ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಂಸಿಟಿ ಸ್ಥಳಾಂತರಿಸಿ ರಾಮನಗರದ ವಿರುದ್ಧ ಬಿಎಸ್‌ವೈ ದ್ವೇಷದ ರಾಜಕಾರಣ: ಎಚ್‌ಡಿಕೆ

ರೋರಿಚ್‌ ಎಸ್ಟೇಟ್‌ನ ಜೀವ ವೈವಿಧ್ಯಕ್ಕೂ ಧಕ್ಕೆ ಎಂದು ಕುಮಾರಸ್ವಾಮಿ ಟ್ವೀಟ್‌
Last Updated 18 ಸೆಪ್ಟೆಂಬರ್ 2019, 16:28 IST
ಅಕ್ಷರ ಗಾತ್ರ

ಬೆಂಗಳೂರು: ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ ನಿರ್ಮಿಸುವುದು ಯಡಿಯೂರಪ್ಪ ಅವರ ದ್ವೇಷ-ನಾಶ ರಾಜಕಾರಣದ ಪ್ರತೀಕ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ‘ಕನಕಪುರ ರಸ್ತೆಯಲ್ಲಿರುವ ರೋರಿಚ್‌ ಎಸ್ಟೇಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರ ನಗರಿ (ಫಿಲಂ ಸಿಟಿ) ನಿರ್ಮಿಸಲು ನಿರ್ಧರಿಸಲಾಗಿದೆ,’ ಎಂದು ಹೇಳಿದ್ದರು. ಆದರೆ, ‘ಫಿಲಂಸಿಟಿ ನಿರ್ಮಿಸಲು ಆನೆಗಳು ಸಂಚರಿಸುವ ದಾರಿಯೇ ಬೇಕೆ?’ ಎಂಬ ಕೂಗುಗಳೂ ಕೇಳಿ ಬಂದಿದ್ದವು.ಸದ್ಯ ಈ ಕೂಗಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೂ ದನಿಗೂಡಿಸಿದ್ದಾರೆ.

ಈ ಕುರಿತು ಇಂದು ಸಾಮಾಜಿಕ ತಾಣ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಎಚ್‌ಡಿಕೆ, ಮುಖ್ಯಮಂತ್ರಿ ಬಿಎಸ್‌ವೈ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

‘ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟಿನಲ್ಲಿ ಫಿಲಂ ಸಿಟಿ ನಿರ್ಮಿಸುವುದು ಮಾನ್ಯ ಯಡಿಯೂರಪ್ಪ ಅವರ ದ್ವೇಷ-ನಾಶ ರಾಜಕಾರಣದ ಪ್ರತೀಕ,’ ಎಂದಿದ್ದಾರೆ.

‘ಫಿಲಂ ಸಿಟಿಯನ್ನು ರಾಮನಗರದಲ್ಲಿ ಕಟ್ಟಬೇಕೆಂದು ನನ್ನ ಸರ್ಕಾರದಲ್ಲಿ ತೀರ್ಮಾನಿಸಲಾಗಿತ್ತು.ಈ ಮೂಲಕ ರಾಮನಗರ, ಬೆಂಗಳೂರು, ಬೆಂ.ಗ್ರಾಮಾಂತರ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಯೋಜನೆಯ ಉದ್ದೇಶಗಳ್ಲೊಂದು. ಆದರೆ, ಅದನ್ನು ಸ್ಥಳಾಂತರಿಸುವ ನಿರ್ಧಾರದ ಮೂಲಕ ಬಿಎಸ್ವೈ ರಾಮನಗರದ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ,’ ಎಂದು ಆರೋಪಿಸಿದ್ದಾರೆ.

‘ಬೆಂಗಳೂರು ಹೊರವಲಯದಲ್ಲಿ ಅತಿಕ್ರಮಣಕ್ಕೆ ತುತ್ತಾಗದೇ ಜೀವ ವೈವಿಧ್ಯ ಉಳಿಸಿಕೊಂಡಿರುವ ತಾಣ ರೋರಿಚ್ ಎಸ್ಟೇಟ್. ಇದು ಫಿಲಂ ಸಿಟಿಗೆ ಸೂಕ್ತವಲ್ಲ. ಹಾಗೇನಾದರೂ ಇಲ್ಲಿ ಫಿಲಂ ಸಿಟಿ ಕಟ್ಟಿದರೆ ಪರಿಸರ ನಾಶದ ಜತೆಗೇ ಮಾನವ-ವನ್ಯ ಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ,’ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT