ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯವಿದು: ಬಿ.ಎಸ್‌.ಯಡಿಯೂರಪ್ಪ

ಶನಿವಾರ, ಮೇ 25, 2019
32 °C
ಬಿಜೆಪಿಯಿಂದ ಭಯೋತ್ಪಾದನೆ ವಿರೋಧಿಸಿ ಪ್ರತಿಭಟನಾ ಧರಣಿ ಮತ್ತು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯವಿದು: ಬಿ.ಎಸ್‌.ಯಡಿಯೂರಪ್ಪ

Published:
Updated:

ಬೆಂಗಳೂರು: ‘ನಮ್ಮ ಸೈನಿಕರ ದೇಹದಿಂದ ಬಿದ್ದ ತೊಟ್ಟು ರಕ್ತಕ್ಕೂ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕಾಲವೀಗ ಬಂದಿದೆ. ಈ ಕೆಲಸವನ್ನು ಮಾಡಲು ನಮ್ಮ ಪ್ರಧಾನಿ ಮೋದಿ ಅವರು ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುಡುಗಿದರು.

ಬಿಜೆಪಿ ಬೆಂಗಳೂರು ನಗರದ ಘಟಕವೂ ಭಾನುವಾರ ಹಮ್ಮಿಕೊಂಡಿದ್ದ ‘ಭಯೋತ್ಪಾದನೆ ವಿರೋಧಿಸಿ ಪ್ರತಿಭಟನಾ ಧರಣಿ ಮತ್ತು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ’ ಸಭೆಯಲ್ಲಿ ಅವರು ಮಾತನಾಡಿದರು.

‘ಉಗ್ರಗಾಮಿಗಳನ್ನು ಉತ್ಪಾದನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಮಯವಿದು. ಈಶಾನ್ಯ ಭಾರತದಲ್ಲಿ ನಾಗಾ ಉಗ್ರರನ್ನು ಸದೆ ಬದಿದಂತೆ, ಉರಿ ಪ್ರದೇಶದಲ್ಲಿ ದಾಳಿಕೋರರ ಹುಟ್ಟಡಗಿಸಿದಂತೆ, ಪುಲ್ವಾಮಾ ದಾಳಿಗೂ ಪ್ರತ್ಯುತ್ತರ ನೀಡಬೇಕಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ನಾವೆಲ್ಲ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ’ ಎಂದರು.

‘ಕಾಶ್ಮೀರದಲ್ಲಿ ದೋ ಪ್ರಧಾನ್‌, ದೋ ವಿಧಾನ್‌, ದೋ ನಿಶಾನ್‌ (ಇಬ್ಬರು ಮುಖ್ಯಸ್ಥರು, ಎರಡು ಆಡಳಿತ ಕೇಂದ್ರ, ಎರಡು ಗುರುತು) ಇರಬಾರದೆಂದು ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ಹೇಳಿದ್ದರು. ಆದರೆ, ಕಾಂಗ್ರೆಸ್‌ನ ದುರ್ಬಲ ಆಡಳಿತದಿಂದ ಕಾಶ್ಮೀರದಲ್ಲಿನ ಸಮಸ್ಯೆ ಬೆಳೆಯಿತು. ಭಾರತದೊಂದಿಗೆ ನಡೆದ ಎಲ್ಲ ಯುದ್ಧಗಳಲ್ಲಿ ಪಾಕಿಸ್ತಾನ ಸೋತರು, ಬುದ್ಧಿ ಕಲಿತಿಲ್ಲ. ಈಗಿರುವ ನಮ್ಮ ಬಲಿಷ್ಠ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ‘ಸುಮಾರು 45 ಸಾವಿರ ಚ.ಕಿ.ಮೀ. ಪ್ರದೇಶ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದೆ. ಇದಕ್ಕೆಲ್ಲ 50 ವರ್ಷ ಆಳಿದ ಕಾಂಗ್ರೆಸ್‌ ಕಾರಣ’ ಎಂದು ದೂರಿದರು.

‘ನಮ್ಮ ದೇಶದ ಉಪ್ಪು ತಿಂದು, ನೀರು ಕುಡಿಯುತ್ತಿರುವ ಹುರಿಯತ್‌ ನಾಯಕರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ನೀಡಿದ ಭದ್ರತೆಯನ್ನು ಹಿಂಪಡೆದಿರುವುದು ಉತ್ತಮ ನಡೆ. ದೇಶದಲ್ಲಿ ಇಷ್ಟೆಲ್ಲಾ ಅಹಿತಕರ ಘಟನೆಗಳು ನಡೆಯುತ್ತಿದ್ದರೂ, ನಮ್ಮ ‘ನಗರ ನಕ್ಸಲರು’ ಪಾಕಿಸ್ತಾನದ ಪಾಪಿಗಳ ಕುರಿತು, ನಕ್ಸಲರ ಬಗ್ಗೆ, ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿಲ್ಲ. ಉಗ್ರವಾದಿಗಳನ್ನು ಹೊಗಳಿ ರಾಯಚೂರಿನಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಇಂತಹ ವಿಷಬೀಜಗಳು ನಮ್ಮ ನಾಡಿನಲ್ಲಿ ಮೊಳಕೆಯೊಡೆಯಲು ಬಿಡಲೇಬಾರದು’ ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ‘ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ದೇಶ. ಅಂತ ದೇಶಕ್ಕೆ ಚೀನಾವೂ ಬೆಂಬಲ ನೀಡುತ್ತಿದೆ. ಪಾಕಿಸ್ತಾನದ ವಸ್ತುಗಳು ಭಾರತದ ಒಳಗೆ ತರಲು ಶೇ 200 ರಷ್ಟು ತೆರಿಗೆ ವಿಧಿಸಿರುವುದು ಉತ್ತಮ ನಡೆ’ ಎಂದರು.

‘ಪಾಕಿಸ್ತಾನಕ್ಕೆ ನಾವು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಕ್ರೀಡಾತ್ಮಕವಾಗಿ ದಿಗ್ಬಂಧನ ಹಾಕಬೇಕಿದೆ. ಅಲ್ಲಿನ ಕಲಾವಿದರು, ಸಾಹಿತಿಗಳು, ಕ್ರೀಡಾಪಟುಗಳು ನಮ್ಮ ದೇಶಕ್ಕೆ ಬರುವುದನ್ನು ತಡೆಯಬೇಕಿದೆ’ ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ, ‘ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಪದೇ–ಪದೇ ದಾಳಿ ಮಾಡುತ್ತಿದೆ. ನಮ್ಮ ಸಹನೆ ಈಗ ಮೀರಿದೆ. ಅವರು ಇಟ್ಟಿಗೆಯಿಂದ ನೀಡುವ ಪೆಟ್ಟಿಗೆ, ನಾವು ಕಲ್ಲುಗಳಿಂದ ಉತ್ತರ ಕೊಡಬೇಕಿದೆ. ಆ ಕೆಲಸವನ್ನು ನಮ್ಮ ಮೋದಿ ಮಾಡಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

***

ಪಾಕಿಸ್ತಾನದ ಕಲಾವಿದರು, ಸಾಹಿತಿಗಳು, ಕ್ರೀಡಾಪಟುಗಳು ನಮ್ಮ ದೇಶಕ್ಕೆ ಬರುವುದನ್ನು ನಾವೆಲ್ಲ ತಡೆಯಬೇಕಿದೆ. ಬಂದರೆ ದಿಗ್ಬಂಧನ ಹಾಕಬೇಕು.

-ಎನ್‌.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

**

ಪಾಕಿಸ್ತಾನ ನಮಗೆ ಇಟ್ಟಿಗೆಯಿಂದ ಪೆಟ್ಟು ನೀಡಿದರೆ, ನಾವು ಕಲ್ಲುಗಳಿಂದ ಪ್ರತ್ಯುತ್ತರ ಕೊಡಬೇಕಿದೆ. ಆ ಕೆಲಸವನ್ನು ನಮ್ಮ ಮೋದಿ ಮಾಡಲಿದ್ದಾರೆ.
-ಅಬ್ದುಲ್ ಅಜೀಂ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 6

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !