ಬಿಜೆಪಿ ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್: ಇಲ್ಲಿದೆ ಲೆಕ್ಕಚಾರ...

7

ಬಿಜೆಪಿ ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್: ಇಲ್ಲಿದೆ ಲೆಕ್ಕಚಾರ...

Published:
Updated:

ಬೆಂಗಳೂರು: ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ. 

ಈಗಾಗಲೇ ಕಾಂಗ್ರೆಸ್‌ ಪಕ್ಷದ ಕೆಲ ಅತೃಪ್ತ ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದು ಅವರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. 5 ರಿಂದ 7 ಕಾಂಗ್ರೆಸ್‌ ಶಾಸಕರು ಪಕ್ಷದ ಪ್ರಮುಖ ನಾಯಕರ ಕೈಗೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಶಾಸಕರು ನಾಟ್‌ ರೀಚಬಲ್ ಆಗಿದ್ದಾಗ ನೀವೇನು ಮಾಡುತ್ತಿದ್ದಿರಿ?’

ಒಂದು ವೇಳೆ ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆದು ಅವರಿಂದ ರಾಜಿನಾಮೆ ಕೊಡಿಸಿ ಸರ್ಕಾರವನ್ನು ಬೀಳಿಸಿದರೆ ಬಿಜೆಪಿ ಸರ್ಕಾರ ರಚನೆಗೆ ಬೇಕಾಗಿರುವ ಮ್ಯಾಜಿಕ್‌ ನಂಬರ್‌ ಲೆಕ್ಕಚಾರ ಈ ರೀತಿ ಇರಲಿದೆ. 

ರಾಜ್ಯ ವಿಧಾನಸಭೆಯ ಒಟ್ಟು ಸಂಖ್ಯಾಬಲ 224. ಇದರಲ್ಲಿ ಕಾಂಗ್ರೆಸ್ - 80, ಜೆಡಿಎಸ್ - 37, ಬಿಎಸ್ ಪಿ -1, ಬಿಜೆಪಿ - 104 ಹಾಗೂ ಇಬ್ಬರು ಪಕ್ಷೇತರ  ಶಾಸಕರು ಇದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ಮೈತ್ರಿ ಸರ್ಕಾರದ ಸಂಖ್ಯಾಬಲ 120ರಿಂದ 118ಕ್ಕೆ ಕುಸಿತವಾಗಿದೆ. ಈ 118ರ ಸಂಖ್ಯಾ ಬಲದಲ್ಲಿ ಸ್ಪೀಕರ್ ಕೂಡ ಇದ್ದಾರೆ. ಸದನದಲ್ಲಿ ವಿಶ್ವಾಸಮತ ಯಾಚನೆ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಸಮನಾಗಿದ್ದಾಗ ಮಾತ್ರ ಸ್ಪೀಕರ್‌ ಮತ ಹಾಕುವ ಅವಕಾಶವನ್ನು ಹೊಂದಿರುತ್ತಾರೆ. 

ಇದನ್ನೂ ಓದಿ:  ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದ ಪಕ್ಷೇತರ ಶಾಸಕರು

ಸದನದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯ ಸಂಖ್ಯಾ ಬಲ 104 ಇದೆ. ಇಬ್ಬರು ಪಕ್ಷೇತರ ಶಾಸಕ ಬೆಂಬಲದಿಂದ ಅವರ ಸಂಖ್ಯಾಬಲ 106ಕ್ಕೆ ಏರಿಕೆಯಾಗಲಿದೆ. 118 ಸಂಖ್ಯಾಬಲ ಇರುವ ಸಮ್ಮಿಶ್ರ ಸರ್ಕಾರದಿಂದ 12 ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ

ದೋಸ್ತಿ ಸರ್ಕಾರದ 12 ಶಾಸಕರು ಖುದ್ದು ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ನೀಡಿದಾಗ ಮಾತ್ರ ದೋಸ್ತಿ ಸರ್ಕಾರದ ಸಂಖ್ಯಾಬಲ 105ಕ್ಕೆ ಕುಸಿತವಾಗಲಿದೆ. ಆಗ 106 ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡುವ ಸಾಧ್ಯತೆ ಇರಲಿದೆ.

12 ಶಾಸಕರು ರಾಜಿನಾಮೆ ನೀಡಿದ ಬಳಿಕ  ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಒತ್ತಾಯಿಸಬೇಕು. ಇದನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಬೇಕು. ಒಂದು ವೇಳೆ ಆಗದಿದ್ದಾಗ ಬಿಜೆಪಿ ನಾಯಕರು ತಮ್ಮ ಬೆಂಬಲಿಗ ಪಕ್ಷೇತರ ಶಾಸಕರ ಜೊತೆ ರಾಜಭವನಕ್ಕೆ ತರಳಿ ಪರೇಡ್ ನಡೆಸಬಹುದು.

ಇದನ್ನೂ ಓದಿ: ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಸ್ಥಿರವಾಗಲ್ಲ: ಪರಮೇಶ್ವರ್

ಸರ್ಕಾರ ರಚನೆ ಬಳಿಕ 12 ಶಾಸಕರಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಈಗಾಗಲೇ 106 (ಪಕ್ಷೇತರರು ಸೇರಿ) ಸ್ಥಾನಗಳನ್ನು ಹೊಂದಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಕನಿಷ್ಠ 7 ಸ್ಥಾನಗಳನ್ನು ಗೆಲ್ಲಬೇಕಾಗಿದೆ. 

ಇಲ್ಲಿ ದೋಸ್ತಿ ಸರ್ಕಾರದ 12 ಶಾಸಕರು ರಾಜಿನಾಮೆ ನೀಡಿದಾಗ ಮಾತ್ರ ಈ ಲೆಕ್ಕಚಾರ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿದೆ. ಆದರೆ ದೋಸ್ತಿ ಸರ್ಕಾರದ 12 ಶಾಸಕರು ರಾಜಿನಾಮೆ ನೀಡುವುದೇ ಯಕ್ಷ ಪ್ರಶ್ನೆಯಾಗಿದೆ. 

ಬರಹ ಇಷ್ಟವಾಯಿತೆ?

 • 35

  Happy
 • 9

  Amused
 • 0

  Sad
 • 2

  Frustrated
 • 13

  Angry

Comments:

0 comments

Write the first review for this !