ಬುಧವಾರ, ಜನವರಿ 29, 2020
31 °C

ಕಾಂಗ್ರೆಸ್‌ –ಜೆಡಿಎಸ್‌ ಟೀಕಿಸುವುದಿಲ್ಲ, ಇನ್ನಾದರೂ ಸಹಕರಿಸಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿಯ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಇನ್ನೆರೆಡು ದಿನಗಳಲ್ಲಿ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಪಕ್ಷದ ವರಿಷ್ಠರಿಗೂ ಈ ಸಾಧನೆ ತೃಪ್ತಿ ತಂದಿದೆ ಎಂದರು. ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಸಚಿವ ಸಂಪುಟ ಸಹೋದ್ಯೋಗಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಈಗ ನಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.

ಇನ್ನು ಉಳಿದ ಮೂರೂವರೆ ವರ್ಷಗಳ ಅವಧಿಗೆ ಸ್ಥಿರ ಸರ್ಕಾರ ಕೊಡುವುದು ನಮ್ಮ ಧ್ಯೇಯ. ಇನ್ನಾದರೂ ಪ್ರತಿಪಕ್ಷಗಳು ನಮಗೆ ಸಂಪೂರ್ಣ ಸಹಕಾರ ಕೊಡಬೇಕು ಎಂದು ಕಾಂಗ್ರೆಸ್, ಜೆಡೆಇಸ್ ನಾಯಕರನ್ನು ವಿನಂತಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ನಡೆಯ ಕುರಿತು ನಾನು ಯಾವುದೇ ಟೀಕೆ ಮಾಡಲು ಇಷ್ಟಪಡುವುದಿಲ್ಲ. ನಮ್ಮೆಲ್ಲ ಸಚಿವರ ಸಹಕಾರದಿಂದ ಒಳ್ಳೆಯ ಆಡಳಿತ ಕೊಡುತ್ತೇನೆ. ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಲೋಕಸಭೆ ಚುನಾವಣೆಯಲ್ಲಿಯೂ ಸಾಕಷ್ಟು ಕ್ಷೇತ್ರಗಳನ್ನು ಗೆದ್ದು ಮೋದಿ–ಅಮಿತ್ ಶಾ ಅವರಿಗೆ ಕೊಡುಗೆ ಕೊಡುತ್ತೇವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ಜಯ ಗಳಿಸಿದ್ದು ಖುಷಿ ಕೊಟ್ಟಿದೆ. ನಮ್ಮ ಸಂಘಟನೆ ಪ್ರಬಲವಾಗಿ ದುಡಿದಿದ್ದರಿಂದ ಈ ಗೆಲುವು ಸಾಧ್ಯವಾಯಿತು. ಎಲ್ಲ ಕಾರ್ಯಕರ್ತರಿಗೆ, ರಾಜ್ಯ ಘಟಕದ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲಿನ ಕುರಿತು ಯಡಿಯೂರಪ್ಪ ಪ್ರತಿಕ್ರಿಯಿಸಲಿಲ್ಲ. ಚುನಾವಣೆಯಲ್ಲಿ ಸೋತವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡುವ ವಿಚಾರದ ಬಗ್ಗೆ ‘ಈಗಲೇ ನಾನು ಏನೂ ಹೇಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು