ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಬಿಜೆಪಿ ಅಣಿ

ಜಿಂದಾಲ್‌ಗೆ ಭೂಮಿ ನೀಡುವುದಕ್ಕೆ ವಿರೋಧ; ಮುಂದುವರಿದ ಅಹೋರಾತ್ರಿ ಧರಣಿ
Last Updated 15 ಜೂನ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಜಿಂದಾಲ್‌ ಕಂಪನಿಗೆ ಜಮೀನು ನೀಡಿಕೆ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವೈಫಲ್ಯ ವಿರೋಧಿಸಿ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ನಾಯಕರು, ಭಾನುವಾರ (ಜೂನ್‌ 16) ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಇದೇ ವಿಷಯದಲ್ಲಿ ಗದಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್‌ .ಕೆ.ಪಾಟೀಲ ನೀಡಿರುವ ಜಿಂದಾಲ್‌ ವಿರೋಧಿ ಅಭಿಯಾನ ಹೇಳಿಕೆಯನ್ನು ಬಳಸಿಕೊಂಡಿರುವ ಕಮಲ ಪಕ್ಷದ ನಾಯಕರು ಹೋರಾಟದತ್ತ ಮುನ್ನಡೆದಿದ್ದಾರೆ.

ನಗರದ ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಸಮೀಪ ಶನಿವಾರ ಬೆಳಿಗ್ಗೆಯಿಂದಲೇ ಬಿರುಸಿನ ರಾಜಕೀಯ ಚಟುವಟಿಕೆ ನಡದಿತ್ತು. ಐಎಂಎ ಹಗರಣದಲ್ಲಿ ಸಂತ್ರಸ್ತರಾದವರ ಅಳಲನ್ನು ಆಲಿಸುವ ಅವಕಾಶವೂ ಸಿಕ್ಕಿದ್ದರಿಂದ ಹೋರಾಟಕ್ಕೆ ವಿಭಿನ್ನ ರೀತಿಯಲ್ಲಿ ಬಲ ಬಂದ ಖುಷಿಯಲ್ಲಿ ನಾಯಕರಿದ್ದರು. ಸಂಜೆಯ ತನಕವೂ ಇದೇ ಉತ್ಸಾಹದಲ್ಲಿ ಧರಣಿ ನಿರತರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ‘ಸಚಿವ ಸಂಪುಟ ಉಪ ಸಮಿತಿ ರಚಿಸುವ ಮೂಲಕ ರಾಜ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಲು ಮುಂದಾಗಿದೆ. ಸರ್ಕಾರದಲ್ಲಿರುವ ಪ್ರಭಾವಿಗಳು ಜಿಂದಾಲ್‌ಗೆ ಭೂಮಿ ನೀಡುವ ವಿಷಯದಲ್ಲಿ ಭ್ರಷ್ಟಾಚಾರ ನಡೆಸಿರುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಿಲ್ಲ. ಉಪ ಸಮಿತಿ ರಚಿಸುವ ಬದಲು ಭೂಮಿ ಮಾರಾಟದ ನಿರ್ಧಾರ ಕೈಬಿಡಬೇಕು ಎಂಬುದು ಬಿಜೆಪಿಯ ನಿಲುವು. ಸರ್ಕಾರ ಮಣಿಯದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಬೀದಿಯಲ್ಲಿ, ತಂಗಾಳಿಯಲ್ಲಿ: ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ನಾಯಕರು ಬಹುತೇಕ ‘ಐಷಾರಾಮಿ’ ಹೋರಾಟಕ್ಕೆ ಇಳಿದುದು ಎರಡೂ ದಿನದ ಮುಖ್ಯಾಂಶವಾಗಿತ್ತು. ಶುಕ್ರವಾರ ರಾತ್ರಿ ಧರಣಿ ನಿರತ ಸ್ಥಳದಲ್ಲೇ ನಾಯಕರು ಮಲಗಿದ್ದರೂ, ತಂಪಾದ ಗಾಳಿಗೆ 4 ಕೂಲರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆಗಾಗ ಊಟ, ತಿಂಡಿಗೆ ಪಕ್ಕದಲ್ಲೇ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿತ್ತು. ಸಂಚಾರಿ ಶೌಚಾಲಯ ಅಳವಡಿಸಲಾಗಿತ್ತು. ಪ್ರತಿಭಟನಾ ಸ್ಥಳದ ಹಿಂಭಾಗದಲ್ಲಿ ಬಜ್ಜಿ, ಬೋಂಡಾ ತಯಾರಿ ಭರ್ಜರಿಯಾಗಿ ನಡೆಯುತ್ತಿತ್ತು. ಧರಣಿ ನಿರತರು ಶೇಂಗಾ ಮೆಲ್ಲುತ್ತ, ತಂಪು ಪಾನೀಯ ಹೀರುತ್ತ ಸಮಯ ಕಳೆಯುತ್ತಿದ್ದರು.

‘ಹಿಂದೆ ಸರಿದರೆ ಕೈಗಾರಿಕಾ ಪ್ರಗತಿಗೆ ಮಾರಕ’

‘ಕೈಗಾರಿಕೆಗಳಿಗೆ ಭೂಮಿ ಕೊಟ್ಟಾಗ ಒಂದು ಬೆಲೆ ಇರುತ್ತೆ. 10 ವರ್ಷ ಆದ ಮೇಲೆ ಬೇರೆ ಬೆಲೆ ಇರುತ್ತೆ. ಹಾಗಂತ ಜಿಂದಾಲ್ ಒಂದಕ್ಕೆ ಈ ರೀತಿ ಮಾಡಿದ್ರೆ ಎಲ್ಲ ಕೈಗಾರಿಗಳಿಗೂ ಇದು ಅನ್ವಯವಾಗುತ್ತದೆ. ಇದು ಕೈಗಾರಿಕೆಗಳ ಬೆಳವಣಿಗೆಗೆ ಮಾರಕವಾಗಲಿದೆ. ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿವೆ. ನೆರೆ ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಉಚಿತ ಭೂಮಿ ಹಾಗೂ ನೀರು ನೀಡುತ್ತಿದ್ದಾರೆ. ಈಗಾಗಲೇ ಹಲವು ಕಾರ್ಖಾನೆಗಳು ಬಾಗಿಲು ಹಾಕಿವೆ. ಆರ್ಥಿಕ ಹಿಂಜರಿತದ ದಿನಗಳಲ್ಲಿ ನಾವಿದ್ದೇವೆ. ಇದನ್ನು ಅರ್ಥ ಮಾಡಿಕೋಬೇಕು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಪ್ರತಿಪಾದಿಸಿದ್ದಾರೆ.

ಸಚಿವ ಡಿಕೆಶಿ ಹೇಳಿಕೆಗೆ ಎಚ್ಕೆ ಕುಟುಕು

‘ಜಿಂದಾಲ್‌ ಕಂಪನಿಗೆ ಜಮೀನು ನೀಡಿದ ವಿಚಾರವನ್ನು ನಾನು ರಾಜಕೀಯಗೊಳಿಸುವುದಿಲ್ಲ. ಸರ್ಕಾರದ ವರ್ಚಸ್ಸು ಹಾಳಾಗಬಾರದು ಎಂಬ ದೃಷ್ಟಿಯಿಂದ ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ. ಸಚಿವ ಸಂಪುಟದಲ್ಲಿ ತೀರ್ಮಾನ ಆಗೋ ಮುನ್ನವೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಹೀಗಾಗಿ ಅವರು ಆಕ್ಷೇಪ ಮಾಡಿದ್ದಾರೆ, ಇವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅನ್ನುವುದು ಅನಗತ್ಯ. ನಾವು ಜಿಂದಾಲ್‌ಗೆ ಭೂಮಿ ಕೊಟ್ಟೇ ಕೊಡ್ತೇವೆ, ಬಿಟ್ಟೆ ಬಿಡ್ತೇವೆ ಅನ್ನೋದು ಸರಿಯಲ್ಲ’ ಎಂದು ಹೇಳಿದ ಪಾಟೀಲರು ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಜಿಂದಾಲ್‌ಗೆ ಭೂಮಿ ಕೊಟ್ಟಿದ್ದರಲ್ಲಿ ತಪ್ಪೇನಿದೆ’ ಎಂದು ಶಿವಕಮಾರ್‌ ಸಮರ್ಥಿಸಿಕೊಂಡಿದ್ದರು. ‘ಸರ್ಕಾರದ ಭಾಗವಾಗಿ ಯಾರೂ ಹೀಗೆ ಹೇಳುವುದು ಸರಿಯಲ್ಲ. ಜನಾಭಿಪ್ರಾಯದ ವಿರುದ್ಧ ಹೋದರೆ ಸರ್ಕಾರ ಬಹಳ ದೊಡ್ಡ ದಂಡ ಕೊಡಬೇಕಾಗುತ್ತೆ. ಸರ್ಕಾರ ಕಾನೂನು ಪ್ರಕಾರ ಭೂಮಿ ಕೊಡುವ ಬಗ್ಗೆ ‌ನಿರ್ಧಾರ ಮಾಡಬೇಕು. ಆದರೆ ಯಾರೋ ಒಬ್ಬರು ಮಾಡೇ ಮಾಡ್ತೀವಿ, ಬಿಟ್ಟೆ ಬಿಡ್ತೀವಿ ಅನ್ನುವುದು ಸರ್ಕಾರದ ಪರವಾಗಿ ಸಚಿವರೊಬ್ಬರು ಹೇಳುವುದು ಸರಿಯಾದ ಕ್ರಮವಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT