ಕಟ್ಟಡ ಕುಸಿತ ಪ್ರಕರಣ: 49 ಜನರನ್ನು ರಕ್ಷಣೆ, ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆ

ಗುರುವಾರ , ಏಪ್ರಿಲ್ 18, 2019
30 °C

ಕಟ್ಟಡ ಕುಸಿತ ಪ್ರಕರಣ: 49 ಜನರನ್ನು ರಕ್ಷಣೆ, ರಾತ್ರಿಯಿಡೀ ಮುಂದುವರಿದ ಕಾರ್ಯಾಚರಣೆ

Published:
Updated:

ಧಾರವಾಡ: ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಇವರೆಗೂ 49 ಜನರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿ ಇರುವ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ವಾಣಿಜ್ಯ ಸಂಕೀರ್ಣವೊಂದು ಮಂಗಳವಾರ ಏಕಾಏಕಿ ಕುಸಿದಿದ್ದರಿಂದ ಇಬ್ಬರು ಮೃತಪಟ್ಟು 36 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಅಂದಾಜು 35 ಮಂದಿ ಸಿಲುಕಿರುವ ಶಂಕೆ ಇದ್ದು, ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಕಟ್ಟಡದ ಕೆಳಗಡೆ ಸಿಲುಕಿರುವ ಜನರಿಂದ ಕೂಗು ಕೇಳಿ ಬರುತ್ತಿದೆ. ‌12 ವಿದ್ಯಾರ್ಥಿಗಳೂ ಅವಶೇಷಗಳ ಅಡಿ ಸಿಲಿಕಿರುವ ಬಗ್ಗೆ ಮಾಹಿತಿ ಇದೆ. ಅವರನ್ನು ಹೊರತರುವ ಕೆಲಸ ಭರದಿಂದ ಸಾಗಿದೆ. ಜೀವ ಉಳಿಸುವುದಕ್ಕೆ ಮೊದಲ ಅಧ್ಯತೆ ನೀಡಲಾಗಿದ್ದು, ಎನ್‌ಡಿಆರ್‌ಎಫ್‌ ಹಾಗೂ ಎನ್‌ಎಸ್‌ಎಫ್‌ ತಂಡಗಳಿಂದ ಕಾರ್ಯಚರಣೆ ನಡೆದಿದೆ ಎಂದು ಮಾಹಿತಿ ನೀಡಿದರು.

ಎನ್‌ಡಿಆರ್‌ಎಫ್‌ನ ಮತ್ತೊಂದು ತಂಡ ನಗರ ತಲುಪಿದೆ. ತಂಡದಲ್ಲಿ 78 ಸಿಬ್ಬಂದಿ ಇದ್ದು, ತಕ್ಷಣವೇ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಈಗಾಗಲೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದುರಂತಕ್ಕೆ ಕಾರಣರಾದವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ.

ಪಾಲಿಕೆಯ ನಿಯಮಗಳನ್ನು ಪಾಲಿಸದೆ ಕಳಪೆಮಟ್ಟದ ಸಾಮಗ್ರಿ ಉಪಯೋಗಿಸಿ ಕಟ್ಟಡ ನಿರ್ಮಿಸಿರುವುದು ಕಟ್ಟಡ ಕುಸಿಯಲು ಕಾರಣ. ಹೀಗಾಗಿ ಸೈದಾಪೂರ ಗ್ರಾಮದ ರೇಣುಕಾದೇವಿ ಕನ್‌ಸ್ಟ್ರಕ್ಷನ್ಸ್‌ ಪಾಲುದಾರರಾದ ರವಿ ಬಸವರಾಜ ಸಬರದ, ಬಸವರಾಜ ದೇವಪ್ಪ ನಿಗದಿ, ಗಂಗಪ್ಪ ಶಿವಪ್ಪ ಶಿಂತ್ರಿ, ಮಹಾಬಳೇಶ್ವರ ಹಾಗೂ ಕಟ್ಟಡದ ನಕ್ಷೆ ತಯಾರಿಸಿದ ವಿವೇಕ ಪವಾರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ವಲಯ ಕಚೇರಿ ಸಂಖ್ಯೆ 3ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್‌ ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 5

  Sad
 • 0

  Frustrated
 • 1

  Angry

Comments:

0 comments

Write the first review for this !