ಮಂಗಳವಾರ, ಆಗಸ್ಟ್ 20, 2019
25 °C

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ

Published:
Updated:

ಬೆಂಗಳೂರು: ಕೆಜೆಪಿ ಕಟ್ಟಲು ಹೊರಟಿದ್ದು ನಾನು ಮಾಡಿದ ದೊಡ್ಡ, ಅಕ್ಷಮ್ಯ ಅಪರಾಧ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜನರು ಇಷ್ಟಪಡಲ್ಲ. ಅದಕ್ಕಾಗಿ ನಾನು ರಾಜ್ಯದ ಜನರ ಎದುರು ಕ್ಷಮೆ ಕೇಳಿದ್ದೇನೆ. 40 ವರ್ಷಗಳ ಸುದೀರ್ಘ ಹೋರಾಟದಿಂದ ಪಕ್ಷ ಕಟ್ಟಿದ್ದೇನೆ. ಜನ ಮನ್ನಣೆ ಕೊಟ್ಟಿದ್ದಾರೆ. ಈಗ ಬಿಜೆಪಿಗೆ ಪ್ರಧಾನಿ ಮೋದಿ ಅವರೇ ಆಧಾರ. ಮೋದಿ ಆಡಳಿತ ವೈಖರಿಯನ್ನು ಜನರು ಅಚ್ಚರಿಯಿಂದ ನೋಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಪ್ರಜಾವಾಣಿ  ಕಚೇರಿಯಲ್ಲಿ ಬುಧವಾರ ನಡೆದ ಪ್ರಜಾಮತ ಸಂವಾದದಲ್ಲಿ ಯಡಿಯೂರಪ್ಪ ಅವರ ಮಾತುಗಳ ಪೂರ್ಣ ಸಾರ ಇಲ್ಲಿದೆ.

ನಾಲ್ಕು ದಶಕದ ಸುದೀರ್ಘ ಹೋರಾಟ, ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತು ಜನಜನಿತವಾಗಿತ್ತು. ಯಡಿಯೂರಪ್ಪ ಕೈಗೆ ಸಿಗುತ್ತಿದ್ದ ಮುಖ್ಯಮಂತ್ರಿ. ಸಂಸದರಾಗಿಯೂ ಎರಡು ಬಾರಿ ಕೆಲಸ ಮಾಡಿದ್ದ ಯಡಿಯೂರಪ್ಪ, ಒಮ್ಮೆ ಮಾತ್ರ ಚುನಾವಣೆಯಲ್ಲಿ ಸೋತಿದ್ದರು. ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ತೆಗೆದುಕೊಟ್ಟವರು.

* ನಿಮಗೆ 22ರ ಗುರಿ ಇದೆ. ಉಳಿದ ಸ್ಥಾನಗಳ ಕಥೆ ಏನು?
ಉ: ನಾವು ಎಲ್ಲ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸ್ತೇವೆ. 22ರಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವುದು ಸಂಕಲ್ಪ. ದೇವೇಗೌಡರು ನಾವು ಎರಡಂಕಿ ದಾಟಲ್ಲ ಅಂದಿದ್ದಾರೆ. ಜೆಡಿಎಸ್ ಎರಡಂಕಿ ದಾಟಲ್ಲ. ಇದು ಈ ನಾಡಿನ ಜನರ ಸಂಕಲ್ಪ.
 ಮೋದಿ ಬೇರೆ ಅಲ್ಲ, ಬಿಜೆಪಿಯ ಹೋರಾಟ ಬೇರೆ ಅಲ್ಲ. ಈ ಚುನಾವಣೆಯಲ್ಲಿ 22 ಲೋಕಸಭಾ ಚುನಾವಣೆ ಗೆಲ್ಲಲು ಕಾರಣ ಮೋದಿ ಅವರ ಪರಿಶ್ರಮ. ಆ ಪರಿಶ್ರಮಕ್ಕೆ ಜನ ಮನ್ನಣೆ ಕೊಡ್ತಾರೆ. 5 ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ಮುಕ್ತ ಸರ್ಕಾರ, ವಿದೇಶದೊಂದಿಗೆ ಉತ್ತಮ ಸಂಬಂಧದ ಭರವಸೆ ಕೊಟ್ಟಿದ್ವಿ. ಅದೆಲ್ಲವನ್ನೂ ಈಡೇರಿಸಿದ್ದೇವೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ. 
ಮೋದಿ ವಿಜಯ ದುಂದುಭಿ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಓಡಾಡಿದ್ದೇನೆ. ಎಲ್ಲೆಡೆ  ಸ್ವಾಗತ ಸಿಕ್ಕಿದೆ. ಯುವಕರ ಬೆಂಬಲ ನಮಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಶತ್ರುಗಳು. ನಮ್ಮ ದೃಷ್ಟಿಯಿಂದ ಇತ್ತೀಚಿನ ಬೆಳವಣಿಗೆ ನೋಡಿದರೆ ಅವರಿಬ್ಬರೇ ಶತ್ರುಗಳು. ಅವರ ಕಚ್ಚಾಟ, ಬಡಿದಾಟ, ವಿಶ್ವಾಸ–ನಂಬಿಕೆ ಇಲ್ಲದಿರುವುದನ್ನು ನೋಡಿದಾಗ ಒಂದಾಗಿ ಹೋಗುವುದು ಅವರಿಬ್ಬರಿಗೆ ಸಾಧ್ಯವಿಲ್ಲ. ಕಾರ್ಯಕರ್ತರ ಮಟ್ಟದಲ್ಲಿಯಂತೂ ಹೊಂದಾಣಿಕೆ ಸಾಧ್ಯವಿಲ್ಲ.

ಇದು ದಪ್ಪ ಚರ್ಮದ ಸರ್ಕಾರ. ಏನು ಮಾಡಿದರೂ ಕೇಳೋರಿಲ್ಲ ಅನ್ನೋದು ಇವರ ಧೋರಣೆ. ರಾಜ್ಯದಲ್ಲಿ ಈಗ ಬರಗಾಲವಿದೆ. ನಮ್ಮ ಪ್ರತಿಭಟನೆ, ಮನವಿಗಳಿಗೆ ಯಾವುದೇ ಸ್ಪಂದನೆ ಇಲ್ಲ. ಇವರ ಆಡಳಿತಕ್ಕೆ ತಕ್ಕ ಉತ್ತರ ಜನರು ಲೋಕಸಭಾ ಚುನಾವಣೆಯಲ್ಲಿ ಕೊಡ್ತಾರೆ. ನಮ್ಮ ಹೋರಾಟ ನಿರಂತರ ನಡೆದಿದೆ. ಆಗ ನನಗೆ ಮೋಸ ಮಾಡಿ ಅಧಿಕಾರ ತಪ್ಪಿಸಿದರು. ನನಗೆ ಇನ್ನೊಂದು ವಾರ ಸಮಯ ಕೊಟ್ಟಿದ್ದರೂ ಮುಖ್ಯಮಂತ್ರಿ ಗಾದಿ ಉಳೀತಿತ್ತು.

ಕುಟುಂಬ ರಾಜಕಾರಣ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?
ದೇವೇಗೌಡರ ಕುಟುಂಬ ಮಾಡ್ತಿರೋ ರೀತಿ, ಇಬ್ಬರೂ ಮೊಮ್ಮಕ್ಕಳನ್ನು ಲೋಕಸಭೆಗೆ ಸೀಟ್ ಕೊಟ್ಟಿರೋದು ಅಸಹ್ಯ ಅನ್ನಿಸ್ತಿದೆ ಜನರಿಗೆ. ಕುಟುಂಬ ರಾಜಕಾರಣ ಇತಿಮಿತಿ ಮೀರಿದೆ ಅನ್ನ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಯಾರದೇ ಮನೆಯಲ್ಲಿ ಒಬ್ಬಿಬ್ಬರು ರಾಜಕೀಯದಲ್ಲಿ ಬೆಳೆದಿದ್ರೆ ತಪ್ಪು ಅನ್ನಿಸಲ್ಲ. ಇಡೀ ಕುಟುಂಬವೇ ಅಧಿಕಾರದಲ್ಲಿ ಇರಬೇಕು ಅನ್ನೋದನ್ನು ಜನರು ಸಹಿಸುವುದಿಲ್ಲ.

ಅಲ್ಪ ಸಂಖ್ಯಾತರಿಗೆ ಸ್ಥಾನ ನೀಡುವ ಬಗ್ಗೆ 

 ನನಗೆ ಮುಸ್ಲಿಮರನ್ನು ಗೆಲ್ಲಿಸಲು ಆಗದಿದ್ದರೂ ಮಂತ್ರಿ ಮಾಡಿದ್ದೇನೆ. ಆ ಸಮುದಾಯವನ್ನು ಜೊತೆಗೆ ತೆಗೆದುಕೊಂಡು ಹೋಗ್ತಿದ್ದೇನೆ.

* ಟೇಪ್ ಹಗರಣ?
ಟೇಪ್ ಹಗರಣ ಎನ್ನುವುದು ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕುಳಿತು ಮಾಡಿದ ಗೊಂದಲ ಅದು. ಸಂಪೂರ್ಣ ಫೇಕ್ ಅದು
ನನಗೆ ಮೋಸ ಮಾಡಿ ಅಪ್ಪಮಕ್ಕಳು ಅವರು. ಜೆಡಿಎಸ್‌ ಜೊತೆಗೆ ಕೈ ಜೋಡಿಸುವುದು ಸಾಧ್ಯವಿಲ್ಲ. ಇಂಪಾಸಿಬಲ್. ನಂಬಿಕೆ ದ್ರೋಹಿಗಳು ಅವರು. ಟೋಪಿ ಹಾಕಿ ಅಧಿಕಾರಕ್ಕೆ ಬರೋದ್ರಲ್ಲಿ ಅವರು ಎಕ್ಸ್‌ಪರ್ಟ್‌, ಇದು ಅವರ ಸಾಮರ್ಥ್ಯ. ಈ ಸಲ ಮೂರ್ನಾಲ್ಕು ಮಹಿಳೆಯರಿಗೆ ಅವಕಾಶ ಕೊಡ್ತೀವಿ. ಮೂರು ಜನರಿಗಂತೂ ನಾವು ಸೀಟ್ ಕೊಡ್ತೀವಿ. ಇಂದು ಸಂಜೆಯೊಳಗೆ ಗೊತ್ತಾಗುತ್ತೆ.

ಮತ್ತೆ ಪ್ರಧಾನಿಯಾಗುತ್ತಾರಾ ಮೋದಿ?

ಪ್ರಧಾನಿ ಮೋದಿ ಸರ್ವಾಧಿಕಾರಿ ಅನ್ನೋದಕ್ಕೆ ಒಂದಾದರೂ ಉದಾಹರಣೆ ಕೊಡಿ. ಅವರಲ್ಲಿ ಸರ್ವಾಧಿಕಾರಿ ನಡವಳಿಕೆ ನಾವಂತೂ ಯಾರೂ ಗಮನಿಸಿಲ್ಲ. ಸ್ವತಂತ್ರವಾಗಿ ದೇಶವನ್ನು ಒಟ್ಟಾಗಿ ತಗೊಂಡು ಹೋಗ್ತಿದೆ. ಇಡೀ ವಿಶ್ವವೇ ಅವರನ್ನು ಕೊಂಡಾಡ್ತಿದೆ. ಸೂರ್ಯಚಂದ್ರರು ಇರುವಷ್ಟೇ ಸತ್ಯ ಅವರು ಮತ್ತೆ ಪ್ರಧಾನಿ ಆಗುವುದು.

ಮೋದಿ ಸುದ್ದಿಗೋಷ್ಠಿ ನಡೆಸಲ್ಲ ಯಾಕೆ?
ಮಾಧ್ಯಮದ ಜೊತೆಗೆ ಒಳ್ಳೇ ಸಂಬಂಧದ ವಿಚಾರ ಬೇಡ. ಅವರಿಗೆ ಪ್ರೆಸ್‌ಮೀಟ್ ಮಾಡೋದನ್ನು ಇಷ್ಟಪಡಲ್ಲ. ಹಾಗಂತ ಅವರೇನೂ ಮಾಧ್ಯಮ ವಿರೋಧವಲ್ಲ. 

ಕ್ಯಾಬಿನೆಟ್‌ನಲ್ಲಿರುವ ಎಲ್ಲರೂ ಸ್ವತಂತ್ರವಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲ ಸಚಿವರೂ ಸ್ವತಂತ್ರರಾಗಿ ಕೆಲಸ ಮಾಡ್ತಿದ್ದಾರೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಸೈಡ್‌ಲೈನ್ ಮಾಡಿದ್ದಾರೆ ಅನ್ನೋದು ಸುಳ್ಳು. ಅವರಿಗೆ ಆದ್ಯತೆ ಕೊಟ್ಟಿದ್ದಾರೆ.
ಬ್ಯಾಂಕಿಂಗ್ ಉದ್ಯೋಗ ನಿಯಮ ಮಾರ್ಪಾಡಿನಿಂದ ಜನರಿಗೆ ತೊಂದರೆ ಆಗ್ತಿದೆ
ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಅನ್ನೋದು ಸರಿ. ಆದರೆ ಸ್ಪರ್ಧಾತ್ಮಕ ಯುಗದಲ್ಲಿ ಹೀಗೆ ಉಳಿಯಲು ಆಗುವುದಿಲ್ಲ.

ಸುಮಲತಾ ಅವರನ್ನು ಬೆಂಬಲಿಸುತ್ತೀರಾ? 
ನನ್ನದು ಸರ್ವಾಧಿಕಾರಿ ಧೋರಣೆ ಅಲ್ಲ. ನನ್ನ ಮೇಲಿನ ಆರೋಪ ಸಂಪೂರ್ಣ ಸುಳ್ಳು. ವರಿಷ್ಠರ ಅಭಿಪ್ರಾಯದಂತೆ ನಾನು ಮುಂದುವರಿಯುವೆ. ಸುಮಲತಾ ಅವರಿಗೆ ನಾವು ಬೆಂಬಲಿಸಬೇಕು ಅನ್ನೋದು ಇಡೀ ರಾಜ್ಯದ ಜನರ ಅಭಿಪ್ರಾಯ. ಅಂಬರೀಷ್ ಇದ್ದಾಗ ಹಾಡಿಹೊಗಳುತ್ತಿದ್ದ ಕುಮಾರಸ್ವಾಮಿ ಈಗ ಹಗುರವಾಗಿ ಮಾತಾಡ್ತಾ ಇದ್ದಾರೆ. ಇದನ್ನು ರಾಜ್ಯದ ಜನರು ಸಹಿಸುವುದಿಲ್ಲ.

ಅನಂತಕುಮಾರ ಹೆಗಡೆ ನಿಮಗೆ ಶಕ್ತಿಯೋ? ಸಮಸ್ಯೆಯೋ?
ಸಂಸದರ ಸಾಧನೆಯ ಆಧಾರದ ಮೇಲೆ ಸೀಟು ಹಂಚಿಕೆ ನಡೆಯುತ್ತೆ. ನಮ್ಮ ಕಾರ್ಯಕರ್ತರು ಕೊಡುವ ಹೆಸರು ಕಳಿಸುವುದು ನಮ್ಮ ಡ್ಯೂಟಿ. ಅನಂತಕುಮಾರ ಹೆಗಡೆ ಅವರನ್ನು ನಾವು ಎಲ್ಲಿಯೂ ಹೊರಗೆ ಇಡ್ತಿಲ್ಲ. ಅವರಿಗೆ ಪ್ರಧಾನಿ ಕಾರ್ಯಕ್ರಮಕ್ಕೆ ಆಮಂತ್ರಣ ಕೊಡುವ ಅಗತ್ಯವೇನಿದೆ? ಅವರು ಬಾರದಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ.

ಅನಂತಕುಮಾರ ಹೆಗಡೆ ಸುಧಾರಿಸಿಕೊಳ್ಳಬೇಕು ಅಂತ ಎಲ್ಲರೂ ಸಲಹೆ ಕೊಟ್ಟಿದ್ದಾರೆ. ಅವರೂ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಯಾವುದೇ ವ್ಯಕ್ತಿ ಇತಿಮಿತಿ ದಾಟಿ ಮಾತನಾಡಬಾರದು ಅಂತ ಹೇಳಿದ್ದೇವೆ.

ಕೆಲವು ವಿಧಾನಸಭಾ ಸದಸ್ಯರು ನಾವು ಕುಮಾರಸ್ವಾಮಿ ಸರ್ಕಾರ ಒಪ್ಪಲ್ಲ ಅಂದಿದ್ದು ನೀವೇ ಬರೆದಿದ್ದೀರಿ. ಈ ಸರ್ಕಾರ ಬಿದ್ರೆ ಅದು ಸ್ವಯಂಕೃತ ಅಪರಾಧ. ನಾಳೆ ನಾವು 20ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಮೈತ್ರಿ ಸರ್ಕಾರದ ಕಚ್ಚಾಟ ಮುಗಿಲು ಮುಟ್ಟುತ್ತೆ.
ಈ ಸರ್ಕಾರ ಬೀಳೋದಕ್ಕೆ ನಾವು ಎಂದೂ ಮುಹೂರ್ತ ಫಿಕ್ಸ್ ಮಾಡಿಲ್ಲ. ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ.

ಆಪರೇಷನ್ ಕಮಲದ ಬಗ್ಗೆ?
ಆಪರೇಷನ್ ಕಮಲ ತಪ್ಪು ಅಲ್ಲ. ನನಗೆ ಪಶ್ಚಾತ್ತಾಪವೂ ಇಲ್ಲ. ಇದು ಡೆಮಾಕ್ರಸಿ

ಕೇಂದ್ರದಿಂದ ಕರ್ನಾಟಕಕ್ಕೆ ಕೊಡುಗೆ ಏನು?
2047 ಕೋಟಿ ರೈಲ್ವೆಗೆ, 53 ಹೊಸ ರೈಲು, 17157 ಹೊಸ ರಸ್ತೆ ಆರಂಭವಾಗಿದೆ. ದೇಶದ ಇತಿಹಾಸದಲ್ಲಿ ಇದು ದಾಖಲೆ. ರಾಜ್ಯದ ಎಲ್ಲ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗ್ತಿವೆ. ₹2.3 ಲಕ್ಷ ಕೋಟಿ 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬರ್ತಿದೆ.
ರಾಜ್ಯದಲ್ಲಿ ಸಂಸದರು ಅಪೇಕ್ಷಿಸಿದ ಎಲ್ಲ ಕೆಲಸಗಳನ್ನು ಮಾಡಿ ತೋರಿಸಿದ್ದೇವೆ. ನಿಶ್ಚಿತವಾಗಿ ನಾಳೆ ಮೋದಿ ಪ್ರಧಾನಿಯಾಗುವುದು ನಿಶ್ಚಿತ. 22 ಲೋಕಸಭಾ ಸದಸ್ಯರು ರಾಜ್ಯದಲ್ಲಿ ಗೆಲ್ಲುವುದು ಖಚಿತ. ರಾಜ್ಯವನ್ನು ಮಾದರಿ ರಾಜ್ಯ ಮಾಡಲು ಏನೇನು ಅಗತ್ಯವಿದೆಯೋ ಅದೆಲ್ಲವನ್ನೂ ಮಾಡ್ತೀವಿ.

ಮಹದಾಯಿ ಸಮಸ್ಯೆ ಬಗ್ಗೆ?
ಮಹದಾಯಿ ಸಮಸ್ಯೆ ಪರಿಹರಿಸಬೇಕಾಗಿರುವುದು ರಾಜ್ಯ ಸರ್ಕಾರ. ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಸೈಲೆಂಟ್ ಆಗಿದ್ದಾರೆ. ನೀರಾವರಿಯನ್ನು ಇವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳದ ಪ್ರಸ್ತಾಪವೇ ಬಜೆಟ್‌ನಲ್ಲಿ ಮಾಡ್ತಿಲ್ಲ.
ಮಹದಾಯಿ ಸಮಸ್ಯೆ ಪರಿಹರಿಸಬೇಕಾಗಿರುವುದು ರಾಜ್ಯ ಸರ್ಕಾರ. ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಸೈಲೆಂಟ್ ಆಗಿದ್ದಾರೆ. ನೀರಾವರಿಯನ್ನು ಇವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳದ ಪ್ರಸ್ತಾಪವೇ ಬಜೆಟ್‌ನಲ್ಲಿ ಮಾಡ್ತಿಲ್ಲ.
ಮಹಾದಾಯಿ ಬಗ್ಗೆ ಕೇಂದ್ರ ಕ್ಲಿಯರೆನ್ಸ್ ಸಿಕ್ಕಿದೆ. ಆಲಮಟ್ಟಿ ಎತ್ತರಕ್ಕೆ 28 ಹಳ್ಳಿಗಳ ಸ್ಥಳಾಂತರ ಆಗಬೇಕು. ಅದಕ್ಕೆ ರಾಜ್ಯ ಸರ್ಕಾರ ಹಣ ಕೊಡ್ತಿಲ್ಲ.

ಲಿಂಗಾಯತ –ವೀರಶೈವ ಕುರಿತು?
ಲಿಂಗಾಯತ –ವೀರಶೈವ ಅಂತ ರಾಜಕೀಯ ಸ್ವಾರ್ಥಕ್ಕಾಗಿ ಬೆಂಕಿ ಹಚ್ಚಿದರು. ನನ್ನ ನಿಲುವು ಇಷ್ಟೇ– ವೀರಶೈವ ಮತ್ತು ಲಿಂಗಾಯತ ಒಂದೇ.

ಸಿದ್ದರಾಮಯ್ಯ ಹಿಂದೂ ಅಂತ ಹೇಳಿದ್ದರ ಬಗ್ಗೆ?

ಇಷ್ಟು ವರ್ಷಗಳ ನಂತರವಾದರೂ ಸಿದ್ದರಾಮಯ್ಯ ಅವರಿಗೆ ನಾನು ಹಿಂದೂ ಅಂತ ಜ್ಞಾನೋದಯವಾಗಿದೆ. ಇವರು ತಮ್ಮ ಸ್ವಾರ್ಥಕ್ಕಾಗಿ ಹಿಂದೂ–ಮುಸ್ಲಿಂ–ಕ್ರಿಶ್ಚಿಯನ್ ಅಂತ ಬೆಂಕಿ ಹಚ್ತಾ ಇದ್ರು. ಈಗ ಅವರಿಗೆ ಇದು ನಡೆಯಲ್ಲ ಅಂತ ಅರ್ಥವಾಗಿದೆ. ಸಂತೋಷ.

ನಮ್ಮನ್ನು ಕ್ರೂರಿಗಳು ಅನ್ನೋದು ಸಿದ್ದರಾಮಯ್ಯರ ಬೇಜವಾಬ್ದಾರಿ ಹೇಳಿಕೆ

ಸಂಸತ್ತು ಇರೋದೇ ದೇಶದ ಸಮಸ್ಯೆ ಚರ್ಚೆ ಮಾಡೋಕೆ. ಕಾಂಗ್ರೆಸ್‌ನವರು ಪಾರ್ಲಿಮೆಂಟ್ ನಡೆಯೋಕೆ ಬಿಡದೆ ಹೊರಗೆ ಚಳವಳಿ ಮಾಡ್ತಿದ್ದಾರೆ. ಅದಕ್ಕಾಗಿ ಇವರನ್ನು ಜನರು ಆಯ್ಕೆ ಮಾಡಿರೋದು. ಇಲ್ಲಿ ನಾವು (ಬಿಜೆಪಿ) ನಡೆದುಕೊಳ್ತಿದ್ದೇವೆ ಗಮನಿಸಿದ್ದೀರಾ? ಹೋರಾಟಕ್ಕಾಗಿ ವಿರೋಧ ಪಕ್ಷ, ಜನರ ದನಿ ಎತ್ತೋಕೆ ವಿರೋಧ ಪಕ್ಷ ಇರೋದು ಅಲ್ವಾ?

ಉಮೇಶ್ ಜಾಧವ್‌ ಸ್ಪರ್ಧಿಸುತ್ತಾರಾ?

ಲೋಕಸಭೆಗೆ ಸ್ಪರ್ಧೆ ಮಾಡೋಕೆ ಉಮೇಶ್ ಜಾಧವ್‌ಗೆ ಯಾವುದೇ ಅಡೆತಡೆ ಇಲ್ಲ. ಅವರು ನಮ್ಮ ಗೆಲ್ಲುವ ಅಭ್ಯರ್ಥಿ.

2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಮೋದಿ ಕೊಟ್ಟಿದ್ರು. ಅದು ಪೊಳ್ಳು ಆಗಲಿಲ್ವಾ?
ಬೇರೆಬೇರೆ ರೀತಿಯಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ಸಿಕ್ಕಿದೆ. ರೈಲ್ವೆ ಯೋಜನೆ, ಹೆದ್ದಾರಿ ಕಾಮಗಾರಿಗಳಲ್ಲಿ ಜನರಿಗೆ ಉದ್ಯೋಗ ಸಿಕ್ಕಿಲ್ವಾ?

ಚುನಾವಣೆಗೆ ನಿಲ್ತೀರಾ?

ಈಗ ನನಗೆ 76. ಇನ್ನೊಂದು ಚುನಾವಣೆಗೂ ನಾನು ನಿಲ್ತೀನಿ. ಮುಖ್ಯಮಂತ್ರಿ ಆಗ್ತೀನೋ ಬಿಡ್ತೀನೋ ನಾನು ಇನ್ನೊಂದು ಚುನಾವಣೆಗೆ ನಿಲ್ತೀನಿ. ದೇವರದಯೆಯಿಂದ ನನ್ನ ಕೈಕಾಲು ಗಟ್ಟಿ ಇದೆ.
ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಒಬ್ಬರ ನಂತರ ಒಬ್ಬರು ಬೆಳೀತಾ ಹೋಗ್ತಾರೆ. ನಾಯಕತ್ವದ ಕೊರತೆ ಕರ್ನಾಟಕದ ಮಟ್ಟಿಗೂ ಇಲ್ಲ.

ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಜನರ ಕೈಗೆ ಸಿಗಲ್ಲ ಅನ್ನೋ ಆರೋಪಗಳಿವೆ. ನೀವು ಜನರಿಗೆ ಹೇಗೆ ನಮ್ಮ ಸಂಸದರು ನಿಮ್ಮ ಕೈಗೆ ಸಿಗ್ತಾರೆ ಅಂತ ಹೇಗೆ ಭರವಸೆ ಕೊಡ್ತೀರಿ?

ನನಗೆ ಗೊತ್ತಿರೋ ಪ್ರಕಾರ ಪ್ರತಾಪ್ ಸಿಂಹ ಪರಿಣಾಮಕಾರಿ ಸಂಸದ. ಚೆನ್ನಾಗಿ ಕೆಲಸ ಮಾಡಿದ್ದಾರೆ. ಶೋಭಾ ಸಹ ರಾಜ್ಯದೆಲ್ಲೆಡೆ ಓಡಾಡಿ ಕೆಲಸ ಮಾಡ್ತಿದ್ದಾರೆ. ಯಾರೋ ಒಬ್ಬಿಬ್ಬರ ಅಭಿಪ್ರಾಯ ವ್ಯಕ್ತಪಡಿಸಿದ ತಕ್ಷಣ ನೂರಕ್ಕೆ ನೂರು ಹಾಗೆ ಆಗಲ್ಲ.

ಬಿಜೆಪಿ ಏಕೆ ಭಾವುಕ ವಿಷಯ ಇಡುತ್ತೆ. ಅಭಿವೃದ್ಧಿ ವಿಷಯ ಜನರ ಮುಂದಿಡಲ್ಲ ಏಕೆ?
ಇದು ನಿಮ್ಮ ತಪ್ಪು ಗ್ರಹಿಕೆ.

ರಾಮಜನ್ಮಭೂಮಿ ವಿಚಾರದಲ್ಲಿ ನಿಮ್ಮದು ವೈಫಲ್ಯವಲ್ಲವೇ?
ಸುಪ್ರೀಂಕೋರ್ಟ್‌ನಲ್ಲಿ ಒಂದು ವಿಷಯವಿದ್ದಾಗ, ಕೇಂದ್ರ ಅದನ್ನು ಮೀರಿ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ ತೀರ್ಮಾನದ ನಂತರ ನೂರಕ್ಕೆ ನೂರು ರಾಮಮಂದಿರ ಕಟ್ತೀವಿ.

ಉದ್ಯೋಗ ಸೃಷ್ಟಿಗೆ ಕ್ರಿಯಾಯೋಜನೆ ಏನು?
ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ  ಯತ್ನಿಸುತ್ತೇವೆ.

ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸಲು ಹೇಳಿದ್ದರು ಅಲ್ಲವೇ?

ಅನಂತಕುಮಾರ ಹೆಗಡೆ ಎಂದಿಗೂ ಸಂವಿಧಾನ ಬದಲಿಸಲು ಹೇಳಿಲ್ಲ. ಇದು ತಪ್ಪು ಗ್ರಹಿಕೆ.

ಶಬರಿ ಮಲೆ ವಿಷಯದ ಬಗ್ಗೆ?
ಶಬರಿಮಲೆ ವಿಷಯದಲ್ಲಿ ಅಲ್ಲಿನ ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದೇವೆ.

ಜಾರಕಿಹೊಳಿ ನಿಮ್ಮ ಪಕ್ಷಕ್ಕೆ ಬರ್ತಾರಾ?
ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬರಲ್ಲ. ಅವರು ಬರುವ ವಿಚಾರ ಸತ್ಯಕ್ಕೆ ದೂರವಾದುದು.
ಬಿಜೆಪಿಯಲ್ಲಿ ನಮ್ಮದು ಸಾಮೂಹಿಕ ನೇತೃತ್ವ. ಭಿನ್ನಾಭಿಪ್ರಾಯ ಎಲ್ಲಿದೆ. ನಾವೆಲ್ಲರೂ ಒಟ್ಟಾಗಿ ದೆಹಲಿಗೆ ಹೋಗಿದ್ವಿ. ಸಾಮೂಹಿಕ ನೇತೃತ್ವ ವಿಚಾರದಲ್ಲಿ ನಮಗೆ ವಿಶ್ವಾಸ ಇದೆ.

ಲೋಕಸಭೆಯಲ್ಲಿ ಎಷ್ಟು ಸೀಟು ಗೆಲ್ತೀರಿ?

22 ಲೋಕಸಭೆ ಸೀಟ್ ಗೆದ್ದೇ ಗೆಲ್ತೀವಿ. ಇದು ಶೇ101ರಷ್ಟು ನಿಜ.

ಯಾವ 6 ಕ್ಷೇತ್ರಗಳಲ್ಲಿ ನೀವು ಗೆಲ್ಲಲ್ಲ?
ನಾನು ಅದನ್ನು ಈಗ ಹೇಳಲು ಆಗುವುದಿಲ್ಲ.

ಸುಮಲತಾ ಅವರಿಗೆ ಬೆಂಬಲ ಕೊಡ್ತೀರಾ?

ಮಂಡ್ಯದಲ್ಲಿ ಸುಮಲತಾ ಅವರಿಗೆ ಜನರ ಬೆಂಬಲ ಸಿಗ್ತಿದೆ. ಅವರಿಗೆ ಬೆಂಬಲ ಕೊಡಲು ಯೋಚನೆ ಮಾಡ್ತಿದ್ದೇವೆ. ನಾವು ನಾಮಪತ್ರ ಹಾಕ್ತೀವಿ. ಅಗತ್ಯ ಬಿದ್ದರೆ ಹಿಂದಕ್ಕೆ ತಗೊಳ್ತೀವಿ.

ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಲೋಕಸಭಾ ಉಸ್ತುವಾರಿ ಮಾಡಿದೆ ಕಾಂಗ್ರೆಸ್. ಅವರಿಗೆ ಕೌಂಟರ್‌ ಏನು ಮಾಡ್ತೀರಿ?

ರಾಘವೇಂದ್ರ ಸಂಸದರಾಗಿ ಒಳ್ಳೇ ಕೆಲಸ ಮಾಡ್ತಿದ್ದಾರೆ. ಕ್ಷೇತ್ರದಲ್ಲಿ ನಿರಂತರ ಓಡಾಡ್ತಿದ್ದಾರೆ. ಈ ಸಲ ಹೆಚ್ಚು ಲೀಡ್ ತಗೊಳ್ತಾರೆ.

ಲೋಕಸಭೆಯ ನಂತರ ನಿಮ್ಮ ಕಥೆ ಏನಾಗುತ್ತೆ?
ನೀವು ಕಾದು ನೋಡಿ. ಕೇಂದ್ರ ನನಗೆ ಏನು ಕೆಲಸ ಕೊಟ್ರೂ ಮಾಡಿಕೊಂಡು ಹೋಗ್ತೀನಿ. ಅಡ್ವಾಣಿ–ಮುರಳಿ ಮನೋಹರ ಜೋಶಿ ಅವರ ಜೊತೆಗೆ ಕೇಂದ್ರ ಚೆನ್ನಾಗಿಯೇ ನಡೆದುಕೊಳ್ತಿದೆ.

ರಾಜ್ಯಪಾಲ ಆಗ್ತೀರಾ?

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ. ಕರ್ನಾಟಕದ ಅಭಿವೃದ್ಧಿ ನನ್ನ ಸಂಕಲ್ಪ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ಹೋರಾಡ್ತಾ ಇರ್ತೀನಿ. ಕೇಂದ್ರದವರು ನನ್ನನ್ನು ಮಾರ್ಗದರ್ಶಕ ಮಂಡಳಿಗೆ ಹಾಕಿದ್ರೆ ನಾನು ತಲೆ ಬಾಗ್ತೀನಿ

ಸುಳ್ಳುಸುದ್ದಿ ಹರಡೋರಿಗೆ ಬುದ್ಧಿ ಹೇಳಲ್ವಾ?
ಈ ಥರ ಕೆಲಸ ಯಾರೂ ಮಾಡಬಾರದು.

ಕುರ್ಚಿಯ ಆಸೆಗಾಗಿ ಸಿದ್ಧಾಂತ ಬಲಿಕೊಟ್ರಿ…
ಇಂಥ ವಾತಾವರಣದಲ್ಲಿಯೂ ಕಾಂಗ್ರೆಸ್–ಜೆಡಿಎಸ್ ಮಧ್ಯೆ 104 ಜನ ಗೆದ್ದಿದ್ದಾರೆ. ಇದು ಜನರ ಆಶೀರ್ವಾದ.

ನೀವು ಕಾರ್ಯಕರ್ತರನ್ನು ಗಮನಿಸ್ತಿಲ್ಲ ಯಾಕೆ?
ಇದು ಅರ್ಥವಿಲ್ಲದ ಪ್ರಶ್ನೆ. ಎಲ್ಲ ಕಾರ್ಯಕರ್ತರಿಗೂ ಟಿಕೆಟ್ ಕೊಡೋಕೆ ಆಗುತ್ತಾ? ಕಾರ್ಯಕರ್ತರೇ ನಮಗೆ ನಿಜವಾದ ಶಕ್ತಿ. ಅವರ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಮಾಡ್ತೀವಿ.

Post Comments (+)