ಅಖಾಡಕ್ಕೆ ಇಳಿದ ಆರ್‌ಎಸ್‌ಎಸ್‌

ಶನಿವಾರ, ಮಾರ್ಚ್ 23, 2019
34 °C
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಸಿದ್ಧತೆ

ಅಖಾಡಕ್ಕೆ ಇಳಿದ ಆರ್‌ಎಸ್‌ಎಸ್‌

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಿರಂತರ ಏಳು ಬಾರಿ ಸಂಸದರನ್ನು ಗೆಲ್ಲಿಸಿರುವ ಬಿಜೆಪಿ, ತನ್ನ ವಿಜಯಯಾತ್ರೆ ಮುಂದುವರಿಸಲು ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದು, ಇದೀಗ ಆರ್‌ಎಸ್‌ಎಸ್‌ ಕೂಡ ಚುನಾವಣಾ ಅಖಾಡಾಕ್ಕೆ ಧುಮುಕಿದೆ.

1991, 1996, 1998, 1999ರಲ್ಲಿ ವಿ.ಧನಂಜಯ ಕುಮಾರ್‌, 2004ರಲ್ಲಿ ಡಿ.ವಿ.ಸದಾನಂದ ಗೌಡ, 2009 ಮತ್ತು 2014ರಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅವರು ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲೂ ನಳಿನ್‌ಕುಮಾರ್ ಕಟೀಲ್‌ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಹಾಗೂ ಸಂಘ ಪರಿವಾರದ ಇತರ ಸಂಘಟನೆಗಳು ನೇರವಾಗಿಯೇ ಚುನಾವಣಾ ಕಣಕ್ಕೆ ಇಳಿದಿದ್ದು, ಅದರ ಫಲವಾಗಿ 8 ಕ್ಷೇತ್ರಗಳ ಪೈಕಿ ಏಳರಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಮಾದರಿಯನ್ನು ಲೋಕಸಭೆ ಚುನಾವಣೆಯಲ್ಲೂ ಅನುಸರಿಸಲು ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ.

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು, ತಳಮಟ್ಟದಲ್ಲಿ ಪಕ್ಷದ ಸಂಘ
ಟನೆಗೆ ಮುಂದಾಗಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್‌ನ ಪ್ರಮುಖ ನಾಯಕರು ಮಾರ್ಗದರ್ಶನ ನೀಡಲು ಸಿದ್ಧರಾಗಿದ್ದು, ಈ ಬಾರಿಯ ಚುನಾವಣೆಯನ್ನು ಅಭ್ಯರ್ಥಿಗಿಂತ, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎನ್ನುವ ಉದ್ದೇಶ
ದಿಂದ ಎದುರಿಸಲಾಗುತ್ತಿದೆ ಎನ್ನುವ ಮಾತುಗಳು ಆರ್‌ಎಸ್‌ಎಸ್‌ ಮೊಗಸಾಲೆಯಲ್ಲಿ ಕೇಳಿ ಬರುತ್ತಿವೆ.

ನವೆಂಬರ್‌ನಲ್ಲಿ ಇಲ್ಲಿನ ಸಂಘನಿಕೇತನದಲ್ಲಿ ನಡೆದ ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಬೈಠಕ್‌ನಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಆಗಿನಿಂದಲೇ ಆರ್‌ಎಸ್‌ಎಸ್‌ ನಾಯಕರ ಬೆಂಬಲ ಕೋರುತ್ತ ಬಂದಿದ್ದು, ಇದೀಗ ಅದು ಕಾರ್ಯರೂಪಕ್ಕೆ ಬರುತ್ತಿದೆ.

ಹಲವು ಯೋಜನೆ: ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ‘ಪೇಜ್‌ ಪ್ರಮುಖ್‌’ ಯೋಜನೆ ಮೂಲಕ ವಿವಿಧ ಹಂತಗಳಲ್ಲಿ ಪ್ರಚಾರ ನಡೆಸಿದ ಬಿಜೆಪಿ, ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಲೋಕಸಭೆ ಚುನಾವಣೆಗಾಗಿ ಮೂರು ತಿಂಗಳಿಂದಲೇ ಸಿದ್ಧತೆ ಶುರು ಮಾಡಿಕೊಂಡಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪ್ರತಿ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಾಷಣ ಮಾಡುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ‘ಮೇರಾ ಪರಿವಾರ್‌- ಬಿಜೆಪಿ ಪರಿವಾರ್‌’ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ. ಬಿಜೆಪಿ ಶಕ್ತಿ ಕೇಂದ್ರಗಳ ಮೂಲಕ ಪ್ರತಿಯೊಂದು ಮನೆಯಲ್ಲೂ ಪಕ್ಷದ ಧ್ವಜ ಹಾರಿಸುವುದು ಕಾರ್ಯಕ್ರಮದ ಪ್ರಮುಖ ಅಂಗ. ಮನೆಯವರ ಅನುಮತಿ ಪಡೆದು ಧ್ವಜ ಹಾಕಲಿದ್ದು, ಚುನಾವಣೆ ತನಕ ಹಾರಾಡಲಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ದೇಶದಾದ್ಯಂತ ಪ್ರಮುಖ ನಾಯಕರಿಂದ ‘ಮೇರಾ ಪರಿವಾರ್‌ ಬಿಜೆಪಿ ಪರಿವಾರ್‌’ ಸ್ಟಿಕ್ಕರ್‌ ಅಂಟಿಸುವ ಅಭಿಯಾನ ನಡೆಯುತ್ತಿದ್ದಂತೆ, ಇಲ್ಲೂ ನಡೆಯುತ್ತಿದೆ. ದೀನ್‌ ದಯಾಳ್‌ ಸಮರ್ಪಣ್‌ ದಿನದ ಅಂಗವಾಗಿ ನಮೋ ಆ್ಯಪ್‌ ಮೂಲಕ ಪಕ್ಷಕ್ಕೆ ₹5, ₹50, ₹500, ₹1000 ದೇಣಿಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಇದರ ಜತೆಗೆ ಪ್ರಚಾರದ ಭಾಗವಾಗಿ, ಕಮಲ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದಿಂದ ಸೌಲಭ್ಯ ಪಡೆದಿರುವ ಫಲಾನುಭವಿಗಳ ಮನೆಗೆ ತೆರಳಿ, ದೀಪ ಹಚ್ಚಿ ಬರುವುದು ಈ ಕಾರ್ಯಕ್ರಮ. ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರ ಮುದ್ರಿಸಿ, ಮನೆ ಮನೆಗೆ ವಿತರಿಸಿ, ಮತಗಳಾಗಿ ಪರಿವರ್ತಿಸಲು ಮನದಟ್ಟು ಮಾಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನೊಂದೆಡೆ, ಟೀಮ್‌ ಮೋದಿಯಿಂದ ಪ್ರತ್ಯೇಕವಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದ ಯಾತ್ರೆ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘ ಪರಿವಾರದಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಹೋಮ, ವಿಶೇಷ ಪೂಜೆಗಳು, ಚಿಂತನಾ ಸಭೆಗಳು ನಡೆಯುತ್ತಿವೆ.

****

ಕೀ ವೋಟರ್ಸ್‌ ಸಂಪರ್ಕ

ಕನಿಷ್ಠ 10 ಮತಗಳನ್ನು ಹೊಂದಿ ರುವ ಪ್ರಮುಖ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಕೀ ವೋಟರ್ಸ್‌ ಕಾರ್ಯಕ್ರಮ ಮೂಲಕ ಬಿಜೆಪಿ ಮಾಡಲಿದೆ.

ಜಾತಿ ಮುಖಂಡರನ್ನು ಸೋಷಿಯಲ್‌ ಕೀ ವೋಟರ್ಸ್‌, ಧರ್ಮ ಮುಖಂಡರನ್ನು ರಿಲೀಜಿಯಸ್‌, ಸಹಕಾರಿ ಕ್ಷೇತ್ರದ ಮುಖಂಡರನ್ನು ಕೋ- ಆಪರೇಟಿವ್‌ ಮತ್ತು ಸಾಮಾನ್ಯರನ್ನು ಜನರಲ್‌ ಕೀ ವೋಟರ್ಸ್‌ ಎಂದು ಸಂಪರ್ಕಿಸಿ, ಮನವೊಲಿಸುವ ಪ್ರಯತ್ನ ನಡೆಯಲಿದೆ. ಬಿಜೆಪಿಗೆ ಮತ ಹಾಕುವ ಖಾತರಿ ಇರುವ ಹೊಸ ಮತ ದಾರರ ನೋಂದಣಿ ಕಾರ್ಯ ವನ್ನು ಬಿರುಸಿನಿಂದ ನಡೆ ಸುತ್ತಿದ್ದು, ಪ್ರತಿ ಬೂತ್‌ನಿಂದ ಕನಿಷ್ಠ 15 ಮತದಾರರ ನೋಂದಣಿ ಮಾಡಿಸಲು ಸೂಚನೆ ನೀಡಲಾಗಿದೆ.

****

ಬಿಜೆಪಿ ಅಭ್ಯರ್ಥಿ ಯಾರೇ ಆಗಿದ್ದರೂ, ಮತ್ತೊಮ್ಮೆ ಮೋದಿ ಎನ್ನುವ ಧ್ಯೇಯದೊಂದಿಗೆ ಚುನಾವಣೆ ಎದುರಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ.

-ಗೋಪಾಲಕೃಷ್ಣ ಹೇರಳೆ
ಬಿಜೆಪಿ ನಿರ್ವಹಣಾ ಸಮಿತಿ ಸಂಚಾಲಕ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 12

  Angry

Comments:

0 comments

Write the first review for this !