ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ತಲೆನೋವು: ಬಿಎಸ್‌ವೈ ತೊಳಲಾಟ

ಜ.16 ಅಥವಾ 17 ಕ್ಕೆ ಸಂಪುಟ ವಿಸ್ತರಣೆ ?
Last Updated 8 ಜನವರಿ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರಕ್ಕೆ ಬಲ ತುಂಬಿದ ನೂತನ ಶಾಸಕರೇ ಈಗ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ತಲೆ ನೋವಾಗಿದ್ದಾರೆ. ಈ ಶಾಸಕರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಎಲ್ಲವೂ ಸರಿ ಹೋದರೆ ಸಂಕ್ರಾಂತಿ ಮುಗಿದ ಒಂದೆರಡು ದಿನಗಳಲ್ಲಿ ಅಂದರೆ; ಜ.16 ಅಥವಾ 17 ರಂದು ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಾರಾಂತ್ಯದಲ್ಲಿ ದೆಹಲಿಗೆ ಹೋಗಲಿದ್ದಾರೆ.

‘ಸಚಿವ ಸಂಪುಟ ವಿಸ್ತರಣೆಯ ಬಳಿಕ ಯಡಿಯೂರಪ್ಪ ಅವರು ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಅಲ್ಲಿಂದ ಹಿಂದಿರುಗಿದ ನಂತರ ಅವರು ಖಾತೆ ಹಂಚಿಕೆ ಮಾಡಲಿದ್ದಾರೆ. ಆ ವೇಳೆಗೆ ಸಚಿವ ಸ್ಥಾನ ವಂಚಿತರ ಕೋಪವೂ ತಣಿಯಲಿದೆ ಎಂಬುದು ಮುಖ್ಯಮಂತ್ರಿ ಲೆಕ್ಕಾಚಾರ’ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಸಚಿವ ಸಂಪುಟ ವಿಸ್ತರಣೆ ಮಾಡಿ, ಉತ್ತಮ ಆಡಳಿತ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರೂಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಅಧಿಕಾರವನ್ನು ಬಿಎಸ್‌ವೈ ಅವರಿಗೆ ನೀಡಿದ್ದಾರೆ. ಆದರೆ, ಹೊಸ ಶಾಸಕರು ಮತ್ತು ಹಾಲಿ ಸಚಿವರು ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದಿರುವುದರಿಂದ ಯಡಿಯೂರಪ್ಪ ಅವರಿಗೆ ದಾರಿಯೇ ತೋಚದಂತಾಗಿದೆ. ಇದರಿಂದ ಯಾವುದೇ ಹೆಜ್ಜೆ ಇಡುವುದಕ್ಕೆ ಮೊದಲು ವರಿಷ್ಠರ ಹಸಿರು ನಿಶಾನೆ ಪಡೆಯಲು ತೀರ್ಮಾನಿಸಿದ್ದಾರೆ’ .

‘ಕಾಂಗ್ರೆಸ್‌ ತೊರೆದು ಪಕ್ಷಕ್ಕೆ ಬಂದವರು ಪ್ರಬಲ ಶಾಸಕರಾಗಿದ್ದು, ಅವರ ಬೇಡಿಕೆಗಳನ್ನು ಈಡೇರಿಸಿ ಪ್ರಮುಖ ಖಾತೆಗಳನ್ನು ಧಾರೆ ಎರೆದರೆ, ಪಕ್ಷದಲ್ಲಿ ಹಿರಿಯ ಸಚಿವರ ವಿರೋಧ ಎದುರಿಸಬೇಕಾಗುತ್ತದೆ. ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ನೀರಾವರಿ, ಇಂಧನ, ಸಾರಿಗೆ, ಲೋಕೋಪಯೋಗಿ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಖಾತೆ ಹಂಚಿಕೆಯೇ ಕಗ್ಗಂಟಾಗಿದೆ. ಯಾರಿಗೆ ಯಾವ ಖಾತೆ ಹಂಚಬೇಕು ಎಂಬ ತೊಳಲಾಟಕ್ಕೆ ಬಿಎಸ್‌ವೈ ಸಿಲುಕಿದ್ದಾರೆ’ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಕೆಲವು ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಯೂ ಆರಂಭವಾಗಿದೆ. ಕೆಲವು ಶಾಸಕರು ಮೂರು– ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಈವರೆಗೂ ಸಚಿವರಾಗುವ ಭಾಗ್ಯ ಸಿಕ್ಕಿಲ್ಲ. ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಸಂಘ ಪರಿವಾರದಿಂದಲೂ ಆರಂಭವಾಗಿದೆ ಎನ್ನಲಾಗಿದೆ.

ಉಪ ಚುನಾವಣೆಯಲ್ಲಿ ಸೋತಿರುವ ಎಚ್‌.ವಿಶ್ವನಾಥ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂಬ ಒತ್ತಡವನ್ನು ನಿಭಾಯಿಸುವ ಹೊಣೆಗಾರಿಕೆಯೂ ಯಡಿಯೂರಪ್ಪ ಹೆಗಲ ಮೇಲೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT