ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಬಾಂಬ್: ಅಜ್ಞಾತ ಸ್ಥಳದಲ್ಲಿ ಆರೋಪಿ ಆದಿತ್ಯ ರಾವ್ ವಿಚಾರಣೆ

ಆರೋಪಿ ಶರಣು: ಬೆಂಗಳೂರು ಪೊಲೀಸರಿಂದ ತೀವ್ರ ವಿಚಾರಣೆ
Last Updated 22 ಜನವರಿ 2020, 4:55 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಆದಿತ್ಯ ರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಐಜಿಪಿ ನೀಲಮಣಿರಾಜು ಅವರ ಎದುರುಬುಧವಾರ ಬೆಳಿಗ್ಗೆ ಸುಮಾರು 8.40ರ ಸುಮಾರಿಗೆ ಶರಣಾಗಿದ್ದಾನೆ.

‘ಬಾಂಬ್ ಇಟ್ಟಿದ್ದು ನಾನೇ’ ಎಂದುಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂಬಮಾಹಿತಿ ಸಿಕ್ಕಿದೆ. ಆರೋಪಿಯನ್ನು ಹಲಸೂರು ಗೇಟ್ಪೊಲೀಸ್ ಠಾಣೆಗೆ ಕರೆತರಲಾಗಿದೆ. ಠಾಣೆಯ ಇನ್‌ಸ್ಟೆಕ್ಟರ್ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

‘ಬಾಂಬ್‌ ಇರಿಸುವ ಸಂದರ್ಭದ ದೃಶ್ಯಾವಳಿಗಳನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ದಿನಪತ್ರಿಕೆಗಳಲ್ಲಿ ಚಿತ್ರಗಳು ಮುದ್ರಣವಾಗಿದ್ದವು. ಇದನ್ನು ಗಮನಿಸಿದ ನಂತರ ಶರಣಾಗಲು ನಿರ್ಧರಿಸಿದೆ. ಮಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಸ್ಫೋಟಕ ಸಿದ್ಧಪಡಿಸಿದ್ದೆ’ ಎಂದು ಪೊಲೀಸರು ನಡೆಸಿದ್ದ ಪ್ರಾಥಮಿಕ ವಿಚಾರಣೆ ವೇಳೆ ರಾವ್ ಒಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ.

ವೈದ್ಯಕೀಯ ಪರೀಕ್ಷೆಗೆಂದು ಆರೋಪಿಯನ್ನು ಪೊಲೀಸರು ಸೇಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದರು.

‘ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲುಮಂಗಳೂರು ನಗರ ಪೊಲೀಸರ ತಂಡ ವಿಮಾನದಲ್ಲಿಬೆಂಗಳೂರಿಗೆ ಹೊರಟಿದೆ. ಶಂಕಿತನ ವಿಚಾರಣೆ ನಡೆಸುವ ಜೊತೆಗೆ ಹೆಚ್ಚಿನ ಮಾಹಿತಿ ಕಲೆಹಾಕಲಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಟ್ವೀಟ್ ಮಾಡಿದ್ದಾರೆ.

ಆದಿತ್ಯ ರಾವ್ ಈ ಹಿಂದೆಯೂಹುಸಿ‌ವಾಂಬ್ ಕರೆ ಮಾಡಿ ಪೊಲೀಸರ ಅತಿಥಿಯಾಗಿದ್ದ.

ಆದಿತ್ಯ ರಾವ್ ಬಂಧನವನ್ನು ಖಚಿತಪಡಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ,‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಡಿಜಿಪಿ ಕಚೇರಿಯಲ್ಲಿ ಶರಣಾಗಿದ್ದಾನೆ. ಮುಂದಿನ ವಿಚಾರಣೆ ನಡೆಸಿದ ಬಳಿಕ ಸಂಪೂರ್ಣ ವಿವರ ದೊರೆಯಲಿದೆ. ಅವನೊಬ್ಬ ಹತಾಶ ಎಂಜಿನಿಯರ್‌. ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ಶಿಕ್ಷೆ ಅನುಭವಿಸಿದ್ದ’ ಎಂದು ಪ್ರತಿಕ್ರಿಯಿಸಿದರು.

ಹಿಂದೆಯೂಬಾಂಬ್ ಭೀತಿ ಹುಟ್ಟಿಸಿ ಪೊಲೀಸರ ಅತಿಥಿಯಾಗಿದ್ದ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ ಉಡುಪಿ ಮೂಲದ ಎಂಜಿನಿಯರ್ ಆದಿತ್ಯ ರಾವ್‌ನನ್ನು 2018ರ ಆಗಸ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದರು.

15 ದಿನಗಳ ಅಂತರದಲ್ಲಿಎರಡು ಬಾರಿ ಟರ್ಮಿನಲ್ ಮ್ಯಾನೇಜರ್‌ಗೆ ಕರೆ ಮಾಡಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದ.ಪಾರ್ಕಿಂಗ್ ಜಾಗ ಸ್ಪೋಟಿಸುವುದಾಗಿ ಇ-ಮೇಲ್ ಮಾಡಿದ್ದ. ವಿಚಾರಣೆ ವೇಳೆ ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ ಗೂ ಬೆದರಿಕೆ ಕರೆ ಮಾಡಿದ್ದು ನಾನೇ ಅಂತಾ ತಪ್ಪೊಪ್ಪಿಕೊಂಡಿದ್ದ.

ಬಿ.ಇ., ಎಂಬಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಆದಿತ್ಯ ರಾವ್, ಕೆಲ ತಿಂಗಳ ಹಿಂದೆ ಕೆಐಎಎಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿನ ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ. ಅದೇ ಕೋಪದಿಂದ ಬೆದರಿಕೆ ಕರೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದ.

ಯಾರೀ ಆದಿತ್ಯ ರಾವ್?

ಈ ಹಿಂದೆ ಆದಿತ್ಯ ರಾವ್‌ನನ್ನು ವಿಚಾರಣೆ ನಡೆಸಿದ್ದ ಪೊಲೀಸರು ಆದಿತ್ಯ ರಾವ್‌ ಇತ್ಯೋಪರಿ ವಿವರಿಸುವುದು ಹೀಗೆ...

ಕುಂದಾಪುರ ಮೂಲದ ಆರೋಪಿ, ಉಡುಪಿಯ ಮಣಿಪಾಲ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಕೆಲ ವರ್ಷಗಳ ಕಾಲ ವಾಸವಿದ್ದ. ಮಣಿಪಾಲ್‌ದಲ್ಲೇ 2007ರಲ್ಲಿ ಎಂಬಿಎ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ತೊರೆದು, ಮತ್ತೊಂದು ಬ್ಯಾಂಕ್‌ನಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಬರೀ ಆರು ತಿಂಗಳು ಕೆಲಸ ಮಾಡಿ, ಮತ್ತೆ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್‌ನಲ್ಲೇ ಕೆಲಸಕ್ಕೆ ಸೇರಿದ್ದ. ಬ್ಯಾಂಕ್‌ನಲ್ಲಿ ಉತ್ತಮ ವೇತನ ದೊರಕುತ್ತಿತ್ತು. ಆದರೆ, ಆ ಕೆಲಸವನ್ನು ಬಿಟ್ಟು ಮೂಡಬಿದರೆಯ ಆಳ್ವಾಸ್‌ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೆಲ ದಿನ ಕೆಲಸ ಮಾಡಿ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಾರ್ಡ್‌ ಕೆಲಸಕ್ಕೆ ಸೇರಿದ್ದ.

ಮಠದಲ್ಲೂ ಕೆಲಸ

ಚಂಚಲ ಮನಸ್ಸಿನ ವಿಚಿತ್ರ ಸ್ವಭಾವದ ಆರೋಪಿ, 2013ರಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ತೆರಳಿ ಅಡುಗೆ ಸಹಾಯಕನಾಗಿ ಕೆಲ ಕಾಲ ಕೆಲಸ ಮಾಡಿದ್ದಾನೆ. ತದ ನಂತರ ವಾಪಸ್‌ ಬೆಂಗಳೂರಿಗೆ ಬಂದು ಜಯನಗರದ ಜೀವ ವಿಮಾ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಕೆಲಸ ಮಾಡುವ ಕಂಪನಿಯ ಲ್ಯಾಪ್‌ಟಾಪ್‌ ಕಳ್ಳತನ ಮಾಡಿ ಕೆಲಸ ತೊರೆದಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸುದ್ದಗುಂಟೆಪಾಳ್ಯದಲ್ಲಿರುವ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಿದ್ದ ಆರೋಪಿ, ರೂಮ್‌ಮೇಟ್‌ನ ಲ್ಯಾಪ್‌ಟಾಪ್‌ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಜೂ.30ರಂದು ಸುದ್ದ್ದಗುಂಟೆಪಾಳ್ಯ ಠಾಣೆಯಲ್ಲಿ ಆದಿತ್ಯನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಕೆಲಸ ಕೇಳಿದ್ದ

ವಿಮಾ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡಿದ ಆದಿತ್ಯ, ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೇಳಿಕೊಂಡು ಹೋಗಿದ್ದ. ಈ ವೇಳೆ ಸಂಬಂಧಪಟ್ಟವರು ಕೆಲಸ ಇಲ್ಲವೆಂದು ಹೇಳಿ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ಆದಿತ್ಯ, ದ್ವೇಷದಿಂದ ಇಂಟರ್‌ನೆಟ್‌ನಲ್ಲಿ ವಿಮಾನ ನಿಲ್ದಾಣದ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ, ಆ.20ರಂದು ಹುಸಿ ಬಾಂಬ್‌ ಕರೆ ಕರೆ ಮಾಡಿದ್ದ. ಅದಾದ ಬಳಿಕ ಆ.27 ರಂದು ವಿಮಾನ ನಿಲ್ದಾಣದ ಏರ್‌ ಏಷಿಯಾ ಏರ್‌ಲೈನ್ಸ್‌ ಕೌಂಟರ್‌ಗೆ ಕರೆ ಮಾಡಿ, ಕೊಚ್ಚಿ ಮತ್ತು ಹೈದರಾಬಾದ್‌ಗೆ ಪ್ರಯಾಣಿಸುವ ವಿಮಾನ ಹಾಗೂ ಮುಂಬೈ, ಕೊಯಮತ್ತೂರು, ದೆಹಲಿಗೆ ಪ್ರಯಣಿಸುವ ವಿಮಾನಗಳಲ್ಲಿ ಬಾಂಬ್‌... ಇರಬಹುದು ಎಂದು ಬೆದರಿಸಿದ್ದ.

ಶುಲ್ಕ ಕೇಳಿದ್ದಕ್ಕೆ ಬಾಂಬ್‌ ಬೆದರಿಕೆ !

ರೈಲು ನಿಲ್ದಾಣದ ಲಗೇಜ್‌ ಕೊಠಡಿಯಲ್ಲಿ ತನ್ನ ಬ್ಯಾಗ್‌ ಇರಿಸಿದ್ದ ಆರೋಪಿ ಆದಿತ್ಯ, ಲಗೇಜ್‌ ಮರಳಿ ಪಡೆಯುವಾಗ ಸಿಬ್ಬಂದಿ ಶುಲ್ಕ ಕಟ್ಟುವಂತೆ ಕೇಳಿದ್ದರು. ಈ ವೇಳೆ ನನ್ನ ಬಳಿಯೇ ಹಣ ಕೇಳುತ್ತೀರಾ ಎಂದು ಸಿಬ್ಬಂದಿ ಜತೆ ಜಗಳ ಮಾಡಿದ್ದ. ಅದೇ ದಿನ (ಆ.27) ಸಂಜೆ 4 ಗಂಟೆಗೆ ರೈಲ್ವೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ರೈಲ್ವೆ ನಿಲ್ದಾಣದ ಕ್ಲಾಕ್‌ ರೂಮ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿದ್ದ. ಪೊಲೀಸರು ತಪಾಸಣೆ ನಡೆಸಿದಾಗ ಅದೊಂದು ಹುಸಿ ಕರೆ ಎಂದು ಗೊತ್ತಾಗಿತ್ತು. ಪೇಯಿಂಗ್‌ ಗೆಸ್ಟ್‌ನಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡಿದ್ದ ಬಗ್ಗೆ ವಿಚಾರಣೆ ನಡೆಸಿದಾಗ, ತನ್ನ ಕ್ರೆಡಿಟ್‌ ಕಾರ್ಡ್‌ ಬಿಲ್‌ ಹೆಚ್ಚಾಗಿತ್ತು. ಕಟ್ಟಲು ಸಾಧ್ಯವಾಗದೆ ಲ್ಯಾಪ್‌ಟಾಪ್‌ ಕದ್ದು, ಮಾರಾಟಕ್ಕೆ ಇಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದ.

ಎ.ಸಿ. ಆಗದ್ದಕ್ಕೆ ಕೆಲಸ ಬಿಟ್ಟೆ

ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವ ಆರೋಪಿ ಒಟ್ಟು ನಾಲ್ಕು ಸಿಮ್‌ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದ. ವಿಚಾರಣೆ ವೇಳೆ ಉತ್ತಮ ವೇತನದ ಬ್ಯಾಂಕ್‌ ಕೆಲಸ ಬಿಟ್ಟಿದ್ದು ಏಕೆ ಎಂದು ಕೇಳಿದಾಗ, ನನಗೆ ಎ.ಸಿ. ಎಂದರೆ ಆಗುವುದಿಲ್ಲ. ನನಗೆ ನೈಸರ್ಗಿಕ ಗಾಳಿ ಮತ್ತು ಬೆಳಕು ಇರುವ ಕಡೆ ಕೆಲಸ ಮಾಡಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಅದಕ್ಕಾಗಿ ಸೆಕ್ಯುರಿಟಿ ಕೆಲಸ ಮಾಡಲು ಬಯಸಿದ್ದೆ ಎಂದು ಹೇಳಿದ್ದ.

ಆರೋಪಿಯ ತಂದೆ ಬ್ಯಾಂಕ್‌ವೊಂದರ ನಿವೃತ್ತ ನೌಕರರಾಗಿದ್ದಾರೆ. ಸಹೋದರ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಾರೆ. ಮದುವೆ ಆಗಿಲ್ಲವೇಕೆ ಎಂದು ಪೊಲೀಸರು ಕೇಳಿದಾಗ, ನಾನೇ ಬದುಕುವುದು ಕಷ್ಟ ಇನ್ನು ಹೆಂಡತಿ ಮಕ್ಕಳನ್ನು ಬೇರೆ ಸಾಕಬೇಕೇ ಎಂದು ಪ್ರಶ್ನೆ ಮಾಡಿದ್ದ. ಪಾಲಕರ ಬಳಿ ಆರೋಗ್ಯದ ಕುರಿತು ವಿಚಾರಿಸಿದಾಗ, ಆತನ ಆರೋಗ್ಯ ಸರಿಯಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT