ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಅನುಮೋದನೆ: ಪ್ರಧಾನಿಗೆ ಮನವಿ

ಪ್ರಧಾನಮಂತ್ರಿ ಕೃಷಿ ವಿಮೆ ಯೋಜನೆ ಅವಧಿ ವಿಸ್ತರಿಸಲು ಕೋರಿಕೆ
Last Updated 6 ಆಗಸ್ಟ್ 2019, 19:51 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಐ ತೀರ್ಪಿನ ಅನುಷ್ಠಾನದ ನಿಟ್ಟಿನಲ್ಲಿ ಶೀಘ್ರವೇ ಅಧಿ
ಸೂಚನೆ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಧಾನಿ ಮೋದಿ ಅವರನ್ನು ಕೋರಿದರು.

ಮಂಗಳವಾರ ಸಂಸತ್‌ ಭವನದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ ಅವರು, ಕೃಷ್ಣಾ ಜಲವಿವಾದ ನ್ಯಾಯಮಂಡಳಿ–2ರ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಮೂಲಕ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಗಾಗಿ ನಿರ್ಮಿಸಲಾಗುವ ಸಮಾನಾಂತರ ಜಲಾಶಯದ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಬೇಕು. ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದೂ ಅವರು ಇದೇ ವೇಳೆ ಆಗ್ರಹಿಸಿದರು.

ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಲಿದೆ ಎಂದು ಮನವಿ ಸ್ವೀಕರಿಸಿದ ಪ್ರಧಾನಿ ಭರವಸೆ ನೀಡಿದರು.

ಬೆಳೆ ವಿಮೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಕೃಷಿ ವಿಮೆ ಯೋಜನೆಯ ನೋಂದಣಿ ಅವಧಿಯನ್ನು ಆಗಸ್ಟ್ 14ರವರೆಗೆ ವಿಸ್ತರಿಸಬೇಕು ಎಂದು ಯಡಿಯೂರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ‌ ಸಿಂಗ್‌ ತೋಮರ್‌ರನ್ನು ಕೋರಿದರು.

ಬೆಳೆ ವಿಮೆಗೆ ಸಂಬಂಧಿಸಿದ ಬಾಕಿ ಹಣ ಬಿಡುಗಡೆ ಸಮಸ್ಯೆಯನ್ನುಇತ್ಯರ್ಥಗೊಳಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಪ್ರಸಕ್ತ ಸಾಲಿನ ಅನುದಾನ ಬಿಡುಗಡೆ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಅನುದಾನ ಒದಗಿಸಬೇಕು. ಪ್ರಧಾನ
ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರಾಜ್ಯದ ಎಲ್ಲ ಫಲಾನುಭವಿ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು

ಹೆದ್ದಾರಿ ಯೋಜನೆ: ಕೇಂದ್ರದ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ನಂತರ ಭೇಟಿ ಮಾಡಿದ ಮುಖ್ಯಮಂತ್ರಿ, ರಾಜ್ಯದ ಕೆಲವು ಪ್ರಮುಖ ಹೆದ್ದಾರಿ ಯೋಜನೆಗಳ ಕಾಮಗಾರಿಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣಕ್ಕೆ ₹ 350 ಕೋಟಿ ಒದಗಿಸಬೇಕು. ಶಿವಮೊಗ್ಗದ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಬೇಕು ಎಂದು ಮನವಿಪತ್ರ ಸಲ್ಲಿಸಿದರು.

ತೆರಿಗೆ ವಿನಾಯಿತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಗಳನ್ನು ಆದಾಯ ತೆರಿಗೆ ಕಾಯ್ದೆ–1961ರ ಪರಿಚ್ಛೇದ 10 (29 ಎ)ರ ಅಡಿ ಸೇರಿಸಿ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕೋರಿದ ಯಡಿಯೂರಪ್ಪ, ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಸಂಜೆ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿದ ಯಡಿಯೂರಪ್ಪ, ರಾಜ್ಯಕ್ಕೆ
ಕೇಂದ್ರ ಸರ್ಕಾರದಿಂದ ದೊರೆಯಬೇಕಿರುವ ಅನುದಾನ, ಅನುಮೋದನೆ ಕುರಿತು ಶ್ರಮಿಸಬೇಕು ಎಂದು ಕೋರಿದರು.

‘ಹೊಸ ಕಟ್ಟಡ ರಾಜ್ಯದ ಸಂಸ್ಕೃತಿ ಬಿಂಬಿಸಲಿ’

ನವದೆಹಲಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನದ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವ ಸಂದರ್ಭ ಕರ್ನಾಟಕದ ಪರಂಪರೆ, ಸಂಸ್ಕೃತಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದರು.

ಮಂಗಳವಾರ ಹೊಸ ಕಟ್ಟಡದ ನೀಲನಕ್ಷೆಯನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ಕೊಠಡಿಗಳನ್ನು ನಿರ್ಮಿಸಬೇಕು. ರಾಜ್ಯದ ಪರಂಪರೆಗೆ ಅನುಗುಣವಾಗಿ ಅತಿಥಿ ಸತ್ಕಾರಕ್ಕೆ ಆದ್ಯತೆ ದೊರೆಯುವಂತೆ ಕಟ್ಟಡ ರೂಪಿಸಬೇಕು ಎಂಬ ನಿರ್ದೇಶನ ನೀಡಿದರು. ರಾಜ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಚೇರಿಗಾಗಿ ಹೊಸ ಕಟ್ಟಡದಲ್ಲಿ 2 ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ನಕ್ಷೆ ಬದಲಿಸಿ, ಒಂದು ಅಂತಸ್ತಿಗೆ ಮಾತ್ರ ಕಚೇರಿ ಸೀಮಿತಗೊಳಿಸಬೇಕು. ಆಗಸ್ಟ್ ೧೫ರ ನಂತರ ಹಳೆಯ ಕಟ್ಟಡ ತೆರವಿವು ಕಾರ್ಯಾಚರಣೆಗೆ ಚಾಲನೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT