ಮಂಗಳವಾರ, ಮೇ 17, 2022
23 °C
ಸಂವಿಧಾನವಿರೋಧಿ ಕೃತ್ಯ: ಕೋಟ ಕಿಡಿ

ಬಿಜೆಪಿಯಿಂದ ಪ್ರತಿಭಟನೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗೃಹ ಸಚಿವ ಎಂ.ಬಿ.ಪಾಟೀಲ ಅವರು ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿದ್ದಾರೆ. ಸಂವಿಧಾನವಿರೋಧಿ ಧೋರಣೆಯನ್ನು ಬಿಡದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

‘ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಇದೇ 6ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟ, ‘ಪಾಟೀಲರು ಗೃಹ ಇಲಾಖೆಗೆ ಕಾಯಕಲ್ಪ ನೀಡುತ್ತಾರೆ. ಔರಾದಕರ ವರದಿ ಜಾರಿ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಿ ಬಾಯಿ ಬಂದ್‌ ಮಾಡುತ್ತಿದ್ದಾರೆ. ವಿರೋಧ ಪಕ್ಷವನ್ನು ಹಣಿಯಲು ತುರ್ತು ಪರಿಸ್ಥಿತಿಯ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಗೋಶಾಲೆಗಳ ಆರಂಭಕ್ಕೆ ಒತ್ತಾಯ: ರಾಜ್ಯದ 156 ತಾಲ್ಲೂಕುಗಳಲ್ಲಿ ಗೋಶಾಲೆಗಳು ಹಾಗೂ ಮೇವು ಬ್ಯಾಂಕ್‌ಗಳ ಆರಂಭಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

‘ಈ ಬಗ್ಗೆ ಹೈಕೋರ್ಟ್‌ ಈಗಾಗಲೇ ಸೂಚನೆ ನೀಡಿದೆ. ಸರ್ಕಾರಿ ವ್ಯವಸ್ಥೆ ಜಡ್ಡುಗಟ್ಟಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಪಂಚಕರ್ಮ ಚಿಕಿತ್ಸೆ ಪೂರ್ಣ ಆಗಿದ್ದರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬರ ಕಾಮಗಾರಿಗೆ ಆದ್ಯತೆ ನೀಡಲಿ’ ಎಂದು ಒತ್ತಾಯಿಸಿದರು.

‘ಬಿಜೆಪಿಗೆ ಮತ ಹಾಕಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ’ ಎಂಬ ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರದ್ದು ಹುಚ್ಚುತನದ ಪರಮಾವಧಿ’ ಎಂದು ಟೀಕಿಸಿದರು.

ಜಿಲ್ಲಾ ರ‍್ಯಾಂಕ್‌ ಪದ್ಧತಿ ಕೈಬಿಡಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲಾ ರ‍್ಯಾಂಕ್‌ ಪದ್ಧತಿಯನ್ನು ಕೈಬಿಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್ ಶಹಾಪುರ ಒತ್ತಾಯಿಸಿದರು.

‘ತನ್ವೀರ್ ಸೇಠ್ ಶಿಕ್ಷಣ ಸಚಿವರಾಗಿದ್ದ ವೇಳೆ ಜಿಲ್ಲಾ ರ‍್ಯಾಂಕ್‌ ಪದ್ಧತಿಯನ್ನು ಕೈಬಿಡುವುದಾಗಿ ಪ್ರಕಟಿಸಿದ್ದರು. ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿ. ಈ ಪದ್ಧತಿ ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿದೆ. ‘ಶಾಲಾ ಮಕ್ಕಳ ಬ್ಯಾಗ್‌ ತೂಕ ಕಡಿಮೆ ಮಾಡಲಿರುವ ಸರ್ಕಾರದ ತೀರ್ಮಾನ ಶ್ಲಾಘನೀಯ. ಆದರೆ, ಗುಣಮಟ್ಟದ ಶಿಕ್ಷಣದಲ್ಲಿ ರಾಜಿಯಾಗಬಾರದು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು