ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹರಕ್ಷಕರ ಸೇವೆ ಮುಂದುವರಿಕೆ: ಬಿ.ಎಸ್.ಯಡಿಯೂರಪ್ಪ

ವಿವಿಧ ಇಲಾಖೆಗಳಿಗೆ ನಿಯೋಜಿಸಲು ಗೃಹ ಇಲಾಖೆ ಸಭೆಯಲ್ಲಿ ತೀರ್ಮಾನ
Last Updated 5 ಜೂನ್ 2020, 2:07 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗೃಹ ರಕ್ಷಕರ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸಿ, ವಿವಿಧ ಇಲಾಖೆಗಳಿಗೆ ನಿಯೋಜಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿ, ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಗೃಹ ರಕ್ಷಕ‌ರ ಸೇವೆ ಒದಗಿಸಲು ಕ್ರಮವಹಿಸುವಂತೆಯೂ ಸೂಚನೆ ನೀಡಿದರು.

ಮುಂಗಾರು ಸಂದರ್ಭದಲ್ಲಿ 200 ಮಂದಿ ಎಸ್.ಡಿ.ಆರ್.ಎಫ್ ಸಿಬ್ಬಂದಿಗೆ ತರಬೇತಿ ಪ್ರಾರಂಭವಾಗಿದೆ. ಕೆಲವು ದಿನಗಳಲ್ಲಿ ಅವರನ್ನು ನಾಲ್ಕು ವಿಭಾಗಗಳಲ್ಲಿ ನಿಯೋಜಿಸಲು ಸಾಧ್ಯವಾಗುತ್ತದೆ. ಇಲ್ಲೂ ಅವರನ್ನು ತೊಡಗಿಸಬಹುದು ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕೋವಿಡ್ 19 ನಿಯಂತ್ರಣದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ, ಇಲಾಖೆಯ ಸುಧಾರಣೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಬದಲಾದ ಸನ್ನಿವೇಶಗಳಲ್ಲಿ ಸಿಇಎನ್ (ಸೈಬರ್ ಕ್ರೈಂ, ಎಕನಾಮಿಕ್ ಅಫೆನ್ಸ್ ಮತ್ತು ನಾರ್ಕೊಟಿಕ್ಸ್) ಠಾಣೆಗಳನ್ನು ಬಲಪಡಿಸಲು ಆದ್ಯತೆ ನೀಡುವಂತೆಯೂ ಯಡಿಯೂರಪ್ಪ ಸೂಚಿಸಿದರು. ಅಲ್ಲದೆ, ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಫೊರೆನ್ಸಿಕ್ ಪ್ರಯೋಗಾಲಯಗಳನ್ನು ಬಲಪಡಿಸಬೇಕು. ತುರ್ತು ಸ್ಪಂದನೆ ವ್ಯವಸ್ಥೆ ಯೋಜನೆಯಡಿ ವಾಹನ ಖರೀದಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕಾರಾಗೃಹಗಳಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಪರಾಧದ ಪ್ರಕರಣಗಳು ವರದಿ ಯಾಗಿಲ್ಲ. ಸುಪ್ರೀಂಕೋರ್ಟಿನ ನಿರ್ದೇಶನದನ್ವಯ 5005 ಮಂದಿಯನ್ನು ಜಾಮೀನು ಹಾಗೂ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರಾಗೃಹಗಳಲ್ಲಿ ಬಂಧಿಗಳ ದಟ್ಟಣೆಯನ್ನು ಶೇ 110 ರಿಂದ ಶೇ 95 ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.

ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಬೃಹತ್ ಮೊತ್ತದ ಅನುದಾನವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಸಂದರ್ಭದಲ್ಲಿ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ದುರುಪಯೋಗವಾಗಿರುವ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಾದ ಪ್ರವೀಣ್ ಸೂದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಗೃಹ ರಕ್ಷಕದ ದಳದ ಸಿಬ್ಬಂದಿಗೆ ಕೊಕ್‌ ನೀಡಲು ಸರ್ಕಾರ ಸಿದ್ಧತೆ ನಡೆಸಿರುವ ಬಗ್ಗೆ ಜೂನ್‌ 1ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT