ, ಒಬ್ಬ ಅರ್ಜಿದಾರ ಮಾಹಿತಿ ಬಯಸಿ ವರ್ಷಕ್ಕೆ 3 ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶವಿದೆ’ ಎಂದು ಉತ್ತರಿಸುವ ಮೂಲಕ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಪಿ.ಜಿ. ವಿಜಯಕುಮಾರ್‌ ಅವರು ನ್ಯಾಯಾಂಗದ ಘನತೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದಾರೆ’’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ದೂರಿದ್ದಾರೆ.

‘‘ರಾಜ್ಯದಾದ್ಯಂತ ಪರವಾನಗಿ ಭೂಮಾಪಕರಿಗೆ ಮೋಜಣಿ ತಂತ್ರಾಂಶದಲ್ಲಿ ಸ್ವೀಕೃತಗೊಂಡ ತತ್ಕಾಲ್‌ ಪೋಡಿ, ಅನ್ಯಕ್ರಾಂತಕ್ಕೆ ಸಂಬಂಧಿಸಿದ ಪ್ರತ್ಯೇಕ ಅರ್ಜಿಗಳ ಮಾಹಿತಿ ಕೋರಿ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಆಯುಕ್ತರ ಕಚೇರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದೆ. ಅವರು 3 ಅರ್ಜಿಗಳಿಗೆ ಮಾಹಿತಿ ನೀಡಿ 4ನೇ ಅರ್ಜಿಗೆ ಮಾಹಿತಿ ಕೊಟ್ಟಿರಲಿಲ್ಲ. ಒಬ್ಬ ಅರ್ಜಿದಾರ 3 ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶವಿದೆ ಎಂದು ಉತ್ತರಿಸಿದ್ದರು. ಈ ಕುರಿತ ನಿಯಮಾವಳಿಯ ಪ್ರತಿ ನೀಡುವಂತೆ ವಿನಂತಿಸಿ ಮತ್ತೆ ಅರ್ಜಿ ಸಲ್ಲಿಸಿದ್ದೆ. ಇದಕ್ಕೆ ಉತ್ತರಿಸಿರುವ ಇಲಾಖೆಯವರು, ‘ಒಬ್ಬ ಅರ್ಜಿದಾರ ವರ್ಷಕ್ಕೆ 3 ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶವಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಮೇಲ್ಮನವಿ ಪ್ರಕರಣಕ್ಕೆ ಸಂಬಂಧಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪತ್ರ ಬರೆದು ತಿಳಿಸಿದ್ದಾರೆ’’ ಎಂದು ಮಾಹಿತಿ ನೀಡಿದ್ದಾರೆ.

‘‘ಹೀಗಾಗಿ ನ.13ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಒಬ್ಬ ವ್ಯಕ್ತಿ ವರ್ಷಕ್ಕೆ ಸಲ್ಲಿಸಬಹುದಾದ ಅರ್ಜಿಗಳ ಸಂಖ್ಯೆ ಹಾಗೂ ಸುಪ್ರೀಂ ಕೋರ್ಟ್‌ ಆದೇಶದ ನಕಲು ಪ್ರತಿ ಕೊಡುವಂತೆ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಇದಕ್ಕೆ ಡಿ.4ರಂದು ಲಿಖಿತ ಉತ್ತರ ನೀಡಿರುವ ಮಾಹಿತಿ ಆಯೋಗದ ಅಧೀನ ಕಾರ್ಯದರ್ಶಿ, ‘ಮಾಹಿತಿ ಬಯಸಿ ಒಬ್ಬ ವ್ಯಕ್ತಿಯು ಇಂತಿಷ್ಟೇ ಅರ್ಜಿಗಳನ್ನು ಸಲ್ಲಿಸಬೇಕೆಂಬ ನಿಯಮಾವಳಿ ಇಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಆದೇಶವಿಲ್ಲ’ ಎಂದು ತಿಳಿಸಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ, ವಿಜಯಕುಮಾರ್‌ ಅವರು ಕಾನೂನು ಬಾಹಿರವಾಗಿ ಹಾಗೂ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಅವರು ಸುಪ್ರೀಂ ಕೋರ್ಟ್‌ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕಾನೂನನ್ನು ಮೂಲೆಗುಂಪು ಮಾಡಲು ಹೊರಟಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದಾಖಲೆಗಳ ಸಮೇತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಗಡಾದ ಪತ್ರಕರ್ತರಿಗೆ ಬುಧವಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT